ಇಬ್ಬನಿ ದಟ್ಟವಾಗಿ ಆವರಿಸಿದೆ. ಎದುರಿನಲ್ಲಿ ಬರುವವರು ಸ್ಪಷ್ಟವಾಗಿ ಕಾಣಿಸದಷ್ಟು ಗಾಢ ಆವರಣ. ಕಾಣಿಸಬೇಕಾದರೆ ಎದುರಿನಿಂದ ಯಾರಾದರೂ ಬರಲೇಬೇಕು. ಯಾರು ಬರುತ್ತಾರೆ ಹೇಳಿ- ಈ ಚಳಿಗಾಲದಲ್ಲಿ ! ಯಾರಿಗೂ ಮನೆಯಿಂದ ಹೊರಬರುವ ಇಚ್ಛೆಯಿಲ್ಲ. ಬಂದರೂ ನಡುಕ ಹುಟ್ಟಿಸುವಂಥ ಚಳಿಯನ್ನು ಸಹಿಸುವವರಾರು?
ಇಂಥಾದ್ದೊಂದು ಗಳಿಗೆಯಲ್ಲಿ ಮನೆಯಿಂದ ಹೊರಬಂದು ಮಂಜನ್ನು ಸೀಳಿಕೊಂಡು ನಡೆಯುತ್ತ ಬರುತ್ತೇನೆ. ಓಣಿಯ ಮೂಲೆಯಲ್ಲಿರುವ ಚಹಾದಂಗಡಿಯ ಮುಂದೆ ಇರುವ ಕಾಲು ಮುರಿದ ಬೆಂಚಿನಲ್ಲಿ ಕುಳಿತುಕೊಳ್ಳುತ್ತೇನೆ. ಚಹಾದಂಗಡಿಯ ತಾತ ಚಹಾದ ಕಪ್ಪನ್ನು ಮುಂದೆ ಚಾಚುತ್ತಾನೆ. ನಾನು ಅದನ್ನು ಪಡೆದು ಬಂದು ಗುಟುಕು ಚಹಾ ಹೀರುತ್ತೇನೆ. ಬಿಸಿಯಾದ ಚಹಾ ಹೊಟ್ಟೆಯೊಳಗೆ ಇಳಿಯುತ್ತಿರುವಂತೆ ಹೊಸ ಉತ್ಸಾಹ ಬರುತ್ತದೆ. ಬೆಳಗಿನ ಆ ಚಹಾ ಕುಡಿಯುವ ಸುಖವನ್ನು ಬಲ್ಲವನೇ ಬಲ್ಲ.
ತಾತನ ಬಗ್ಗೆ ಒಂದು ಮಾತು ಹೇಳಲೇಬೇಕು. ಆ ಮನುಷ್ಯ ಯಾವಾಗಲೂ ತಣ್ಣಗೆ. ಬಹಳ ಬಯಕೆಯಿಲ್ಲ, ಪಯಣದ ತವಕವಿಲ್ಲ. ಇದ್ದಲ್ಲಿಯೇ ಸ್ಥಾವರದಂತೆ ಸ್ಥಾಪನೆಯಾಗಿದ್ದಾನೆ. “ಯಾಕೆ ಅಜ್ಜ , ಒಂದೇ ಕಡೆ ಇರಿ¤àರಿ?’ ಎಂದು ಕೇಳಿದರೆ ಸುಮ್ಮನೆ ನಗುತ್ತಾನೆ. ಆ ನಗುವಿನಲ್ಲಿ ಸಾವಿರ ಅರ್ಥಗಳಿವೆ. ಅದನ್ನು ಅರ್ಥಮಾಡಿಕೊಂಡರೆ ಅದೇ ಗುಂಗಿನಲ್ಲಿ ಕಳೆದುಹೋಗುತ್ತೇನೆ.
ತಣ್ಣಗಿನ ಆ ಮನುಷ್ಯನನ್ನು ಕಂಡು ಹೆದರುವವರು ಬಹಳ ಮಂದಿ. ಮಾತನಾಡಿಸಲು ಹಿಂದೇಟು ಹಾಕುತ್ತಾರೆ. ಅವನಲ್ಲಿಯೂ ಮಾತಿಲ್ಲ, ಸುಮ್ಮನೆ ವ್ಯವಹಾರ ಮಾತ್ರ. ಮಾತನಾಡಿಸಬೇಕೆನ್ನಿಸಿದಾಗ ಒಂದು ಬೀಡಿ ಹೊತ್ತಿಸುತ್ತಾನೆ. ಒಲೆಯ ಹೊಗೆ ಮತ್ತು ಬೀಡಿಯ ಹೊಗೆ ಒಂದರೊಡನೊಂದು ಸೇರಿಕೊಂಡು ವಿಚಿತ್ರ ವಿನ್ಯಾಸವನ್ನು ಉಂಟುಮಾಡುತ್ತದೆ. ಒಂದು ಬೂದಿಯಾಗಲಿರುವುದನ್ನು ಬೆಚ್ಚಗೊಳಿಸಲು ಹೊಮ್ಮಿದ ಹೊಗೆಯಾದರೆ, ಇನ್ನೊಂದು ಬೆಚ್ಚಗಿಡಲೆಂದೇ ಬೂದಿಯಾಗುವಂಥಾದ್ದಾಗಿರುತ್ತದೆ. ಇದು ಚಳಿಗಾಲದ ಒಂದು ಅನುಭವ.
ಬಿಸಿನೀರಿನ ಸ್ನಾನ ಮಾಡಿದರೆ ಹೊರಗಿನ ದೇಹ ಬಿಸಿಯಾಗುತ್ತದೆ. ಬಿಸಿ ಚಹಾ ಕುಡಿದರೆ ಒಳಗಿನದ್ದೂ ಬಿಸಿಯಾಗುತ್ತದೆ. ಎರಡನೆಯ ವಿಧಾನವೇ ಉತ್ತಮ!
“ಈ ವರ್ಷ ಚಳಿ ಸ್ವಲ್ಪ ಜಾಸ್ತಿ’ ಎಂದು ಜನ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಾರೆ. ಅದು ಒಂದು ರೀತಿಯ ಸುಳ್ಳು ಆಪಾದನೆಯೂ ಹೌದು. ಚಳಿ ಎಂದರೆ ಎಲ್ಲರಿಗೂ ಇಷ್ಟವೇ. ಆದರೂ ಚಳಿಗೆ ಬೈಯುವುದು ಒಂದು ವಾಡಿಕೆ.
ಚಳಿಯಾಗಲಿ, ಮಳೆಯಾಗಲಿ, ಸೆಕೆಯಾಗಲಿ- ಪ್ರಕೃತಿಯ ಸೋಜಿಗ. ಅದನ್ನು ಸುಮ್ಮನೆ ಅನುಭವಿಸಬೇಕೇ ಹೊರತು ದೂಷಿಸಿ ಸುಖವಿಲ್ಲ. ಮಾತನಾಡುತ್ತಿರುವಂತೆಯೇ ಚಳಿಗಾಲ ನಿಧಾನವಾಗಿ ಕಳೆದುಹೋಗುತ್ತಿದೆಯಲ್ಲ !
ಪ್ರಶಾಂತ್ ಎಸ್. ಕೆಳಗೂರ್
ಪ್ರಥಮ ಎಂಸಿಜೆ, ಎಸ್‌ಡಿಎಂ ಕಾಲೇಜು, ಉಜಿರೆ