Advertisement

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

01:44 AM May 08, 2024 | Team Udayavani |

ಬಜಪೆ: ಬಿಸಿಲ ಧಗೆಗೆ ನೀರಿನ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಬಾವಿಗಳಲ್ಲಿ ನೀರಿನ ಮಟ್ಟವೂ ಕುಸಿದಿದೆ. ಇದರಿಂದ ಕೃಷಿಗೆ ಸಮಸ್ಯೆಯಾಗುವ ಜತೆಗೆ ಜಾನುವಾರುಗಳಿಗೆ ಹಸುರು ಮೇವಿನ ಕೊರತೆ ಉಂಟಾಗಿದೆ.

Advertisement

ಜಾನುವಾರುಗಳಿಗೆ ಹಸುರು ಹುಲ್ಲಿಗೆ ಪರ್ಯಾಯವಾಗಿ ಕೆಲವು ಕೃಷಿಕರು ತರಕಾರಿ ಸಿಪ್ಪೆ ಹಾಗೂ ಎಳೆಯ ಸೀಯಾಳದ ಸಿಪ್ಪೆ ನೀಡಲು ಮುಂದಾಗಿದ್ದು, ಸ್ಥಳೀಯ ಅಂಗಡಿ, ಮಾರುಕಟ್ಟೆಗಳಿಂದ ತೆಗೆದುಕೊಂಡು ಹೋಗುತ್ತಿದ್ದಾರೆ.

ಸಾಮಾನ್ಯವಾಗಿ 15 ಲೀಟರ್‌ ಹಾಲು ಕೂಡುವ ದನಕ್ಕೆ 6 ಕೆ.ಜಿ. ಹಿಂಡಿ, 25 ಕೆ.ಜಿ. ಹಸುರು ಮೇವು, 8 ಕೆ.ಜಿ. ಬೈಹುಲ್ಲು ದಿನಕ್ಕೆ ಬೇಕಾಗುತ್ತದೆ. ಹಸುರು ಮೇವು ನೀಡದಿದ್ದಲ್ಲಿ ಜೀರ್ಣಕ್ರಿಯೆ ಸಮಸ್ಯೆ, ಗೊರಸುಗಳಲ್ಲಿ ಗಾಯ, ಸೆಗಣಿ ಹಾಕದಿರುವುದು, ಹಾಲು, ಕೊಬ್ಬಿನಂಶ ಕಡಿಮೆಯಾಗಿ ಶಕ್ತಿ ಹೀನತೆಗೆ ಕಾರಣವಾಗುತ್ತದೆ. ಸದ್ಯ ಜಿಲ್ಲೆಯಲ್ಲಿ ಹಸುರು ಮೇವಿನ ಕೊರತೆ ಇರುವುದರಿಂದ ಹಿಂಡಿಯನ್ನು ಜಾಸ್ತಿ ಕೊಡುವುದು ಕಂಡು ಬಂದಿದೆ.

ಹಸುರು ಮೇವಿಗೆ ಪರ್ಯಾಯ ವಾಗಿ ಹೈನುಗಾರಿಕೆ ಮಾಡುವ ಕೃಷಿಕರು ರಖಂ ತರಕಾರಿ ಅಂಗಡಿಗಳಲ್ಲಿ ಸಿಗುವ ಕ್ಯಾಬೇಜ್‌, ಕ್ವಾಲಿ ಪ್ಲವರ್‌ ಹಾಗೂ ಇತರ ತರಕಾರಿಗಳ ಸಿಪ್ಪೆಗಳಿಗೆ ಬೇಡಿಕೆ ಇಡುವುದು ಕಂಡು ಬಂದಿದೆ. ಬೆಳಗ್ಗೆ, ಸಂಜೆ ಹೋಗಿ ಸಿಪ್ಪೆಯನ್ನು ಪಡೆದುಕೊಳ್ಳುತ್ತಿದ್ದಾರೆ. ತರಕಾರಿ ಸಿಪ್ಪೆಗಳನ್ನು ಒಂದು ದಿನ ಒಣಗಿಸಿ, ನೀಡಿದರೆ ಉತ್ತಮ ಎನ್ನುವುದು ರೈತರ ಮಾತು.

ಭತ್ತದ ಗದ್ದೆ
ಅವನತಿ ಕಾರಣ
ಜಿಲ್ಲೆಯಲ್ಲಿ ಹೆಚ್ಚಿನ ಕೃಷಿಕರು ಅಡಿಕೆ ಕೃಷಿಯತ್ತ ಮುಖ ಮಾಡಿರುವ ಕಾರಣ ಭತ್ತದ ಗದ್ದೆಗಳೆಲ್ಲ ಅಡಿಕೆ ತೋಟವಾಗಿ ಪರಿವರ್ತನೆಯಾಗುತ್ತಿದ್ದು, ಗದ್ದೆಯಲ್ಲಿ ಬೆಳೆಯುತ್ತಿದ್ದ ಹುಲ್ಲು ಇಲ್ಲವಾಗಿದೆ. ಗುಡ್ಡದಲ್ಲಿ ಬೆಳೆದ ಹುಲ್ಲು ಬಿಸಿಲಿಗೆ ಒಣಗಿ ಹೋಗುತ್ತಿದೆ. ಇದರಿಂದ ಹಸುರು ಮೇವು ಕೊರತೆ ಉಂಟಾಗಿದೆ.

Advertisement

ತೋಟದ ಹುಲ್ಲು
ತೆಗೆಯುವಂತಿಲ್ಲ!
ಪ್ರಸ್ತುತ ಅಡಿಕೆ, ತೆಂಗು, ಬಾಳೆ ತೋಟಗಳಲ್ಲಿ ಬೆಳೆದಿರುವ ಅಲ್ಪ ಹುಲ್ಲನ್ನು ಕಟಾವು ಮಾಡುತ್ತಿಲ್ಲ. ತೋಟಕ್ಕೆ ಎರಡು ದಿನಕ್ಕೊಮ್ಮೆ ಸ್ಪ್ರಿಂಕ್ಲರ್‌ ಮೂಲಕ ನೀರು ಚಿಮುಕಿಸುತ್ತಿದ್ದು, ಮಣ್ಣಿನ ತೇವಾಂಶ ಉಳಿಸಿಕೊಳ್ಳಲು ಈ ಹುಲ್ಲು ನೆರವಾಗುವ ಕಾರಣ ಕಟಾವು ಮಾಡುತ್ತಿಲ್ಲ ಹಾಗೂ ಜಾನುವಾರುಗಳನ್ನೂ ಮೇಯಲು ತೋಟಕ್ಕೆ ಬಿಡುತ್ತಿಲ್ಲ.

12 ವಾರಕ್ಕೆ ಮೇವು
ಜಿಲ್ಲೆಯಲ್ಲಿ ಪ್ರಸ್ತುತ 1,32,387 ಟನ್‌ ಜಾನುವಾರು ಮೇವು (ಹಸುರು ಮತ್ತು ಒಣ ಹುಲ್ಲು) ಲಭ್ಯವಿದ್ದು, 12 ವಾರಗಳ ವರೆಗೆ ಇದನ್ನು ಉಪಯೋಗಿಸಬಹುದಾಗಿದೆ. ಕಳೆದ ವಾರ 12,117 ಟನ್‌ ಹಸುರು ಮೇವು ಉತ್ಪಾದನೆ ಮಾಡಲಾಗಿದ್ದು, 10,715 ಟನ್‌ ಉಪಯೋಗಿಸಲಾಗಿದೆ. ಪ್ರಸ್ತುತ ಕೊçಲದ ಗೋಶಾಲೆಯಲ್ಲಿ 5 ಲಕ್ಷ ಟನ್‌ ಒಣ ಹುಲ್ಲು ತುರ್ತು ಉಪಯೋಗಕ್ಕೆ ಎಂದು ಸಂಗ್ರಹಿಸಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಸಿಲ ಬೇಗೆ ತಣಿಸುತ್ತಿದ್ದ ವ್ಯಾಪಾರಕ್ಕೆ ಪೆಟ್ಟು ;
ಬೇಡಿಕೆಯಷ್ಟು ಲಭಿಸುತ್ತಿಲ್ಲ ಸೀಯಾಳ, ಕಬ್ಬು
ಮಂಗಳೂರು: ಬಿಸಿಲ ಬೇಗೆ ಅಧಿಕವಾಗುತ್ತಿರುವ ಕಾರಣ ಜನರು ಹೆಚ್ಚಾಗಿ ಸೀಯಾಳ, ಕಬ್ಬಿನ ಹಾಲು ಕುಡಿಯಲಾರಂಭಿಸಿದ್ದಾರೆ. ಆದರೆ ಸೀಯಾಳ ಹಾಗೂ ಕಬ್ಬು ನಿರೀಕ್ಷೆಯಷ್ಟು ಮಂಗಳೂರು ಮಾರುಕಟ್ಟೆಯಲ್ಲಿ ದೊರೆಯದೆ ವ್ಯಾಪಾರ ನಡೆಸುವವರಿಗೆ ತಲೆನೋವು ಸೃಷ್ಟಿಸಿದೆ.

ಸ್ಥಳೀಯ ಸೀಯಾಳ ಪೂರೈಕೆ ಹಿಂದಿನಿಂದಲೂ ಕಡಿಮೆ. ಬಿರು ಬೇಸಗೆಗೂ ಮುನ್ನ ಮಂಗಳೂರು ನಗರ ಸೇರಿದಂತೆ ಗ್ರಾಮಾಂತರ ಭಾಗಕ್ಕೂ ತಮಿಳುನಾಡು ಕಡೆಯಿಂದ ಬೃಹತ್‌ ಕಂಟೈನರ್‌, ಲಾರಿಗಳ ಮೂಲಕ ಟನ್‌ಗಟ್ಟಲೆ ಜಿಲ್ಲೆಗೆ ಸೀಯಾಳ ಪೂರೈಕೆಯಾಗುತ್ತಿತ್ತು. ಕೆಲವು ದಿನಗಳಿಂದ ಅಲ್ಲಿಂದಲೂ ಪೂರೈಕೆ ಕಡಿಮೆಯಾಗಿರುವುದರಿಂದ ಈಗ ಕೆಲವೇ ಅಂಗಡಿಗಳಲ್ಲಷ್ಟೇ ಸೀಯಾಳ ಸಿಗುತ್ತಿದೆ. ಇರುವಲ್ಲಿ ಸಣ್ಣ ಗಾತ್ರದ ಸೀಯಾಳಕ್ಕೂ ದರ ಏರಿಕೆಯಾಗಿದೆ.

ಕಬ್ಬಿನ ಕೊರತೆ
ಕಬ್ಬಿನ ಹಾಲಿಗೆ ಸದ್ಯ ಉತ್ತಮ ಬೇಡಿಕೆ ಇದೆ. ಆದರೆ ಕೆಲವು ದಿನಗಳಿಂದ ಕಬ್ಬು ಪೂರೈಕೆಯೂ ಕಡಿಮೆಯಾಗಿದೆ. ಮಂಡ್ಯ, ಮೈಸೂರು ಭಾಗಗಳಲ್ಲಿ ನೀರಾವರಿ ಕೊರತೆಯಿಂದ ಕೆಲವು ಕಡೆ ಬೇಗನೆ ಕಟಾವು ಮಾಡಿರುವುದರಿಂದ ಕಬ್ಬು ಕೊರತೆ ಉಂಟಾಗಿದೆ. ರಸ್ತೆ ಬದಿಗಳಲ್ಲಿ ಜೋರಾಗಿ ನಡೆಯುತ್ತಿದ್ದ ಕಬ್ಬು ಜ್ಯೂಸ್‌ ವ್ಯಾಪಾರ ಕಳೆಗುಂದಿದೆ.

ಶುಭ ಸಮಾರಂಭಗಳಲ್ಲಿ ಎಳನೀರಿಗೆ ವಿಶೇಷ ಸ್ಥಾನಮಾನವಿದೆ. ನೇಮ, ಗೃಹಪ್ರವೇಶ, ದೇವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಯಾಳ ಅಗತ್ಯ. ಆದರೆ ಮಾರುಕಟ್ಟೆಯಲ್ಲಿ ಸೀಯಾಳ ಸಿಗದ ಪರಿಣಾಮ ಶುಭ ಕಾರ್ಯಗಳಿಗೂ ಖರೀದಿ ಸಮಸ್ಯೆ ಎದುರಾಗಿದೆ.

ಜಾನುವಾರುಗಳಿಗೆ ತರಕಾರಿ ಸಿಪ್ಪೆ, ಉಳಿಕೆ ವಸ್ತುಗಳನ್ನು ಹಾಕುವುದರಿಂದ ಸಮಸ್ಯೆಯಿಲ್ಲ. ಆದರೆ ಮಿತವಾಗಿರಲಿ. ಸಿಹಿ ಹೆಚ್ಚಿರುವ ಹಣ್ಣುಗಳನ್ನು ನೀಡದಿರುವುದು ಉತ್ತಮ. ಜಿಲ್ಲೆಯ ಕೆಲವು ಭಾಗದಲ್ಲಿ ಒಂದೆರಡು ಮಳೆಯಾಗಿರುವುದರಿಂದ ಗದ್ದೆ ಬಯಲುಗಳಲ್ಲಿ ಹುಲ್ಲು ಬೆಳೆದಿದೆ. ಅಗತ್ಯವಿರುವ ರೈತರಿಗೆ ಈಗಾಗಲೇ ಮೇವಿನ ಕಿಟ್‌ಗಳನ್ನು ನೀಡಿ ಹುಲ್ಲು ಬೆಳೆಸುವಂತೆ ಸೂಚಿಸಲಾಗಿದೆ.
– ಡಾ| ಅರುಣ್‌ ಕುಮಾರ್‌,
ಉಪನಿರ್ದೇಶಕ, ಪಶುಪಾಲನೆ ಇಲಾಖೆ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next