Advertisement

ಜನಪದ ಸಂಸ್ಕೃತಿ ರಕ್ಷಣೆ ಅಗತ್ಯ

05:47 PM Apr 03, 2022 | Team Udayavani |

ಮಸ್ಕಿ: ಆಧುನಿಕ ತಂತ್ರಜ್ಞಾನತೆಯ ಆರ್ಭಟದ ಫಲವಾಗಿ ಗ್ರಾಮೀಣ ಕಲೆ, ಜನಪದ ಸಂಸ್ಕೃತಿ ಮರೆಯಾಗುತ್ತಿವೆ. ಸಾಮರಸ್ಯ ಜೀವನದ ಪಾಠ ಹೇಳುವ ಜಾನಪದ ಸಾಹಿತ್ಯದ ರಕ್ಷಣೆಗೆ ಅಗತ್ಯವಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹೇಳಿದರು.

Advertisement

ಪಟ್ಟಣದ ಗಚ್ಚಿನಮಠದಲ್ಲಿ ಬಹುರೂಪಿ ಚೌಡಯ್ಯ ಹಗಲು ವೇಷಗಾರರ ಟ್ರಸ್ಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಾನಪದ ಕಲಾ ಸಂಭ್ರಮ-2022 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಟಿವಿ, ಮೊಬೈಲ್‌ ಹಾವಳಿಯಿಂದ ಯುವ ಜನಾಂಗ ಹಾದಿ ತಪ್ಪುತ್ತಿದೆ. ತಂತ್ರಜ್ಞಾನ ಒಳ್ಳೆತನಕ್ಕೆ ಬಳಕೆಗಿಂತ ಕೆಟ್ಟತನಕ್ಕೆ ಹೆಚ್ಚಾಗಿ ಬಳಕೆಯಾಗುತ್ತಿದೆ. ಹೀಗಾಗಿ ಈ ಹಿಂದೆ ಹಿರಿಯರು ರಚಿಸಿದ ಜಾನಪದ ಕಲೆಯಲ್ಲಿ ಒಗ್ಗಟ್ಟಿನ ಮಂತ್ರವಿದೆ. ಸಾಮಾಜಿಕ ಮೌಲ್ಯಗಳು ಅಡಕವಾಗಿವೆ. ಹೀಗಾಗಿ ಇಂತಹ ಸಾಹಿತ್ಯದ ಬಗ್ಗೆ ತಿಳಿವಳಿಕೆ ಹೇಳುವ ಕೆಲಸ ಅನಿವಾರ್ಯವಾಗಿದೆ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ತತ್ವಪದ, ಶೋಬಾನ ಪದ ಸೇರಿದಂತೆ ಇತರೆ ಹಾಡುಗಾರಿಕೆಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.

ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರು, ಜಾನಪದ ಅಕಾಡೆಮಿ ಸದಸ್ಯ ನಾರಾಯಣಪ್ಪ ಮಾಡಸಿರವಾರ ಮಾತನಾಡಿದರು. ಡಾ| ಶಿವಶರಣಪ್ಪ ಇತ್ಲಿ, ದಾಸಪ್ಪ ನಿಲೋಗಲ್‌, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಂಬಣ್ಣ ಹಸಮಕಲ್‌, ಕಸಾಪ ತಾಲೂಕು ಘಟಕದ ಅಧ್ಯಕ್ಷ ಆದಪ್ಪ ಹೆಂಬಾ, ಬಹುರೂಪಿ ಚೌಡಯ್ಯ ಹಗಲು ವೇಷಗಾರರ ಟ್ರಸ್ಟ್‌ ಅಧ್ಯಕ್ಷ ಅಮರೇಶ ಹಸಮಕಲ್‌ ಸೇರಿದಂತೆ ಇನ್ನಿತರರಿದ್ದರು. ಡೊಳ್ಳು ಕುಣಿತ, ಹಲಿಗೆ ಮೇಳಾ, ತತ್ವ ಪದ, ಗೀಗೀ ಪದ, ಹಗಲು ವೇಷಗಾರರ ತಂಡ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಪ್ರದರ್ಶನ ನೀಡಿದವು

Advertisement

Udayavani is now on Telegram. Click here to join our channel and stay updated with the latest news.

Next