ಸವದತ್ತಿ: ಪಟ್ಟಣದಲ್ಲಿರುವ ಕಲ್ಮಠ ರುದ್ರಭೂಮಿ ಕಾಮಗಾರಿಗೆ ಈಗಾಗಲೇ ಸಾಕಷ್ಟು ಬಾರಿ ಅನುದಾನ ಬಿಡುಗಡೆಗೊಳಿಸಿದರೂ ಸಹ ಕಳಪೆ ಕಾಮಗಾರಿಯಿಂದ ಸಮರ್ಪಕ ಕೆಲಸವಾಗಿಲ್ಲ ಎಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳೀಯ ಪುರಸಭೆ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿಮಾತನಾಡಿದ ಅವರು, ಸ್ಮಶಾನ ಭೂಮಿಗಾಗಿ ಅದೆಷ್ಟು ಬಾರಿ ಅನುದಾನ ಬಿಡುಗಡೆ ಮಾಡಬೇಕು. ಶೇ.27 ಕ್ಕಿಂತ ಕೆಳಮಟ್ಟದಲ್ಲಿಟೆಂಡರ್ ಕರೆದರೆ ಗುತ್ತಿಗೆದಾರರಾದರೂಹೇಗೆ ಕೆಲಸ ಮಾಡಬೇಕು. ಅದಕ್ಕಾಗಿ ಇದೀಗ ಸಿದ್ದಪಡಿಸಿದ ಟೆಂಡರ್‌ಗಳನ್ನು ತಿರಸ್ಕರಿಸಲಾಗುವದು ಎಂದರು ತಿಳಿಸಿದರು.
ರಾಮಾಪೂರ ಸೈಟ್‌ನಲ್ಲಿರುವ ಮಕ್ಕಳ ಉದ್ಯಾನವನದ ಕಾಮಗಾರಿ ಕಳಪೆಯಾಗಿದ್ದು ಅಧಿಕಾರಿಗಳು ಈಕುರಿತು ಗಮನಹರಿಸಬೇಕು. ಪುರಸಭೆಯ ಆದಾಯಕ್ಕಿಂತ ಖರ್ಚೇ ಹೆಚ್ಚಾಗಿದ್ದು ಕೇವಲ ಅಭಿವೃದ್ಧಿ ಕೆಲಸಗಳಿಂದ ಎಲ್ಲವೂನಡೆಯದು. ಹೀಗಾಗಿ ಬಾಕಿ ಇರುವ ಮನೆ ಮತ್ತು ನೀರಿನ ಕರ ವಸೂಲಾತಿ ಮತ್ತುಯಲ್ಲಮ್ಮ ದೇವಸ್ಥಾನದಲ್ಲಿರುವ ವ್ಯಾಪಾರಿ ಮಳಿಗೆಗಳ ಬಾಡಿಗೆ ವಸೂಲಿಗೆ ಕ್ರಮವಹಿಸಿ ಎಂದು ಸೂಚಿಸಿದರು.
ನೂತನವಾಗಿ ಪ್ರಾರಂಭವಾಗಲಿರುವ ಕಾಯಿಪಲ್ಲೆ ಮಾರುಕಟ್ಟೆಯ ಕಾಮಗಾರಿಯಲ್ಲಿ90 ರಿಂದ 100 ಮಳಿಗೆಗಳಿಗೆ ಅವಕಾಶ ಕಲ್ಪಿಸಿ, ಮೂಲಸೌಕರ್ಯಗಳನ್ನು ಒದಗಿಸಿರಿ. ಕಟಕೋಳ ಬ್ಯಾಂಕ್ ಸರ್ಕಲ್ ಹತ್ತಿರದ ಉಳಿದ ಕಾಂಪ್ಲೆಕ್ಸ ನಿರ್ಮಾಣ ಕಾಮಗಾರಿಗೆ ಟೆಂಡರ ಪ್ರಕ್ರಿಯೆ ಆರಂಭಿಸಲಾಗುವುದು. ಈಗಾಗಲೇ ಮಾಸ್ಟರ ಪ್ಲ್ಯಾನ್ ರೂಪಿಸಲಾಗಿದ್ದು ಅಧಿಕಾರಿಗಳು ಶೀಘ್ರವೇ ಕಾರ್ಯಪ್ರವೃತ್ತರಾಗಿ ಎಂದರು.
ಸಭೆಯಲ್ಲಿ ಸತತ 2ನೇ ಬಾರಿಗೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಶಾಸಕ ಆನಂದ ಮಾಮನಿ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ. ಉಪಾಧ್ಯಕ್ಷ ದೀಪಕ ಜಾನ್ವೇಕರ, ಮುಖ್ಯಾಧಿಕಾರಿ ಪಿ.ಎಂ. ಚನ್ನಪ್ಪನವರ, ಸದಸ್ಯರಾದ ಶಿವಾನಂದ ಹೂಗಾರ, ಮೌಲಾಸಾಬ ತಬ್ಬಲಜಿ, ಅರ್ಜುನ ಅಮೋಜಿ, ಯಲ್ಲಪ್ಪ ರುದ್ರಾಕ್ಷಿ, ವೀರೇಂದ್ರ ಪ್ರಭುನವರ, ಇತರರಿದ್ದರು.