ನವದೆಹಲಿ: ಜಮ್ಮು-ಕಾಶ್ಮೀರದ ಕಥುವಾ ದಲ್ಲಿ ನಡೆದ 8ರ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಪ್ರಧಾನಿ ಮೋದಿ ಅವರ ದೀರ್ಘ ಮೌನವನ್ನು ಮಾಜಿ ಪ್ರಧಾನ್ ಮನಮೋಹನ್ ಸಿಂಗ್ ಪ್ರಶ್ನಿಸಿದ್ದಾರೆ. ಅವರ ಹೇಳಿಕೆಯಿಂದ ಕಿಡಿಕಿಡಿಯಾದ ಬಿಜೆಪಿ, ಮಾಜಿ ಪ್ರಧಾನಿಯ ವಿರುದ್ಧ ವಾಗ್ಧಾಳಿ ನಡೆಸಿದೆ.
ಬುಧವಾರ ಮಾತನಾಡಿದ ಸಿಂಗ್, “ಕಥುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣ ಸಂಬಂಧ ದೀರ್ಘವಾದ ಮೌನ ವಹಿಸಿರುವ ಪ್ರಧಾನಿ ಮೋದಿ ಮಾತಾಡಬೇಕಿದೆ. ನನಗೆ ನೀಡುತ್ತಿದ್ದ ಸಲಹೆಯನ್ನು ಅವರು ಈಗ ಪಾಲಿಸಬೇಕಿದೆ’ ಎಂದಿದ್ದಾರೆ. ಮೋದಿ ಶುಕ್ರವಾರವಾದರೂ ಮೌನ ಮುರಿದರಲ್ಲ, ಅದಕ್ಕೆ ಸಂತೋಷ ಆಯಿತು. ನನ್ನನ್ನು ಮೌನಮೋಹನ್‌ಸಿಂಗ್ ಎನ್ನುತ್ತಿದ್ದವರು ಈಗ ಮಾತನಾಡಲಿ. ಘಟನೆ ನಡೆದ ಬೆನ್ನಲ್ಲೇ ಪ್ರತಿಕ್ರಿಯಿಸದಿದ್ದರೆ, ತಪ್ಪು ಮಾಡಿದರೂ ಯಾವುದೇ ಶಿಕ್ಷೆ ಎದುರಿಸಬೇಕಾಗಿಲ್ಲ ಎಂದು ಆರೋಪಿಗಳು ಭಾವಿಸತೊಡಗುತ್ತಾರೆ. ಅಧಿಕಾರದಲ್ಲಿದ್ದವರು ಸಮಯಕ್ಕೆ ಸರಿಯಾಗಿ ಮಾತನಾಡಲೇಬೇಕು ಎಂದು ಸಿಂಗ್ ಹೇಳಿದ್ದಾರೆ.
ಹೋಲಿಕೆ ಮಾಡಬೇಡಿ: ಮಾಜಿ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, “ನಿಮ್ಮ ಮತ್ತು ಮೋದಿ ಆಡಳಿತಾವಧಿಯನ್ನು ಹೋಲಿಕೆ ಮಾಡಬೇಡಿ’ ಎಂದು ಹೇಳಿದೆ. ಪ್ರಧಾನಿ ಮೋದಿ ಅತ್ಯಾಚಾರ ಪ್ರಕರಣವನ್ನು ಹೀನ ಮತ್ತು ಅಮಾನವೀಯ ಎಂದು ಹೇಳುವ ಮೂಲಕ ಕಟು ಪದಗಳಿಂದ ಖಂಡಿಸಿದ್ದಾರೆ. ಹಾಗಾಗಿ, ದಯವಿಟ್ಟು ಮನಮೋಹನ್‌ಸಿಂಗ್ ಅವರು ತಮ್ಮ ದಿನಗಳನ್ನು ಮೋದಿಜೀ ದಿನಗಳೊಂದಿಗೆ ಹೋಲಿಸುವುದು ಬೇಡ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನ್ಯಾಯಕ್ಕಾಗಿ ರ್ಯಾಲಿ
ಕಥುವಾ, ಉನ್ನಾವ್ ಮತ್ತು ಸೂರತ್‌ನಲ್ಲಿ ನಡೆದ ಅತ್ಯಾಚಾರ, ಹತ್ಯೆ ಪ್ರಕರಣಗಳನ್ನು ಖಂಡಿಸಿ ಬುಧವಾರ ನ್ಯೂಯಾರ್ಕ್‌ನಲ್ಲಿ 20ಕ್ಕೂ ಹೆಚ್ಚು ಸಂಘಟನೆಗಳು ಬೃಹತ್ ರ್ಯಾಲಿ ನಡೆಸಿದವು. “ನ್ಯಾಯಕ್ಕಾಗಿ ಒಗ್ಗಟ್ಟು ರ್ಯಾಲಿ: ಭಾರತದಲ್ಲಿನ ಅತ್ಯಾಚಾರಕ್ಕೆ ಖಂಡನೆ’ ಎಂಬ ಬ್ಯಾನರ್‌ನಡಿ ಯೂನಿಯನ್ ಸ್ಕ್ವೇರ್‌ನ ಮಹಾತ್ಮಗಾಂಧಿ ಪ್ರತಿಮೆ ಮುಂದೆ ನಡೆದ ರ್ಯಾಲಿಯಲ್ಲಿ ವಿವಿಧ ಸಂಘಸಂಸ್ಥೆಗಳು, ದೇವಾಲಯಗಳ ಮಂಡಳಿಗಳು ಪಾಲ್ಗೊಂಡಿದ್ದವು.