Advertisement

ಜಾನಪದ ಅಕಾಡೆಮಿ ಪುರಸ್ಕಾರ

01:06 AM Jan 22, 2022 | Team Udayavani |

ಮೂಡುಬಿದಿರೆ/ಉಡುಪಿ: ಕರ್ನಾಟಕ ಜಾನಪದ ಅಕಾಡೆಮಿಯ 2021ನೇ ಸಾಲಿನ ಗೌರವ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕರಗ ನೃತ್ಯ ಕುಶಲಿಗ ಮೂಡುಬಿದಿರೆ ವಿದ್ಯಾಗಿರಿ ಸಮೀಪದ ವೆಂಕಟೇಶ ಬಂಗೇರ ಮತ್ತು ಉಡುಪಿ ಜಿಲ್ಲೆಯಿಂದ ನಾಟಿ ವೈದ್ಯೆ ಬೊಮ್ಮರಬೆಟ್ಟು, ಗುಡ್ಡೆಅಂಗಡಿಯ ಪದ್ಮಾವತಿ ಆಚಾರ್ಯ ಆಯ್ಕೆಯಾಗಿದ್ದಾರೆ.

Advertisement

ವೆಂಕಟೇಶ ಬಂಗೇರ
ವೆಂಕಟೇಶ ಬಂಗೇರ ಅವರು 8ರ ಹರೆಯದಲ್ಲೇ ಸೈಕಲ್‌ ಬ್ಯಾಲೆನ್ಸ್‌ನಲ್ಲಿ ನೃತ್ಯ ಕಲಾವಿದನಾಗಿ ಕಾಣಿಸಿ ಕೊಂಡವರು. ಬಳಿಕ ಕರಗ ನೃತ್ಯದ ಜತೆಗೆ ನಾಟಕ, ಯಕ್ಷಗಾನದಲ್ಲಿ ಸ್ತ್ರೀ ವೇಷಧಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ. 4 ದಶಕಗಳ ಹಿಂದೆ ಮಣಿಕಂಠ ಬಳಗ ಹೆಸರಿನಲ್ಲಿ ಮೂಡುಬಿದಿರೆಯ ಮೊದಲ ಕೀಲುಕುದುರೆ, ಕರಗನೃತ್ಯ ತಂಡ ಕಟ್ಟಿದವರು. 3 ವರ್ಷಗಳಿಂದ “ಬಿದಿರೆ ಆರ್ಟ್ಸ್’ನ ಮುಖ್ಯಸ್ಥರಾಗಿ, 60ರ ಹರೆಯದಲ್ಲೂ ಕರಗ ನೃತ್ಯದಲ್ಲಿ ಮಿಂಚುತ್ತಿದ್ದಾರೆ.

6.5 ಅಡಿ ಎತ್ತರದ ಕರಗ
ವೆಂಕಟೇಶ್‌ ಧರಿಸುವ ಅಲ್ಯುಮಿನಿಯಂ ಕೊಡ, ಸ್ಟೀಲ್‌ ಹರಿವಾಣಗಳನ್ನು ಕಲಾತ್ಮಕವಾಗಿ ಜೋಡಿಸಿರುವ ಕರಗದ ಎತ್ತರ ಆರೂವರೆ ಅಡಿ. ತೂಕ 20 ಕೆಜಿ. 2 ಸಾವಿರಕ್ಕೂ ಅಧಿಕ ಪ್ರದರ್ಶನ ನೀಡಿರುವ ಅವರು ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಯುವಜನೋತ್ಸವ, ಆಳ್ವಾಸ್‌ ನುಡಿಸಿರಿ, ಅಖೀಲ ಭಾರತ ವಿ.ವಿ. ಕ್ರೀಡಾಕೂಟದ ಮೆರವಣಿಗೆಗಳಲ್ಲೂ ವೀಕ್ಷಕರ ಮನಸೆಳೆದಿದ್ದಾರೆ.

ಇದನ್ನೂ ಓದಿ:ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ಪದ್ಮಾವತಿ ಆಚಾರ್ಯ
ಪದ್ಮಾವತಿ ಆಚಾರ್ಯ ಅವರು ತಮ್ಮ ಪರಿಣಾಮಕಾರಿ ಮನೆ ಮದ್ದು (ನಾಟಿ ಔಷಧ) ಮೂಲಕ ಅನೇಕ ಕಾಯಿಲೆಗಳನ್ನು ಗುಣಪಡಿಸಿದ್ದಾರೆ.

Advertisement

ಸರ್ಪಸುತ್ತು, ವಾತ, ಮಕ್ಕಳ ಚೆನ್ನ ಕಾಯಿಲೆ, ಪಾರ್ಶ್ವವಾಯು, ಹಲ್ಲು ನೋವು, ಕಿವಿನೋವು, ನಿದ್ರೆ ಬಾರದಿರುವುದು, ಕೂದಲು ಉದುರುವಿಕೆ, ಹೊಟ್ಟೆ ನೋವು, ಕಜ್ಜಿ ಮೊದಲಾದ ರೋಗಗಳಿಗೆ ಅವರು ಔಷಧ ನೀಡುತ್ತಿದ್ದಾರೆ.

ಮನೆ ಮದ್ದಿಗೆ ಗಿಡಮೂಲಿಕೆಗಳಾದ ಈಶ್ವರ ಬೇರು, ಗರುಡಪಾತಾಳ, ಚೂರಿಮುಳ್ಳು, ನಿಂಬೆರಸ, ತೆಂಗಿನ ಎಣ್ಣೆ, ಅರಸಿನ, ಶ್ರೀಗಂಧ, ಎಳನೀರಿನ ತೊಪ್ಪೆ, ಲವಂಗ, ಕೆಂಪುಬೇರು, ಮುಂಡ್ಯಾಲು ಬೇರು, ಬಜೆ, ಪಿನಾರಿ, ಬೆಳ್ಳುಳ್ಳಿ, ತುಂಬ ಎಲೆ, ನೆಲನೆಲ್ಲಿ, ಬ್ರಾಹ್ಮಿà ಸೊಪ್ಪು, ಗರಿಕೆ, ಬಿಳಿದಾಸವಾಳ, ಅಮೃತಬಳ್ಳಿ, ಹಸಿವಿನ ಹಾಲು, ಶುಂಠಿ ಮೊದಲಾದ ಗಿಡಿಮೂಲಿಕೆಗಳಿಂದ ತಯಾರಿಸಿದ ಮದ್ದನ್ನು ನೀಡಿ ರೋಗಗಳನ್ನು ಗುಣಪಡಿಸುತ್ತಾ ಬಂದಿದ್ದಾರೆ.
ವಿವಿಧ ಸಂಘ-ಸಂಸ್ಥೆಗಳಿಂದಲೂ ಅವರ ಸೇವೆಗೆ ಹಲವು ಸಮ್ಮಾನ ದೊರೆತಿದ್ದು, ಈಗ ಕರ್ನಾಟಕ ಜನಪದ ಅಕಾಡೆಮಿಯಿಂದ ರಾಜ್ಯಮಟ್ಟದ ಗೌರವ ದೊರೆತಿದೆ. ಜನಪದ ಅಕಾಡೆಮಿಯ ಪ್ರಶಸ್ತಿ ನಿರೀಕ್ಷೆ ಮಾಡಿರಲಿಲ್ಲ. ಸೇವೆಗೆ ಸರಕಾರ ನೀಡಿದ ಗೌರವ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next