ರಾಂಚಿ: ಬಹುಕೋಟಿ ರೂಪಾಯಿ ಅಂತಿಮ ಹಾಗೂ 5ನೇ ಮೇವು ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಚಿಯ ವಿಶೇಷ ಸಿಬಿಐ ಕೋರ್ಟ್ ಸೋಮವಾರ (ಫೆ.21) ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಗೆ 5 ವರ್ಷ ಜೈಲುಶಿಕ್ಷೆ ಹಾಗೂ 60 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ:ಗೂಂಡಾಗಿರಿ ಮಾಡುವವರಿಗೆ ತಕ್ಕ ಶಿಕ್ಷೆಯಾದಾಗ ಈ ರೀತಿ ಘಟನೆಗಳು ನಡೆಯುವುದಿಲ್ಲ.
ದೊರಾಂಡಾ ಖಜಾನೆ ದುರ್ಬಳಕೆ ಪ್ರಕರಣದಲ್ಲಿ ಲಾಲೂಪ್ರಸಾದ್ ಯಾದವ್ ದೋಷಿ ಎಂದು ವಿಶೇಷ ಸಿಬಿಐ ಕೋರ್ಟ್ ಕಳೆದ ವಾರ ತೀರ್ಪು ನೀಡಿತ್ತು. ಜಾರ್ಖಂಡ್ ನ ದೊರಾಂಡಾ ಖಜಾನೆಯಿಂದ ಲಾಲುಪ್ರಸಾದ್ ಯಾದವ್ ಕೋಟ್ಯಂತರ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಇದಾಗಿತ್ತು.
ದೊರಾಂಡಾ ಖಜಾನೆ ದುರ್ಬಳಕೆ ಪ್ರಕರಣದಲ್ಲಿ ಮಾಜಿ ಸಂಸದ ಜಗದೀಶ್ ಶರ್ಮಾ, ಪಿಎಸಿ (ಸಾರ್ವಜನಿಕ ಲೆಕ್ಕಪತ್ರ ಸಮಿತಿ)ಯ ಅಧ್ಯಕ್ಷ ಧ್ರುವ್ ಭಗತ್, ಪಶುಸಂಗೋಪನಾ ಕಾರ್ಯದರ್ಶಿ ಬೆಕ್ ಜೂಲಿಯಸ್ ಮತ್ತು ಪಶುಸಂಗೋಪನಾ ಸಹಾಯಕ ನಿರ್ದೇಶಕ ಡಾ.ಕೆ.ಎಂ ಪ್ರಸಾದ್ ಪ್ರಮುಖ ಆರೋಪಿಗಳಾಗಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪ್ರಕರಣದಲ್ಲಿನ 24 ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿತ್ತು. ನಂತರ ಲಾಲೂಪ್ರಸಾದ್ ಯಾದವ್ ಗೆ ಹೋಟ್ವಾರ್ ಜೈಲ್ ನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಪ್ರಕರಣದ ಅಂತಿಮ ತೀರ್ಪು ನೀಡುವ ಸಂದರ್ಭದಲ್ಲಿ ಖುದ್ದು ಹಾಜರಿರಬೇಕು ಎಂದು ವಿಶೇಷ ಸಿಬಿಐ ಕೋರ್ಟ್ ಜಡ್ಜ್ ಎಸ್ ಕೆ ಶಶಿ ಈ ಮೊದಲು ಆದೇಶ ನೀಡಿದ್ದರು.