Advertisement

ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಮೇವು ಕೃಷಿ

10:04 AM Feb 18, 2020 | Lakshmi GovindaRaj |

ಶಿವಮೊಗ್ಗ: ರಾಜ್ಯದ ಪ್ರಮುಖ ಮೃಗಾಲಯಗಳಲ್ಲಿ ಒಂದಾದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ, ಮೇವು ಸ್ವಾವಲಂಬನೆ ಸಾ ಧಿಸಿದ ಪ್ರಥಮ ಮೃಗಾಲಯವಾಗಿ ಹೊರಹೊಮ್ಮಿದೆ. ಆರಂಭದಲ್ಲಿ ಹುಲಿ ಮತ್ತು ಸಿಂಹಗಳಿಂದಲೇ ಹೆಸರುವಾಸಿಯಾಗಿದ್ದ ಈ ಮೃಗಾಲಯ, ಈಗ ಸಸ್ಯಾಹಾರಿ ಪ್ರಾಣಿಗಳನ್ನೂ ಸಹ ಹೊಂದಿದೆ. ಪ್ರಸ್ತುತ 150 ಸಸ್ಯಾಹಾರಿ ಪ್ರಾಣಿಗಳಿದ್ದು, ಇವು ವನ್ಯಧಾಮದ ಆಕರ್ಷಣೆ ಹೆಚ್ಚಿಸಿವೆ.

Advertisement

ಅಲ್ಲದೆ, ಇತ್ತೀಚೆಗೆ ಹೊಸ ಹೊಸ ಜಾತಿಯ ಪ್ರಾಣಿಗಳು ಸೇರ್ಪಡೆಗೊಂಡಿವೆ. ಹೀಗಾಗಿ, ಪ್ರತಿ ದಿನ 1 ಟನ್‌ ಮೇವಿನ ಅಗತ್ಯವಿದ್ದು, ಇದಕ್ಕೆ 4 ಸಾವಿರ ರೂ.ವೆಚ್ಚವಾಗುತ್ತಿದೆ. ತಿಂಗಳಿಗೆ ಕನಿಷ್ಠ 1 ಲಕ್ಷ ರೂ., ವರ್ಷಕ್ಕೆ 12 ಲಕ್ಷ ರೂ.ವೆಚ್ಚವಾಗುತ್ತಿದೆ.  ಮೇವನ್ನು ಹಣ ಕೊಟ್ಟು ಬೇರೆಡೆಯಿಂದ ತರುವ ಬದಲು ಇಲ್ಲಿಯೇ ಉತ್ತಮ ದರ್ಜೆಯ ಮೇವು ಬೆಳೆಯಲು ಸಿಂಹಧಾಮದ ಸಿಬ್ಬಂದಿ ಹೆಜ್ಜೆ ಇಟ್ಟಿದ್ದಾರೆ.

ರಾಜ್ಯದಲ್ಲಿ 9 ಮೃಗಾಲಯಗಳಿದ್ದು, ಈವರೆಗೆ ಯಾವುದೂ ಮೇವು ಸ್ವಾವಲಂಬನೆ ಸಾ ಧಿಸಿಲ್ಲ. ಕೆಲ ಮೃಗಾಲಯಗಳಿಗೆ ಜಾಗದ ಸಮಸ್ಯೆ ಕೂಡ ಇದೆ. ಆದರೆ, ತ್ಯಾವರೆಕೊಪ್ಪ ಸಿಂಹ ಧಾಮದ ಒಳಗೇ ಮೇವು ಬೆಳೆಯಲಾಗುತ್ತಿದೆ. ಇಲ್ಲಿ ಕಳೆದ ಮಳೆಗಾಲದಲ್ಲಿ ಸುಮಾರು 2 ಎಕರೆ ಜಾಗದಲ್ಲಿ ಮೇವು ಬೀಜ ಬಿತ್ತನೆ ಮಾಡಲಾಗಿತ್ತು. ಉತ್ತಮ ಫಸಲು ಸಹ ಸಿಕ್ಕಿತ್ತು. ಆರು ತಿಂಗಳು ಮೇವಿಗೆ ತೊಂದರೆ ಇರಲಿಲ್ಲ.

ಈಗ ಇದನ್ನು ವರ್ಷಪೂರ್ತಿ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ವರ್ಷಪೂರ್ತಿ ಮೇವು ಲಭ್ಯವಾಗುವಂತೆ ಪ್ಲಾಟ್‌ಗಳನ್ನು ಸಿದ್ಧಪಡಿಸಲು ಬೇಕಾದ ಯೋಜನೆ ತಯಾರಿಸುವಂತೆ ಸಿಂಹಧಾಮದಿಂದ ಪಶು ವೈದ್ಯಕೀಯ ಕಾಲೇಜಿಗೆ ಮನವಿ ಮಾಡಲಾಗಿದೆ. ಪ್ಲಾನ್‌ ಪ್ರಕಾರ ವರ್ಷದ 365 ದಿನವೂ ಮೇವು ಬೆಳೆಯಲು ಬೇಕಾದ ನೀರು, ಅಗತ್ಯ ಸಿಬ್ಬಂದಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಮೃಗಾಲಯದಲ್ಲಿರುವ ಸಸ್ಯಾಹಾರಿ ಪ್ರಾಣಿಗಳ ಪೈಕಿ ವಿಶೇಷವಾಗಿ, ಜಿಂಕೆ, ಸಾಂಬಾರ, ಕಡವೆ, ಬ್ಲಾಕ್‌ ಬಕ್‌, ನೀಲ್‌ಗಾಯ್‌ಗಳಿವೆ. ಇದರಲ್ಲಿ ಕೆಲವು ಪ್ರಾಣಿಗಳು ಪಂಜರದಲ್ಲಿ ಕಂಡರೆ, ಮಿಕ್ಕಿದವುಗಳನ್ನು ಸಫಾರಿಯಲ್ಲಿ ವೀಕ್ಷಿಸಬಹುದು.

Advertisement

ಪಶುವೈದ್ಯ ಕಾಲೇಜಿನ ಸಹಕಾರ: ಮಳೆಗಾಲದಲ್ಲಿ ಯಥೇತ್ಛವಾಗಿ ಮೇವು ಲಭ್ಯವಾಗುತ್ತದೆ. ಆದರೆ, ಬೇಸಿಗೆಯಲ್ಲಿ ಹಸಿರು ಮೇವಿನ ಕೊರತೆ ಎದುರಾಗುತ್ತದೆ. ಈ ಸಂದರ್ಭದಲ್ಲಿ ಗುಣಮಟ್ಟದ ಮೇವು ಸಿಗುವುದಿಲ್ಲ. ಇದರಿಂದ ಪ್ರಾಣಿಗಳಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಪಶು ವೈದ್ಯಕೀಯ ಕಾಲೇಜಿನ ಸಹಕಾರ ಕೇಳಲಾಗಿದೆ. ಪ್ರಾಣಿಗಳಿಗೆ ಬೇಕಾದ ಉತ್ತಮ ಗುಣಮಟ್ಟದ ಮೇವು ನೀಡುವ, ಕಡಿಮೆ ನೀರಿನಲ್ಲಿ ಬೆಳೆಯುವ ಮೇವಿನ ಬೀಜಗಳನ್ನು ಕೇಳಲಾಗಿದ್ದು, ಇಲಾಖೆ ಬೀಜ ಪೂರೈಸಿದ ನಂತರ ಮೇವು ಉತ್ಪಾದನೆಯಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ.

10 ಎಕರೆ ಮೀಸಲು: ಮೇವು ಬೆಳೆಯಲು 10 ಎಕರೆ ಜಾಗ ಮೀಸಲಿಡ ಲಾಗಿದೆ. ಸಫಾರಿ ಆವರಣದಲ್ಲಿ ಈಗಾಗಲೇ ಬಿತ್ತನೆ ಮಾಡಲಾಗಿದೆ. ಮಾಸ್ಟರ್‌ ಪ್ಲಾನ್‌ ಪ್ರಕಾರ ಇನ್ನಷ್ಟು ಜಾಗ ಲಭ್ಯವಾಗಲಿದ್ದು, ಸಫಾರಿ ವಿಸ್ತರಣೆಯಾಗಲಿದೆ. ಮೃಗಾಲಯಕ್ಕೆ ಪಾಲಿಕೆ ಮೂಲಕ ನೀರು ಸರಬರಾಜಾಗುತ್ತಿದ್ದು, ಮೇವು ಬೆಳೆಯಲು ಬೋರ್‌ವೆಲ್‌ ಕೊರೆಸಲು ಚಿಂತಿಸ ಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾ ಖೆಗೆ ಬೋರ್‌ವೆಲ್‌ ಪಾಯಿಂಟ್‌ ಗುರುತಿಸಲು ಮನವಿ ಮಾಡಿದ್ದು, ಹನಿ ನೀರಾವರಿ ಮೂಲಕ ಬಿತ್ತನೆಗೆ ಯೋಜನೆ ರೂಪಿಸಲಾಗಿದೆ.

ಮಳೆಗಾಲದಲ್ಲಿ ಬೀಜ ಬಿತ್ತನೆ ಮಾಡಲಾಗಿದ್ದು, ಉತ್ತಮ ಮೇವು ಲಭ್ಯವಾಗಿತ್ತು. ವರ್ಷ ಪೂರ್ತಿ ಮೇವು ಲಭ್ಯವಾಗಲು ಯೋಜನೆ ರೂಪಿಸಲಾಗಿದೆ. ಇದರಿಂದ ವರ್ಷಕ್ಕೆ 12 ಲಕ್ಷ ರೂ.ಉಳಿತಾಯವಾಗಲಿದೆ. ಒಂದಿಬ್ಬರಿಗೆ ಕೆಲಸವೂ ಸಿಗಲಿದೆ. ಮೃಗಾಲಯವನ್ನು ಇನ್ನಷ್ಟು ಜನಸ್ನೇಹಿಯಾಗಿಸಲು ಯೋಜನೆ ರೂಪಿಸಲಾಗಿದೆ. ಕೆಲವೇ ದಿನಗಳಲ್ಲಿ ಹೈಟೆಕ್‌ ಶೌಚಾಲಯ, ಪಾರ್ಕಿಂಗ್‌ ತಾಣ ಜನರಿಗೆ ಲಭ್ಯವಾಗಲಿದೆ.
-ಮುಕುಂದಚಂದ್ರ, ಇಡಿ, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ

* ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next