Advertisement

ದೇವರ ದಾಸಿಮಯ್ಯರ ಸಂದೇಶ ಪಾಲಿಸಿ

02:25 PM Apr 07, 2022 | Team Udayavani |

ಹಾವೇರಿ: ಆದ್ಯ ವಚನಕಾರ ದೇವರ ದಾಸಿಮಯ್ಯನವರ ವಚನಗಳನ್ನು ಓದುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಸಮಾನತೆಯ ಸಮಾಜಕ್ಕಾಗಿ ಶ್ರಮಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ|ಎನ್‌.ತಿಪ್ಪೇಸ್ವಾಮಿ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಚನಕಾರರು ಸಮಾನತೆಯನ್ನು ಪ್ರತಿಪಾದಿಸಿ, ಮೌಡ್ಯವನ್ನು ವಿರೋಧಿ ಸಿ ಸಮಾಜದಲ್ಲಿ ವಿಚಾರ ಕ್ರಾಂತಿ ಆರಂಭಿಸಿದರು. ನಿಗದಿತ ಕೋಮು, ವರ್ಗಗಳನ್ನು ಗುರಿಯಾಗಿಸದೇ ಇಡೀ ಸಮಾಜದಲ್ಲಿ ಜಾಗೃತಿ ಮೂಡಿಸಿ ಜ್ಞಾನ ಮಾರ್ಗದ ಕಡೆಗೆ ಶಿವಶರಣರು ಕರೆದೊಯ್ದರು. ಮೌಲ್ಯಾಧಾರಿತ ಸಮಾಜ ರಚನೆಯ ತೀವ್ರ ಅಗತ್ಯ ಇರುವ ಈಗಿನ ಕಾಲಘಟ್ಟದಲ್ಲಿ ದಾರ್ಶನಿಕರ ಸಂದೇಶಗಳ ಪಾಲನೆಯಾಗಬೇಕೆಂದರು.

ನೇಕಾರ ಮತ್ತು ದೇವಾಂಗ ಸಮಾಜದ ಯುವ ಸಮೂಹ ದೇವರ ದಾಸಿಮಯ್ಯನವರ ವಚನಗಳ ಮಾರ್ಗದಲ್ಲಿ ನಡೆದು, ಉನ್ನತ ಶಿಕ್ಷಣ ಪಡೆದು ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜ ಹಾಗೂ ಸಮುದಾಯಕ್ಕೆ ಕೊಡುಗೆ ನೀಡಬೇಕೆಂದು ಕಿವಿಮಾತು ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ವಿಭಾಗದ ಪ್ರಾಧ್ಯಾಪಕ ಡಾ|ನಾಗರಾಜ ಹಳ್ಳಿಯವರ ಮಾತನಾಡಿ, ದೇವರ ದಾಸಿಮಯ್ಯ ಆರಂಭಿಕ ವಚನ ಸಾಹಿತ್ಯಕ್ಕೆ ಮುನ್ನಡಿ ಬರೆದು, 12ನೇ ಶತಮಾನದಲ್ಲಿ ನಡೆದ ವಚನ ಕ್ರಾಂತಿಗೆ ನೀಲನಕ್ಷೆ ಹಾಕಿದವರು. ಪ್ರತಿಯೊಬ್ಬ ಮಾನವನು ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ಪ್ರಪಂಚಕ್ಕೆ ತಿಳಿಸಿದ್ದಾರೆ. ಅಲ್ಲದೇ, ರಾಮನಾಥ ನಾಮಾಂಕಿತದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ ಎಂದರು.

Advertisement

ದೇವರ ದಾಸಿಮಯ್ಯ ಮೊಟ್ಟ ಮೊದಲ ವಚನಕಾರರು. ದಾಸಿಮಯ್ಯನವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಫೂರ್ತಿಯ ಚಿಲುಮೆಯಾಗಿವೆ. ಆದರೆ, ವಿಷಾದದ ಸಂಗತಿಯೆಂದರೆ ಇವರ ಬಗ್ಗೆ ಹೆಚ್ಚಿಗೆ ಪ್ರಚಾರಗಳಾಗಲಿಲ್ಲ. ತಡವಾಗಿಯಾದರೂ ಈಗಿನ ಕೆಲವರು ದೇವರ ದಾಸಿಮಯ್ಯನವರ ವಚನಗಳನ್ನು ಹೊರತರುತ್ತಿದ್ದಾರೆ. ಇತಿಹಾಸ ಪುರಾಣದಲ್ಲಿ ಇವರ ಬಗ್ಗೆ ತಿಳಿದುಕೊಳ್ಳಬೇಕು. ಕನ್ನಡ ನಾಡಿನ ಶಿವಶರಣರಲ್ಲಿ ದೇವರ ದಾಸಿಮಯ್ಯನವರು ಒಬ್ಬ ಐತಿಹಾಸಿಕ ಪುರುಷನೆಂಬುದನ್ನು ಹಲವಾರು ಶಿಲಾ ಶಾಸನಗಳು ತಿಳಿಸುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಾದ ಅಕ್ಷತಾ ಬಳ್ಳಿ, ಸೃಜನ ಮತ್ತೂರ, ಹರೀಶ ಗಂಜಿ, ಬನಶ್ರೀ ಮದ್ಲಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದೇವಗಿರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಹೊಳಲ, ದೇವಾಂಗ ಸಮಾಜದ ತಾಲೂಕು ಅಧ್ಯಕ್ಷ ಸೋಮಣ್ಣ ಆರ್‌.ಕುದರಿ, ಶೇಕಪ್ಪ ಬಳ್ಳಿ, ಸಮಾಜದ ಮುಖಂಡರಾದ ಶೇಕಪ್ಪ ಬಳ್ಳಿ, ಗಿರೀಶ ಮದ್ಲಿ, ಮಹದೇವಪ್ಪ ಮಂಡಕ್ಕಿ, ಬಸವರಾಜ ಗುಲಗಂಜಿ, ಜಗದೀಶ ಹಾವನೂರು ಇತರರು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next