ಬೆಂಗಳೂರು: ಜನಪದ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಕಾರಣದಿಂದಲೇ ದೇಶದಲ್ಲಿ ಕೊಮು ಗಲಭೆ ಮತ್ತು ಅಶಾಂತಿ ಉಂಟಾಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯಪಟ್ಟಿದ್ದಾರೆ. ಡಾ.ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಪೂರ್ವಿಕರ ಆಚಾರ, ವಿಚಾರ ಮತ್ತು ಜೀವನಶೈಲಿ ಬಿಂಬಿಸುವ ಕೆಲಸಗಳನ್ನು ಜನಪದ ಕಲೆಗಳು ಮಾಡುತ್ತಿದ್ದವು. ಅಕ್ಷರ ಜ್ಞಾನ ಇಲ್ಲದ ಕಾಲದಲ್ಲಿ ಜನಸಾಮಾನ್ಯರು ಕಟ್ಟಿ ಬೆಳೆಸಿದ ಶ್ರೀಮಂತ ಸಂಸ್ಕೃತಿಯೇ ಈ ಜನಪದ. ಅಂತಹ ಕಲಾ ಸಂಸ್ಕೃತಿ ಆಧುನಿಕ ಯುಗದಲ್ಲಿ ಕಳೆದುಹೋಗುತ್ತಿರುವ ಕಾರಣದಿಂದಲೇ ದೇಶದೊಳಗೆ ಕೋಮು ಗಲಭೆ, ಅಶಾಂತಿ ಉಂಟಾಗಿದೆ ಎಂದು ಹೇಳಿದರು.
ಪದ್ಮಶ್ರೀ ದೊರೆಯಲಿ: ಗಾಯಕಿ ಬಿ.ಕೆ.ಸುಮಿತ್ರಾ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಆದರೆ, ಅದಕ್ಕಿಂತಲೂ ಉತ್ಕೃಷ್ಟವಾದ ಪ್ರಶಸ್ತಿಗೆ ಅವರು ಅರ್ಹರಾಗಿದ್ದಾರೆ. ಒಂದು ವೇಳೆ ನಾನೇದರೂ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಇದ್ದಿದ್ದರೆ ಗ್ರಾಮೀಣ ಪ್ರತಿಭೆಗಳಿಗೆ ಉನ್ನತ ಮಟ್ಟದ ಪ್ರಶಸ್ತಿಗಳನ್ನು ನೀಡುತ್ತಿದ್ದೆ. ಗಾಯಕರಾದ ಬಿ.ಕೆ.ಸುಮಿತ್ರಾ ಹಾಗೂ ಹಂಸಲೇಖ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಸರುಗಳಿಸಿರುವ ಗಾನ ಕೋಗಿಲೆ ಗಂಗಮ್ಮ ಅವರು ಪ್ರದ್ಮಶ್ರೀ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಆದಷ್ಟು ಶೀಘ್ರವಾಗಿ ಅವರಿಗೆ ಈ ಪ್ರಶಸ್ತಿ ದೊರೆಯಬೇಕು ಎಂದು ಆಶಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಮಾತನಾಡಿ, ಜನಪದ ಸಾಹಿತ್ಯ ಸಂದರ್ಭಕ್ಕಾನುಸಾರವಾಗಿ ರಚಿತವಾಗಿರುವುದು. ಒಬ್ಬರ ಬಾಯಿಯಿಂದ ಮತ್ತೂಬ್ಬರ ಬಾಯಿಗೆ ಹರಿದು ಬಂದ ಜನಪದ ಸಾಹಿತ್ಯ ಇಲ್ಲಿಯವರೆಗೂ ಬದುಕಿದೆ. ಅದನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ಇಂದಿನ ಪೀಳಿಗೆ ಮಾಡಬೇಕಿದೆ ಎಂದರು.
ಜಾನಪದ ಕಲೆಗಳು ಗ್ರಾಮೀಣ ಕಲಾಪ್ರಕಾರಗಳ ಜೀವಂತಿಕೆಯ ದ್ಯೊತಕ. ಇಂತಹ ಕಲೆಗಳ ಬಗ್ಗೆ ಯುವ ಜನತೆಯಲ್ಲಿ ಆಸಕ್ತಿ ಬೆಳೆಯಬೇಕು. ಯುವ ತಲೆಮಾರಿಗೆ ಅದರಲ್ಲೂ ದೊಡ್ಡ ನಗರಗಳಲ್ಲಿ ವಾಸಿಸುವವರಿಗೆ ಜನಪದ ಕಲೆಗಳ ಪರಿಚಯವೇ ಇರುವುದಿಲ್ಲ. ಅವರಿಗೆ ಜನಪದ ಕಲೆಗಳನ್ನು ತಲುಪಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಗೀತ ಸಂಯೋಜಕ ಹಂಸಲೇಖ ಹಾಗೂ ಗಾಯಕಿ ಬಿ.ಕೆ.ಸುಮಿತ್ರ ಅವರಿಗೆ ಡಾ.ವೇಮಗಲ್ ನಾರಾಯಣಾÌಮಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಪ್ರತಿಷ್ಠಾನದ ಅಧ್ಯಕ್ಷ ಡಾ.ವೇಮಗಲ್ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.