ಬೆಂಗಳೂರು: ಒಂದೆಡೆ ಯುದ್ಧ ವಿಮಾನಗಳ ಆರ್ಭಟ, ಮತ್ತೂಂದೆಡೆ ವಿದೇಶಿ ವಾದ್ಯಗೋಷ್ಠಿ. ಇವುಗಳ ನಡುವೆ “ಹಾ ಹಾ ಹಾ ರುದ್ರ … ಓ ಓ ಓ ರುದ್ರ…’ ಎಂಬ ವೀರಗಾಸೆ, ಭರ್ಜರಿ ಡೊಳ್ಳಿನ ಸದ್ದು ಸಾಂಸ್ಕೃತಿಕ ಸಮಾಗಮಕ್ಕೆ ಸಾಕ್ಷಿಯಾಯಿತು.
ಏರೋ ಇಂಡಿಯಾದಲ್ಲಿ ಇಂಥದ್ದೊಂದು ಪ್ರಯೋಗ ದೇ ಮೊದಲ ಬಾರಿ ನಡೆದಿದೆ ಎನ್ನಲಾಗಿದೆ. ಜಾಗತಿಕ ಮಟ್ಟದ ನೂರಾರು ಪ್ರತಿಷ್ಠಿತ ಕಂಪನಿಗಳು ಸಾವಿರಾರು ಕೋಟಿ ರೂ. ಹೂಡಿಕೆ ಮಾಡುತ್ತಿರುವ ಆ ಅದ್ದೂರಿ ವೈಮಾನಿಕ ಕ್ಷೇತ್ರದ ವಾಣಿಜ್ಯ ಮೇಳವು ಈ ಬಾರಿ ಅಪ್ಪಟ ಜಾನಪದ ಕಲೆಗಳಿಗೆ ವೇದಿಕೆಯಾಗಿತ್ತು.
ಕರ್ನಾಟಕದ ಸುಪ್ರಸಿದ್ಧ ಜಾನಪದ ಕಲೆಗಳಾದ ಡೊಳ್ಳುಕುಣಿತ, ವೀರಗಾಸೆ, ಕಂಸಾಳೆ ಹಾಗೂ ಕೋಲಾಟ ತಂಡಗಳನ್ನು ರಾಜ್ಯದ ವಿವಿಧ ಭಾಗಗಳಿಂದ ಕರೆಸಿದ್ದು, ಈ ತಂಡಗಳು ಏರೋ ಇಂಡಿಯಾದಲ್ಲಿ ಪ್ರದರ್ಶನ ನೀಡುವ ಮೂಲಕ ನಾಡಿನ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸುತ್ತಿವೆ. ಬುಧವಾರ ಉದ್ಘಾಟನಾ ಸಮಾರಂಭದಲ್ಲಿ ವಾಯುನೆಲೆಗೆ ಅತಿಥಿಗಳು ಆಗಮಿಸುತ್ತಿದ್ದಂತೆ ಮದ್ದಳೆ ವಾದ್ಯಗೋಷ್ಠಿಗಳು ಮೊಳಗಿದವು.
ಆ ನಂತರ, ಎಬಿ ಹಾಲ್ ಮುಂಭಾಗದಲ್ಲಿ ಕೋಲಾಟ, ಡ್ರೋಣ್ ಒಲಿಂಪಿಕ್‌ನಲ್ಲಿ ತಮಟೆ ಸೇರಿದಂತೆ ಪ್ರದರ್ಶನದಲ್ಲಿ ನಡೆದ ಹಲವು ಪ್ರಮುಖ ಘಟ್ಟಗಳಿಗೆ ಈ ದೇಶೀ ಕಲೆಗಳು ಸಾಕ್ಷಿಯಾದವು. ಈ ಪ್ರದರ್ಶನವೂ ಶುಕ್ರವಾರ ಕೂಡ ಮುಂದುವರೆಯಲಿದ್ದು, ಗುರುವಾರ ಏರೋ ಇಂಡಿಯಾಗೆ ಬಂದಿದ್ದ, ವಿದೇಶಿಗರು ಕಣ್ತುಂಬಿಕೊಂಡು ವಿಡಿಯೋ ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ವಿರಾಮದ ವೇಳೆ ಸಾಂಸ್ಕೃತಿಕ ರಂಗು: ನಿತ್ಯ ಬೆಳಗ್ಗೆ 10ರಿಂದ 12 ಹಾಗೂ ಮಧ್ಯಾಹ್ನ 2ರಿಂದ 5 ಗಂಟೆವರೆಗೂ ವಾಯು ಸೇನೆಗಳ ಯುದ್ಧ ವಿಮಾನ ಹಾರಾಟ ಪ್ರದರ್ಶನವಿರುತ್ತದೆ. ಉಳಿದಂತೆ 12ರಿಂದ 2ಗಂಟೆವರೆಗೂ ವಿರಾಮ ಅವಧಿ ಇದ್ದು, ಉಟೋಪಚಾರ ಸೇವನೆಗೆ ಸಮಯವಿರುತ್ತದೆ. ಈ ಸಮಯದಲ್ಲಿ ಜಾನಪದ ಕಲೆಗಳ ಪ್ರದರ್ಶನ ಏರ್ಪಪಡಿಸಲಾಗಿತ್ತು. ಗುರುವಾರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಣ್ಣೂರಿನ ಕಣ್ಣೇಶ್ವರ ಜಾನಪದ ತಂಡದ ಸದಸ್ಯರು ಡೊಳ್ಳು ಕುಣಿತ ಹಾಗೂ ತುಮಕೂರಿನ ವೀರಗಾಸೆ ತಂಡಗಳು ಪ್ರದರ್ಶನ ನೀಡಿದವು.
ಭಾರತ-ಯುಎಸ್ ಜುಗಲ್‌ಬಂದಿ: ಈ ಪ್ರದರ್ಶನದಲ್ಲಿ ಭಾರತೀಯ ವಾಯು ಸೇನೆ ಮತ್ತು ಯುನೈಟೆಡ್ ಸ್ಟೇಟ್ಸ್ ವಾಯು ಸೇನೆಯ ಬ್ಯಾಂಡ್‌ಗಳ ಜುಗಲ್ ಬಂಧಿ ಪ್ರದರ್ಶನ ನಡೆಯುತ್ತಿದೆ. ಎರಡು ಸೇನೆಯ ಸೈನಿಕ ಕಲಾವಿದರು ಗಿಟಾರ್, ಡ್ರಂಸೆಟ್ ಸಹಿತವಾಗಿ ಆಧುನಿಕ ವಾದನಗಳ ಮೂಲಕ ಪ್ರೇಕ್ಷಕರಿಗೆ ಸಂಗೀತರ ರಸದೌತಣ ನೀಡಿದರು. ಭಾರತೀಯ ವಾಯುಪಡೆಯ ಬ್ಯಾಂಡ್ ಬಾರಿಸಿದ ನಂತರ ಯುನೈಟೆಡ್ ಸ್ಟೇಟ್ಸ್‌ನ ವಾಯುಪಡೆ ಬ್ಯಾಂಡ್‌ಗಳನ್ನು ಅವರೇ ಶೈಲಿಯಲ್ಲಿ ಬಾರಿಸುತ್ತಿದ್ದದ್ದು ವಿಶೇಷವಾಗಿತ್ತು.
ವಿವಿಧ ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದೇವೆ. ಆದರೆ, ಇಂತಹ ದೊಡ್ಡ ವೈಮಾನಿಕ ಪ್ರದರ್ಶನದಲ್ಲಿ ನಮ್ಮ ಕಲೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಖುಷಿಯಿಂದ ಭಾಗವಹಿಸುತ್ತಿದ್ದೇವೆ. ಜತೆಗೆ ವಿಮಾನ ಹಾರಟ ಕಣ್ತುಂಬಿಕೊಳ್ಳುತ್ತಿದ್ದು, ಅವಕಾಶ ಮಾಡಿಕೊಟ್ಟ ವಾಯುಸೇನೆಗೆ ಧನ್ಯವಾದಗಳು.
-ತಿಕ್ಕಣ್ಣ, ಕಣ್ಣೇಶ್ವರ ಜಾನಪದ ತಂಡ, ಸಾಗರ
* ಜಯಪ್ರಕಾಶ್ ಬಿರಾದಾರ್