ಲಕ್ನೋ: ಉತ್ತರಪ್ರದೇಶದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಅನುಮತಿಯೊಂದಿಗೆ ಲೌಡ್ ಸ್ಪೀಕರ್ ಬಳಕೆ ಮಾಡಬಹುದು ಎಂದು ಕಳೆದ ವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದು, ಯಾವುದೇ ಕಾರಣಕ್ಕೂ ಲೌಡ್ ಸ್ಪೀಕರ್ ಶಬ್ದ ಧಾರ್ಮಿಕ ಕೇಂದ್ರದ ಆವರಣದ ಹೊರಗೆ ಕೇಳಿಸುವಂತಿಲ್ಲ ಎಂದು ಸೂಚನೆ ನೀಡಲಾಗಿತ್ತು ಎಂದು ವರದಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಸುಮಾರು 17,000 ಲೌಡ್ ಸ್ಪೀಕರ್ ಗಳ ಶಬ್ದದ ಪ್ರಮಾಣ ಕಡಿಮೆ ಮಾಡಲಾಗಿದೆ. ಧಾರ್ಮಿಕ ಕೇಂದ್ರದ ಮುಖ್ಯಸ್ಥರು ಸ್ವಯಂ ಆಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ವರದಿ ಹೇಳಿದೆ.
ಸುಮಾರು 125 ಲೌಡ್ ಸ್ಪೀಕರ್ ಗಳನ್ನು ತೆಗೆದು ಹಾಕಲಾಗಿದೆ ಎಂದು ಹೆಚ್ಚುವರಿ ಡೈರೆಕ್ಟರ್ ಜನರಲ್ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ. ರಾಜ್ಯಾದ್ಯಂತ ಶಾಂತಿಯುತ ನಮಾಜ್ ನಡೆಸಲು ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಶಾಂತಿ ಸಭೆಯನ್ನು ಕೂಡಾ ನಡೆಸಲಾಗಿತ್ತು ಎಂದು ಎಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಉತ್ತರಪ್ರದೇಶದ ಶ್ರೀಕೃಷ್ಣ ಜನ್ಮಭೂಮಿಯಾದ ಮಥುರಾ ದೇವಸ್ಥಾನದಲ್ಲಿ ಈ ಮೊದಲು ಪ್ರತಿದಿನ ಬೆಳಗ್ಗೆ ಒಂದೂವರೆ ಗಂಟೆ ಧಾರ್ಮಿಕ ಹಾಡನ್ನು ಹಾಕಲಾಗುತ್ತಿದ್ದು, ಇದೀಗ ಅಲ್ಲಿನ ಲೌಡ್ ಸ್ಪೀಕರ್ ಅನ್ನು ತೆಗೆದು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಇದೊಂದು ಮಾದರಿಯ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಗೋರಖ್ ನಾಥ್ ದೇವಸ್ಥಾನದ ಲೌಡ್ ಸ್ಪೀಕರ್ ಶಬ್ದವನ್ನು ಕಡಿತಗೊಳಿಸಲಾಗಿದೆ. ಯಾವುದೇ ಸೂಕ್ತ ಪರವಾನಗಿ ಇಲ್ಲದೇ ಧಾರ್ಮಿಕ ಮೆರವಣಿಗೆ ನಡೆಸುವಂತಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳೆದ ವಾರ ಆದೇಶ ಹೊರಡಿಸಿದ್ದರು ಎಂದು ವರದಿ ತಿಳಿಸಿದೆ.