Advertisement
ಒಣ ಹುಲ್ಲು ಆಧಾರಕರಾವಳಿಯಲ್ಲಿ ಬಿಸಿಲಿನ ತಾಪ ಹೆಚ್ಚು. ಬೇಸಗೆಯಲ್ಲಿ ಕೃಷಿ ತೋಟಕ್ಕೆ ನೀರಿನ ಅಭಾವ ಉಂಟಾಗಿ ಹಸಿ ಹುಲ್ಲಿನ ಕೊರತೆ ಕಾಡುತ್ತದೆ. ಹೈನುಗಾರರು ಬೈಹುಲ್ಲನ್ನು ಸಂಗ್ರಹಿಸಿ ಜಾನುವಾರುಗಳಿಗೆ ಆಹಾರವಾಗಿ ಬಳಸುತ್ತಾರೆ. ಅವಿಭಜಿತ ಜಿಲ್ಲೆಯಲ್ಲಿ ಭತ್ತದ ಗದ್ದೆಗಳ ಪ್ರಮಾಣ ಇಳಿಮುಖವಾಗುತ್ತಿದ್ದು, ಒಣ ಹುಲ್ಲನ್ನು ಘಟ್ಟ ಪ್ರದೇಶದಿಂದ ತರಿಸುತ್ತಾರೆ. ಬೇಸಗೆಯಲ್ಲಿ ಮೇವಿನ ಕೊರತೆಯನ್ನು ಈ ಮೂಲಕ ನೀಗಿಸಲಾಗುತ್ತದೆ.
ಕರಾವಳಿಗೆ ಘಟ್ಟದ ಪ್ರದೇಶಗಳಾದ ಹಾಸನ, ಶಿವಮೊಗ್ಗ, ಸಾಗರ, ಹೊಸನಗರ, ಬನವಾಸಿ, ಆನಂದಪುರ, ಚಿಕ್ಕಮಗಳೂರು, ಮೂಡಿಗೆರೆ ಪ್ರದೇಶಗಳಿಂದ ಬೈಹುಲ್ಲು ಪೂರೈಕೆಯಾಗುತ್ತಿದೆ. ಬೈಹುಲ್ಲು ಹೊತ್ತ ಲಾರಿ, ಟೆಂಪೋಗಳು ಮನೆ ಮನೆಗೆ ಬರುತ್ತವೆ. ಆದರೆ ಲಾಕ್‌ಡೌನ್ ಕಾರಣ ಈ ಬೇಸಗೆಯಲ್ಲಿ ಬೈಹುಲ್ಲು ಸಾಗಾಟ ಸ್ಥಗಿತವಾಗಿದೆ. ಇದರ ಬಿಸಿ ಹೈನುಗಾರಿಕೆಯ ಮೇಲೆ ಉಂಟಾಗಿದೆ. ಹೈನುಗಾರಿಕೆಗೆ ಒಣ ಹುಲ್ಲು ಅಗತ್ಯ ಎಂದು ಪರಿಗಣಿಸಿ ಸಾಗಾಟಕ್ಕೆ ಅನುಮತಿ ನೀಡಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ. ಬೈ ಹುಲ್ಲು ಏಕೆ ಬೇಕು?
ಹಸಿ ಹುಲ್ಲಿನ ಅಭಾವವಿರುವ ಬೇಸಗೆಯಲ್ಲಿ ಹಸುವಿನ ಧಾತು ಹಾಗೂ ಹಾಲು ಸಂಗ್ರಹದ ಪ್ರಮಾಣ ಹೆಚ್ಚಿಸಲು ಬೈಹುಲ್ಲೇ ಆಧಾರ. ಪಶುಸಂಗೋಪನೆ ಇಲಾಖೆ ನೀಡುವ ಆಹಾರಕ್ಕಿಂತಲೂ ಒಣ ಹುಲ್ಲಿನ ಅಗತ್ಯ ಹೆಚ್ಚು ಎನ್ನುತ್ತಾರೆ ಹೈನುಗಾರರು. ದ.ಕ. ಜಿಲ್ಲೆಯಲ್ಲಿ ಮೇವು ಅವಲಂಬಿತ 3.82 ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 1.95 ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ.
Related Articles
ಬೈಹುಲ್ಲು ಕೊರತೆಗೆ ಸಂಬಂಧಿಸಿ ಕೆಲವು ಹೈನುಗಾರರು ನನ್ನನ್ನು ಸಂಪರ್ಕಿಸಿದ್ದಾರೆ. ಈ ಕುರಿತು ಕೆಎಂಎಫ್ ಅಧ್ಯಕ್ಷರೊಂದಿಗೆ ಚರ್ಚಿಸಿದ್ದೇನೆ. ಕೆಎಂಎಫ್ ವತಿಯಿಂದಲೇ ನಿಗದಿತ ದರದಲ್ಲಿ ನೇರವಾಗಿ ಹೈನುಗಾರರಿಗೆ ಬೈಹುಲ್ಲು ಪೂರೈಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ.
– ಸಂಜೀವ ಮಠಂದೂರು, ಶಾಸಕರು, ಪುತ್ತೂರು
Advertisement
ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕುಪ್ರತಿ ಬಾರಿ ಸುಳ್ಯ ತಾಲೂಕಿಗೆ ಹಾಸನದಿಂದ ಬೈಹುಲ್ಲು ಪೂರೈಕೆ ಮಾಡಲಾಗುತ್ತಿತ್ತು. ಲಾಕ್‌ಡೌನ್ ಕಾರಣ ಈ ಬಾರಿ ಪೂರೈಕೆ ಆಗಿಲ್ಲ. ಇದರಿಂದ ಮೇವಿನ ಅಭಾವ ಉಂಟಾಗಿದೆ. ಜಾನುವಾರಿನ ಮೇಲೂ ಅದರ ಪರಿಣಾಮ ಬೀರುತ್ತಿದೆ. ಜಿಲ್ಲಾಡಳಿತ ಒಣ ಹುಲ್ಲು ಸಾಗಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯ ಬೇರೆ ಭಾಗಗಳಲ್ಲಿ ಬೈಹುಲ್ಲು ಸಂಗ್ರಹವಿದ್ದರೆ ಅಗತ್ಯವಿರುವ ಕಡೆಗೆ ಪೂರೈಸಬೇಕು.
– ಭಾಸ್ಕರ ಗೌಡ ಹೊಸಗದ್ದೆ ಸೋಣಂಗೇರಿ, ಕೃಷಿಕ