ಬೀದರ: ಜಾನಪದರಿಂದ ಹುಟ್ಟಿಕೊಂಡಿರುವ ನೃತ್ಯ, ಬಿಸುವ-ಕುಟ್ಟುವ, ಜೋಗುಳ ಪದ, ನೃತ್ಯದಂತಹ ವಿವಿಧ ಕಲೆಗಳು ನಮ್ಮ ನಾಗರಿಕತೆ ಸಂಕೇತವಾಗಿವೆ ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಹೇಳಿದರು.
ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನ್ನಡಾಂಬೆ ಗೆಳೆಯರ ಬಳಗದ ವತಿಯಿಂದ ನಗರದ ಸಿದ್ಧಾರೂಢ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಯುವಜನ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಮತ್ತು ಹಳ್ಳಿ ಬದುಕಿನಲ್ಲಿ ಮೂಡಿಬಂದಿರುವ ವಿವಿಧ ಜಾನಪದ ಕಲೆಗಳು ನಮ್ಮ ಸಂಸ್ಕೃತಿ ಪ್ರತಿಬಿಂಬಿಸುತ್ತವೆ.
ಸಮಾಜದ ಅಂತಕರಣವನ್ನು ಇವುಗಳಲ್ಲಿ ಕಾಣಬಹುದು. ಈ ಕಲೆಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ. ಯುವ ಜನಾಂಗ ವಿದೇಶಿ ಅನುಕರಣೆ ಬಿಟ್ಟು, ದೇಶಿ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಾನಪದ ಕಲೆಗಳನ್ನು ಅನುಕರಿಸುವಂತಾಗಬೇಕು ಎಂದು ಹೇಳಿದರು.
ಸಿದ್ಧಾರೂಢ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿ ಮಾತನಾಡಿ, ಜನಪದ ಸಂಸ್ಕೃತಿ ಬೇವರಿನ ಮೂಲಕ ಹುಟ್ಟಿಕೊಂಡಿದೆ. ಶ್ರಮಜೀವಿಗಳಾಗಿದ್ದ ನಮ್ಮ ಪೂರ್ವಜರು ದುಡಿಮೆಯಿಂದ ಬದುಕು ಕಟ್ಟಿಕೊಳ್ಳುವ ಬಗೆಯನ್ನು ತಮ್ಮ ಅನುಭವಗಳನ್ನು ಜನಪದ ಗೀತೆ, ಗಿಗಿ ಪದ, ತತ್ವ ಪದಗಳ ಮೂಲಕ ಜನರಿಗೆ ತೋರಿಸಿಕೊಟ್ಟಿದ್ದಾರೆ. ಜನರು ಇಂತಹ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಶಾಸಕ ರಹೀಮ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಶಿವಯ್ಯಸ್ವಾಮಿ ಮಾತನಾಡಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್.ಸೆಲ್ವಮಣಿ, ಸಹಾಯಕ ಆಯುಕ್ತ ಶಿವಕುಮಾರ ಶಿಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ರಾಜ್ಯ ಪ್ರಶಸ್ತಿ ಪುರಸ್ಕೃತ ರಾಜು ಪಾಸಾರೆ, ಮಹೇಶ ಗೋರನಾಳಕರ, ಪ್ರಭುಶೆಟ್ಟಿ ಸೈನಿಕಾರ, ಸುನೀಲ ಭಾವಿಕಟ್ಟಿ, ಮೂಗಲಪ್ಪ, ಡಾ| ಪ್ರಭುಲಿಂಗ ಬಿರಾದಾರ, ಫರ್ನಾಂಡಿಸ್ ಹಿಪ್ಪಳಗಾಂವ ಇದ್ದರು. ಇಲಾಖೆ ಸಹಾಯಕ ನಿರ್ದೇಶಕ ಅಮೃತ ಅಷ್ಠಗಿ ಸ್ವಾಗತಿಸಿದರು. ವಿರೂಪಾಕ್ಷ ಗಾದಗಿ ನಿರೂಪಿಸಿದರು. ಸಾಗರ ವಂದಿಸಿದರು.
ಮೇಳದಲ್ಲಿ ವಿವಿಧ ಕಲಾ ತಂಡಗಳಿಂದ ಜನಪದ ನೃತ್ಯ, ಜನಪದ ಗೀತೆ, ಗಿಗಿ ಪದ, ಸೊಬಾನೆ ಪದ, ಬಿಸುಕಲ್ಲಿನ ಪದ, ಭಜನೆ, ಲಂಬಾಣಿ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.