ತಿಪಟೂರು: ಸರ್ಕಾರದಿಂದ ತಾಲೂಕಿನ ಹೊನ್ನವಳ್ಳಿ ಹೋಬಳಿ ಬಾಗುವಾಳದಲ್ಲಿ ಮೇವು ಕೇಂದ್ರ ತೆರೆದಿದೆ. ಆದರೂ ವಾರದಿಂದ ಮೇವಿಲ್ಲದೇ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ತಾಲೂಕು ಆಡಳಿತ ನಮಗೂ ರೈತರಿಗೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಬಾಗುವಾಳದಲ್ಲಿ ತೆರೆದಿರುವ ಮೇವು ಕೇಂದ್ರದಲ್ಲಿ ಕಳೆದ ಐದಾರು ದಿನಗಳಿಂದ ಮೇವಿಲ್ಲದಂತಾಗಿದೆ. ಮೇವು ಸರಬರಾಜು ಗುತ್ತಿಗೆದಾರರು ಮೇವು ಒದಗಿಸಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಮೇವು ಗುತ್ತಿಗೆದಾರರಿಗೆ ಸರಬರಾಜು ಮಾಡಿ ರುವುದಕ್ಕೆ ಸರಿಯಗಿ ಹಣ ಪಾವತಿಸುತ್ತಿಲ್ಲ. ಹಾಗಾಗಿ ಮೇವು ಸಕಾಲಕ್ಕೆ ಸರಬರಾಜಾಗುತ್ತಿಲ್ಲ ಎಂಬುದು ಹೆಸರೇಳಲಿಚ್ಚಿಸದ ಅಧಿಕಾರಿಗಳ ಅನುಭವದ ಮಾತಾಗಿದೆ.
ಸರ್ಕಾರಿ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ: ರೈತರಿಗೆ ಮೇವು ಕಾರ್ಡ್ ನೀಡಿದರೆ ಮಾತ್ರ ಮೇವು ಸಿಗುತ್ತಿದ್ದು, ಈಗ ಮೇವು ಕಾರ್ಡ್ ಮಾಡಿಸಿಕೊಂಡಿದ್ದರೂ ಮೇವು ಸಿಗ ದಂತಾಗಿದೆ. ಮೇವು ಕಾರ್ಡ್ ಮಾಡಿಸಿಕೊಳ್ಳಲೂ ಮತ್ತು ಕಾರ್ಡ್ ಮಾಡಿಸಿಕೊಂಡ ನಂತರವೂ ರೈತರು ಮೇವಿಗಾಗಿ ರಾತ್ರಿ ಹಗಲು ಅಲೆಯ ಬೇಕಾಗಿದೆ. ನಿರಂತರ ಬರಗಾಲದ ಬೇಗೆಯಲ್ಲೂ ಸರ್ಕಾರ ರೈತರಿಗಾಗಿ ಯಾವ ಯೋಜನೆಗಳನ್ನು ಜಾರಿಗೆ ತಂದರೂ ಸಮರ್ಪಕವಾಗಿ ಜಾರಿಯಾ ಗುತ್ತಿಲ್ಲ. ಅಧಿಕಾರಿಗಳು ಮಾತ್ರ ದೊಡ್ಡದಾಗಿ ತಾಲೂಕಿನ ಮೂರು ಕಡೆಗಳಲ್ಲಿ ಮೇವು ಕೇಂದ್ರವನ್ನು ತೆರೆಯಲಾಗಿದೆ ಎಂದು ಹೇಳುತ್ತಾರೆ. ಆದರೆ, ಮೇವು ಬರುತ್ತಿದೆಯೋ ಇಲ್ಲವೋ, ಎಷ್ಟು ರೈತರಿಗೆ ಮೇವು ಸಿಗುತ್ತಿದೆ. ಮೇವು ಸರಬರಾಜು ಗುತ್ತಿಗೆದಾರ ಸರಿಯಾಗಿ ಸರಬರಾಜು ಮಾಡುತ್ತಿ ದ್ದಾರೆಯೇ? ಅಥವಾ ಇತರೆ ಮೇವು ಕೇಂದ್ರಗಳಲ್ಲಿ ಎಷ್ಟು ದಿವಸಗಳಿಗೆ ಸಾಕಾಗುವಷ್ಟು ಮೇವಿದೆ ಎಂಬಿತ್ಯಾದಿ ಬಗ್ಗೆ ದಿಢೀರ್ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕಿದೆ.
ಜಾನುವಾರಗಳ ಸಾಕಾಣಿಕೆ ರೈತರಿಗೆ ತಲೆನೋವು: ಇಂತಹ ಬರಗಾಲದಲ್ಲಿ ಬದುಕು ನಡೆಸುವುದೇ ಕಷ್ಟಕರವಾಗಿದೆ. ಜಾನುವಾರಗಳ ಸಾಕಾಣಿಕೆ ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಕೇಳಿದಷ್ಟು ಬೆಲೆಗೆ ಕಸಾಯಿ ಖಾನೆಗೆ ದೂಡುವಂತಾಗಿದ್ದು, ಇದಕ್ಕೆ ಸರ್ಕಾರ ಅಥವಾ ಅಧಿಕಾರಿಗಳು ಹೊಣೆ ಯಾಗುತ್ತಾರೋ ಗೊತ್ತಾಗುತ್ತಿಲ್ಲ. ಪಾಪಿರೈತ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಎಂಬಂತೆ ರೈತನ ಬದುಕು ಅತಂತ್ರ ಹಾಗೂ ಸಂಕಷ್ಟದ ಸ್ಥಿತಿಯಲ್ಲಿದೆ.
ಈಗಲಾದರೂ ಸರ್ಕಾರ ತೆರೆದಿರುವ ಮೇವು ಬ್ಯಾಂಕ್‌ಗಳಿಗೆ ಅಧಿಕಾರಿಗಳು ಸಮರ್ಪಕ ಮೇವನ್ನು ಪೂರೈಕೆ ಮಾಡುವಂತೆ ತಾಲೂಕು ಆಡಳಿತಕ್ಕೆ ಹಾಗೂ ಗೊಂದಲಕ್ಕೆ ಅವಕಾಶ ನೀಡದಂತೆ ಮೇವು ವಿತರಿಸಲು ಪಶು ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿ ಕಾರಿಗಳು ಸೂಚನೆ ನೀಡಿ, ರೈತರ ಅಲೆದಾಟವನ್ನು ತಪ್ಪಿಸುತ್ತಾರೆಯೋ ಕಾಯ್ದು ನೋಡಬೇಕಿದೆ.