Advertisement

ಒಳಗಿನ ವಿನ್ಯಾಸಕ್ಕೂ ಇರಲಿ ಗಮನ

02:49 AM May 18, 2019 | mahesh |

ಸ್ವಂತ ಮನೆ ಹೊಂದಬೇಕು ಎನ್ನುವುದು ಬಹುತೇಕ ಮಂದಿಯ ಕನಸು. ಅದೇ ರೀತಿ ಮನೆಯನ್ನು ಚೆನ್ನಾಗಿ ಸಂಭಾಳಿಸುವುದನ್ನೂ ನಾವು ರೂಢಿಸಿಕೊಂಡರೆ ಅತಿಥಿಗಳ ಗಮನ ಸೆಳೆಯುವುದರ ಜತೆ ನಮ್ಮ ಮನಸ್ಸಿಗೂ ನೆಮ್ಮದಿ. ಚಿಕ್ಕ ಮನೆಯಾದರೂ ಪರವಾಗಿಲ್ಲ ಚೊಕ್ಕವಾಗಿರಬೇಕು. ಮನೆಯ ಒಳಾಂಗಣ ವಿನ್ಯಾಸ ಮಾಡುವಾಗ ಕೆಲವೊಂದು ವಿಚಾರದಲ್ಲಿ ಗಮನ ಹರಿಸಿದರೆ ಮಾನಸಿಕ ಸಂತೋಷ ಲಭಿಸುತ್ತದೆ ಎನ್ನುತ್ತಾರೆ ಖ್ಯಾತ ಒಳಾಂಗಣ ವಿನ್ಯಾಸಕಿ ಇನ್‌ಗ್ರಿಡ್‌ ಫೆಟೆಲ್ ಲೀ.

Advertisement

ಅವರ ಪ್ರಕಾರ ಪ್ರಕಾಶಮಾನ ಬಣ್ಣ, ವೃತ್ತಾಕಾರದ ವಿನ್ಯಾಸಗಳು ಹೆಚ್ಚು ಗಮನ ಸೆಳೆಯುತ್ತವೆ. ‘ಮನೆಯ ಒಳಾಂಗಣ ವಿನ್ಯಾಸ ಮಾಡುವಾಗ ಖಾಲಿ ಗೋಡೆ ಬಿಡುವುದಕ್ಕಿಂತ ಅದರಲ್ಲಿ ಕೆಲವೊಂದು ವಿನ್ಯಾಸಗಳನ್ನು ಬಿಡಿಸಿದರೆ ಚೆನ್ನಾಗಿರುತ್ತದೆ. ವಿವಿಧ ಬಣ್ಣಗಳ ಚುಕ್ಕಿ ತುಂಬಿದ ಕೋಣೆ ಮಕ್ಕಳ ಮನಸ್ಸನ್ನು ಹೆಚ್ಚು ಖುಷಿಯಾಗಿಡಬಲ್ಲದು. ವಿವಿಧ ವಿನ್ಯಾಸದ ಪಟ್ಟಿ, ಏರಿಳಿತವಿರುವ ಕೆಲವು ರಚನೆಗಳನ್ನು ಅಳವಡಿಸುವುದರಿಂದ ನಿಮ್ಮ ಮನೆಯನ್ನು ಇನ್ನಷ್ಟು ಅಂದಗೊಳಿಸಬಹುದು’ ಎನ್ನುತ್ತಾರೆ ಲೀ.

ಮನೆ ಒಳಾಂಗಣ ವಿನ್ಯಾಸಗೊಳಿಸಲಿರುವ ಕೆಲವೊಂದು ಟಿಪ್ಸ್‌ ಇಲ್ಲಿದೆ.
ಬಣ್ಣಗಳ ಆಯ್ಕೆ
ಮನೆಗಳ ಗೋಡೆಗಳ ಬಣ್ಣದ ಆಯ್ಕೆಯಲ್ಲಿ ಹೆಚ್ಚು ಗಮನ ಹರಿಸಬೇಕು. ಬಿಳಿ, ತಿಳಿ ಹಸುರು, ತಿಳಿ ನೀಲಿ, ಹಳದಿ ಮುಂತಾದ ಬಣ್ಣಗಳ ಆಯ್ಕೆ ಉತ್ತಮ. ಜತೆಗೆ ಕೋಣೆಯ ಒಳಗೆ, ಹಾಲ್ನಲ್ಲಿ ಬಲೂನ್‌, ಗೊಂಬೆ, ಹೂವು ದಾನಿಗಳನ್ನು ಇರಿಸಿಬಹುದು. ಕರ್ಟನ್‌ಗಳ ಆಯ್ಕೆಯಲ್ಲೂ ಒಂದಷ್ಟು ಎಚ್ಚರಿಕೆ ವಹಿಸಬೇಕು. ಕೋಣೆಯಲ್ಲಿ ಪ್ರತಿ ದಿನ ತಾಜಾ ಹೂವುಗಳನ್ನು ಇರಿಸುವುದರಿಂದ ಮನಸ್ಸು ಉಲ್ಲಾಸಿತವಾಗುತ್ತದೆ.

ವೃತ್ತ ಆಕಾರ ಉತ್ತಮ
ಚೌಕ ಆಕಾರದ ಡೈನಿಂಗ್‌ ಟೇಬಲ್ಗಿಂತ ವೃತ್ತಾಕಾರದ ಟೇಬಲ್ ಹೆಚ್ಚು ಉತ್ತಮ ಎನ್ನುತ್ತದೆ ಸಂಶೋಧನೆ. ಕೋನೀಯ ವಿನ್ಯಾಸಕ್ಕಿಂತ ವೃತ್ತಾಕಾರದ ವಿನ್ಯಾಸಕ್ಕೆ ಮಾನವನ ಮನಸ್ಸು ಬೇಗ ಸ್ಪಂದಿಸುತ್ತದೆ ಎನ್ನಲಾಗಿದೆ. ಎಂಆರ್‌ಐ ಮೆಷಿನ್‌ನಲ್ಲಿದ್ದವರಿಗೆ ಕೋನೀಯ ವಸ್ತುಗಳನ್ನು ತೋರಿಸಿದಾಗ ಮೆದುಳಿನ ಕೇಂದ್ರಕ್ಕೆ ಸಂದೇಶ ರವಾನೆಯಾಗಿ ಚಲನೆ ಕಂಡು ಬಂತು. ಇದು ಮನಸ್ಸಿನೊಳಗಿರುವ ಭಯ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಸೂಚಿಸುತ್ತದೆ. ಇನ್ನು ವೃತ್ತಾಕಾರದ ವಸ್ತುಗಳನ್ನು ನೋಡಿದಾಗ ಅವರಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ. ಮೆದುಳು ವೃತ್ತವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತದೆ ಎನ್ನುವ ಕಾರಣಕ್ಕೆ ಈ ವಿನ್ಯಾಸ ಉತ್ತಮ ಆಯ್ಕೆ.

ಸಸ್ಯಗಳಿರಲಿ
ನಿಸರ್ಗ ಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ ಮಾನಸಿಕ ಒತ್ತಡವನ್ನೂ ನಿವಾರಿಸುವ ಶಕ್ತಿ ಹೊಂದಿದೆ. ಗಿಡಗಳನ್ನು ಮನೆ ಒಳಗೆ ಇಡುವುದರಿಂದ ಮಾನಸಿಕ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎನ್ನುತ್ತದೆ ಸಂಶೋಧನೆ. ಜತೆಗೆ ಹಸಿರು ಪರಿಸರ ಕಾಣುವಂತೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಿ. ಹಾಲ್, ಬಾಲ್ಕನಿಯ ಮೂಲೆಯಲ್ಲಿ ಸಸ್ಯಗಳ ಪಾಟ್‌ಗಳನ್ನು ಇಡಿ. ಇದಕ್ಕೆ ಬೊನ್ಸಾಯ್‌ಗಳನ್ನೂ ಬಳಸಬಹುದು. ಜತೆಗೆ ಗೋಡೆಗಳಿಗೆ ಪ್ರಕೃತಿ ಸೌಂದರ್ಯದ ಚಿತ್ರಗಳನ್ನು ಅಳವಡಿಸಿ.

Advertisement

ನೀಟಾಗಿರಲಿ
ಹಾಲ್, ಡೈನಿಂಗ್‌, ಅಡುಗೆ ಕೋಣೆ ಮುಂತಾದೆಡೆಗಳಲ್ಲಿ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಟೇಬಲ್, ಕುರ್ಚಿಗಳನ್ನು ಒಪ್ಪವಾಗಿ ಜೋಡಿಸಿಡಿ. ಸೋಫಾ, ತಲೆ ದಿಂಬಿನ ಕವರ್‌ ಕೊಳೆಯಾಗದಂತೆ ಎಚ್ಚರ ವಹಿಸಿ. ಪೇಪರ್‌, ಪುಸ್ತಕಗಳನ್ನು ನೀಟಾಗಿ ಇಡಿ.

ಈ ಎಲ್ಲ ಅಂಶಗಳು ನಿಮ್ಮಲ್ಲೂ ಧನಾತ್ಮಕ ಅಂಶವನ್ನು ಮೂಡಿಸುತ್ತದೆ.

 ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next