Advertisement

ಸಂಶೋಧನೆಯ ಗುಣಮಟ್ಟ ಹೆಚ್ಚಿಸಲು ಗಮನ ಹರಿಸಿ

04:11 PM Apr 16, 2019 | pallavi |
ಶಿವಮೊಗ್ಗ: ದೇಶದ ವಿವಿಧ ಧನಸಹಾಯ ಸಂಸ್ಥೆಗಳ ಮಾನದಂಡಗಳನ್ನು ಪೂರೈಸುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೀರ ಸಾಧಾರಣವಾದ ಸಂಶೋಧನಾ ಲೇಖನಗಳು ಪ್ರಕಟವಾಗುತ್ತಿದ್ದು, ಇದು ಒಟ್ಟಾರೆ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟದ ಕುಸಿತಕ್ಕೆ ಕಾರಣವಾಗಿದೆ ಎಂದು ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಫೆಲೋ (ಎಫ್‌ಎನ್‌ಎಎಸ್ಸಿ) ಪ್ರೊ|ಪಿ. ಕಂದಸ್ವಾಮಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗ ‘ಕೈಗಾರಿಕಾ ಕ್ಷೇತ್ರದಲ್ಲಿ ಗಣಿತಶಾಸ್ತ್ರದ ಅನ್ವಯಿಕತೆ-ಇತ್ತೀಚಿನ ಬೆಳವಣಿಗೆಗಳು’ ಕುರಿತು ಪ್ರೊ|ಎಸ್‌.ಪಿ.ಹಿರೇಮಠ್… ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯಗಳು ಮತ್ತು ಇತರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರು ಪದೋನ್ನತಿಗಾಗಿ, ಧನಸಹಾಯ ಸಂಸ್ಥೆಗಳಿಂದ ಅನುದಾನ ಪಡೆಯುವುದಕ್ಕಾಗಿ, ಮತ್ತು ರ್‍ಯಾಂಕಿಂಗ್‌ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಆದರೆ ಇಂಥ ಸಂಶೋಧನಾ ರೇಸ್‌ನಿಂದಾಗಿ ಕೆಲವು ಕಳಪೆ ಲೇಖನಗಳು ಹೊರಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣಿತಶಾಸ್ತ್ರದ ಅನ್ವಯಿಕತೆ ಬಗ್ಗೆ ಮಾತನಾಡಿ, ಮುಂಬರುವ ದಿನಗಳಲ್ಲಿ ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಆರೋಗ್ಯ ಸೇವೆ, ಹಣಕಾಸು ನಿರ್ವಹಣೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಗಣಿತಶಾಸ್ತ್ರದ ಅನ್ವಯಿಕತೆ ಕುರಿತು ಅಧ್ಯಯನ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
 ಬೆಂಗಳೂರು ವಿವಿಯ ಡಾ| ಶಿವಕುಮಾರ್‌ ಮಾತನಾಡಿ, ಭಾರತದ ವಿವಿಗಳಲ್ಲಿ ಮೊದಲು ವಿಷಯಗಳನ್ನು ಆವಿಷ್ಕರಿಸಿ
ನಂತರ ಅವುಗಳ ಅನ್ವಯಿಕತೆಯ ಸಾಧ್ಯತೆಗಳ ಬಗ್ಗೆ ಹುಡುಕಾಟ ನಡೆಸಲಾಗುತ್ತದೆ. ಈ ತಪ್ಪು ಮಾದರಿಯನ್ನು ನಿಲ್ಲಿಸಿ, ವಿದೇಶದ ಶ್ರೇಷ್ಠ ವಿವಿಗಳಂತೆ ಮೊದಲು ಸಮಾಜದ ಸಮಸ್ಯೆಗಳನ್ನು ಗುರುತಿಸಿ, ಅಧ್ಯಯನ ನಡೆಸಿ ನಂತರ ಪರಿಹಾರಗಳನ್ನು ಕಂಡುಕೊಂಡಲ್ಲಿ ಗಣಿತದ ನೈಜ ಉಪಯುಕ್ತತೆಯನ್ನು ಪಡೆದಂತಾಗುತ್ತದೆ ಎಂದು ಸಲಹೆ ಎಂದು ನೀಡಿದರು.
ಕುಲಪತಿ ಪ್ರೊ| ಜೋಗನ್‌ ಶಂಕರ್‌ ಮಾತನಾಡಿ, ವಿಶ್ವವಿದ್ಯಾಲಯ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಅತ್ಯುನ್ನತ ಸಾಧನೆ ಮಾಡುತ್ತಿದೆ. 2019ರ ಎನ್‌ಐಆರ್‌ಎಫ್‌ ರ್‍ಯಾಂಕಿಂಗ್‌ನಲ್ಲಿ 73ನೇ ಸ್ಥಾನಕ್ಕೆ ಜಿಗಿದಿದೆ. ನ್ಯಾಕ್‌ ಸಂಸ್ಥೆಯಿಂದ ‘ಎ’ ಶ್ರೇಣಿ ಪಡೆದಿದೆ. ಇಂತಹ ಎಲ್ಲ ಸಾಧನೆಗಳ ಹಿಂದೆ ಗಣಿತಶಾಸ್ತ್ರ ಸೇರಿದಂತೆ ಎಲ್ಲ ವಿಭಾಗಗಳ ಕೊಡುಗೆ ಇದೆ ಎಂದರು. ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ| ಬಾಗೇವಾಡಿ, ಡಾ| ನರಸಿಂಹಮೂರ್ತಿ ಮಾತನಾಡಿದರು. ಡಾ| ಬಿ. ಜೆ. ಗಿರೀಶ, ಡಾ| ವೆಂಕಟೇಶ್‌, ವಿವಿಧ ವಿಶ್ವವಿದ್ಯಾಲಯಗಳ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಹಾಜರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next