ಕಲಬುರಗಿ: ಜನ ಜೀವನದ ಭಾಗವೇ ಆಗಿರುವ ಜಾನಪದ ಕಲೆ ವಿನಾಶದತ್ತ ಸಾಗುತ್ತಿದ್ದು, ಇದನ್ನು ಉಳಿಸುವ ನಿಟ್ಟಿನಲ್ಲಿ ಯುವಕರು ಆಸಕ್ತಿ ವಹಿಸಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಶರಣಕುಮಾರ ಮೋದಿ ಹೇಳಿದರು.
ಗುರುವಾರ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವ ಸ್ಪಂದನ ಕೋಶದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2017-18ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಾನಪದ ಕಲೆ ಅಳಿಯದೇ ಉಳಿಯಬೇಕಾದರೆ ನಾಡಿನ ಜಾನಪದಕ್ಕೆ ನಾವೆಲ್ಲರೂ ಹಾಗೂ ಜಾನಪದ ಸಂಸ್ಥೆಗಳು, ಇಲಾಖೆಗಳು ಹೆಚ್ಚು ಒತ್ತು ನೀಡಬೇಕಾಗಿದೆ. ಮುಂಬರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಯುವಜನೋತ್ಸವಕ್ಕಾಗಿ 50ಸಾವಿರ ರೂ. ಮೀಸಲಿಡಲಾಗುವುದು ಎಂದರು.
ವಿಧಾನ ಪರಿಷತ್ ಶಾಸಕ ಬಿ.ಜಿ. ಪಾಟೀಲ ಮಾತನಾಡಿ, ಇಂದಿನ ಸಂಸ್ಕೃತಿ ಮುಂದಿನ ಜೀವನಕ್ಕೆ ನಾಂದಿಯಾಗಿದೆ. ಜಾನಪದ ಕಲೆ ಉಳಿಸುವ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು ಎಂದು ಹೇಳಿದರು. ಜಿ.ಪಂ ಉಪಾಧ್ಯಕ್ಷ ಶೋಭಾ ಸಿದ್ದು ಸಿರಸಗಿ ಮಾತನಾಡಿ, ಮಕ್ಕಳಿಗೆ ಕಲಿಕೆಯ ಜೊತೆಗೆ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಲು ಇದೊಂದು ಸೂಕ್ತ ವೇದಿಕೆಯಾಗಿದೆ ಎಂದರು.
ಕಲಬುರಗಿ ರಂಗಾಯಣದ ನಿರ್ದೇಶಕ ಮಹೇಶ ವಿ.ಪಾಟೀಲ್ ಮಾತನಾಡಿದರು. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ ಉದ್ಘಾಟಿಸಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲಯ್ಯ, ಯುವಜನ ಸೇವಾ ಕ್ರೀಡಾ ಇಲಾಖೆ ಉಪನಿರ್ದೇಶಕ ಆರ್ .ಜಿ.ನಾಡಿಗೇರ ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಪಾಂಡು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ ಬಡಿಗೇರ, ಇಲಾಖೆ ಅಧಿಕಾರಿಗಳು ಮತ್ತು ತೀರ್ಪುಗಾರರು ಇದ್ದರು.
ನಂತರ ಜನಪದ ನೃತ್ಯ, ಜಾನಪದ ಗೀತೆ, ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ, ಓಡಿಸ್ಸಿ, ಮಣಿಪುರಿ, ಕುಚಿಪುಡಿ, ಕಥಕ್, ಹಿಂದೂಸ್ಥಾನಿ, ಕರ್ನಾಟಕ ಶಾಸ್ತ್ರೀಯ ಗಾಯನ, ಅಶುಭಾಷಣ, ಏಕಾಂಕ ನಾಟಕ ಪ್ರದರ್ಶನ ಹಾಗೂ ಶಾಸ್ತ್ರೀಯ ವಾದ್ಯಗಳಾದ ತಬಲಾ, ಮೃದಂಗಂ, ಕೊಳಲು, ವೀಣೆ ಮತ್ತು ಸಿಪಾರ್, ಹಾರ್ವೋನಿಯಂ, ಗಿಟಾರ್ ಸ್ಪರ್ದೆಗಳು ನಡೆದವು.