ನಮ್ಮ ಮಣ್ಣಿನ ಜನಪದ ಕಲೆಗಳು ನಮ್ಮ ಸಂಸ್ಕೃತಿ,ಆಚಾರ ವಿಚಾರಗಳನ್ನು ತಲೆಮಾರಿನಿಂದ ತಲೆಮಾರಿಗೆ ಹೊತ್ತು ಸಾಗುವಂತವು. ಅವುಗಳಿಗೆ ಅದರದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ನಮ್ಮ ಪೂರ್ವಜರ ಕಾಲದಿಂದಲೂ ಈ ಜನಪದ ಕಲೆಗಳಿಗೆ ಒಂದು ಪ್ರಾಮುಖ್ಯತೆ ಇದೆ. ಸಾವಿರಾರು ವರ್ಷಗಳಿಂದಲೂ ಜನಪದ ಕಲೆ ಎಂಬುದು ಜನಪದರ ಬದುಕಾಗಿತ್ತು ಎಂದರೆ ತಪ್ಪಾಗಲಾರದು. ಜನಪದರ ಪ್ರತಿ ಹೆಜ್ಜೆಯಲ್ಲೂ ನಾವು ಜನಪದ ಕಲೆ, ಸಂಸ್ಕೃತಿಯ ಅಚ್ಚನ್ನೂ ಕಾಣಬಹುದು.
ಕಲೆಗಳಿಗೂ ಜನರ ಜೀವನಕ್ಕೂ ಅವಿನಾಭಾವವಾದ ಸಂಬಂಧವಿದೆ. ನಮ್ಮ ಪೂರ್ವಜರೆಲ್ಲಾ ನಿತ್ಯ ದುಡಿಮೆಯ ಆಯಾಸದಿಂದ ಬೇಸರ ನಿವಾರಣೆ ಮಾಡಿಕೊಳ್ಳಲು ಕಲೆಗಳ ಮೊರೆ ಹೋಗುತ್ತಿದ್ದರು. ಕಲೆ ಎಂಬುದು ಮನಸ್ಸಿಗೆ ನೆಮ್ಮದಿಯನ್ನು ನೀಡಿ ಅವರ ಆಯಾಸವನ್ನು ಕಡಿಮೆ ಮಾಡುತ್ತಿತ್ತು. ಪ್ರತಿಯೊಂದು ಕಲೆಯೂ ಅದರದೇ ಆದ ವೈಶಿಷ್ಟ್ಯತೆಯಿಂದ ಕೂಡಿದಂತವು.
ಜನಪದ ಎಂಬುದು ಸ್ವತಃ ನಮ್ಮ ಪೂರ್ವಜರ ಪದಗಳ ಜೋಡುವಿಕೆಯಿಂದ ಮತ್ತು ಅವರ ನಿತ್ಯ ಕಾರ್ಯ ಕೆಲಸಗಳಿಂದ ಮೂಡಿಬರುತ್ತಿದ್ದ ಒಂದು ಸಂಸ್ಕೃತಿಯೇ ಮುಂದೆ ಜನಪದ ಕಲೆಯಾಗಿ ಸ್ವರೂಪಗೊಂಡಿತು. ಅನಂತರ ಬಯಲಾಟ, ಯಕ್ಷಗಾನ, ಡೊಳ್ಳು ಕುಣಿತ, ವೀರಗಾಸೆ, ಭರತನಾಟ್ಯ, ಕಂಸಾಳೆ ಹೀಗೆ ಇನ್ನು ಮುಂತಾದಂತಹ ಜನಪದ ಕಲೆಗಳು ಹುಟ್ಟಿಕೊಂಡವು.
ಆದರೆ ಈ ಪ್ರಸ್ತುತ ದಿನಗಳಲ್ಲಿ ಜನಪದ ಕಲೆ ಎಂದರೆ ಎಷ್ಟು ಜನಕ್ಕೆ ಗೊತ್ತಿಲ್ಲದಂತಹ ಸಂಗತಿ ಆಗಿದೆ. ಏಕೆಂದರೆ ನಗರ ಪಟ್ಟಣಗಳಲ್ಲಿ ಜನರು ವೈಜ್ಞಾನಿಕವಾಗಿ ಆಧುನಿಕ ಯುಗಕ್ಕೆ ಬದಲಾಗುತ್ತಿದ್ದಾರೆ. ಗ್ರಾಮೀಣರಲ್ಲಿ ದೈನಿಕ ಬದುಕು ಆರಂಭವಾಗುವುದೇ ಇಂತಹ ಜನಪದ ಹಾಡು ಹಬ್ಬ ಆಚರಣೆಗಳಿಂದ. ಆದರೆ ಪ್ರಸ್ತುತ ಅಲ್ಲಿಯೂ ತೀರಾ ಕಡಿಮೆಯಾಗುತ್ತಿರುವುದು ಕಾಣಬಹುದಾಗಿದೆ. ಇವತ್ತಿನ ವೈಜ್ಞಾನಿಕ ಯುಗದಿಂದ ನಮ್ಮ ಜನ ಸಾಂಸ್ಕೃತಿಕ ಜನಪದ ಕಲೆಗಳನ್ನು ಮರೆತು ಆಧುನಿಕ ಯುಗದ ಹಿಂದೆ ಓಡುತ್ತಿದ್ದಾರೆ.
ಜನಪದ ಪ್ರಕಾರವೂ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಇದನ್ನು ಉಳಿಸುವುದು ನಮ್ಮ ಕೈಯಲ್ಲಿದೆ. ಗ್ರಾಮೀಣ ಕಲಾವಿದರನ್ನೂ ಜನಪದರನ್ನು ಹುಡುಕಿ ಅವರಿಗೆ ಪ್ರಶಸ್ತಿ ಪುರಸ್ಕಾರ ನೀಡಿ, ಕಣ್ಮರೆಯಾಗುತ್ತಿರುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಡೆ ನಾವು ಗಮನ ಹರಿಸಬೇಕು. ಜನಪದ ಕಲಾವಿದರು, ಸಂಘ ಸಂಸ್ಥೆಗಳತ್ತ ಸರಕಾರ ಕೂಡ ಇನ್ನಷ್ಟು ಗಮನಹರಿಸಬೇಕಿದೆ.
ದೀಪಿಕ. ಕೆ. ಆರ್.,
ತುಮಕೂರು