Advertisement

ಅಭಿವೃದ್ಧಿಯತ್ತ ಗಮನ ಹರಿಸಿ

02:06 AM Nov 03, 2020 | mahesh |

ಉಪ ಚುನಾವಣೆ ನೀತಿ ಸಂಹಿತೆ ನ.12ರ ವರೆಗೂ ಇದೆಯಾದರೂ ತುರ್ತು ಕಾರ್ಯಗಳು, ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಷಯದಲ್ಲಿ ತೀರ್ಮಾನ ಕೈಗೊಳ್ಳಬಹುದಾಗಿದೆ.

Advertisement

ರಾಜ್ಯದಲ್ಲಿ ಪ್ರವಾಹ ಹಾಗೂ ಕೊರೊನಾ ನಿರ್ವಹಣೆ ನಡುವೆಯೇ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ, ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣೆ ಎದುರಾಗಿ ಅಭಿವೃದ್ಧಿ ಕಾರ್ಯಗಳು ಬಹುತೇಕ ಸ್ಥಗಿತಗೊಂಡಂತಾಗಿತ್ತು.

ಇದೀಗ ಉಪ ಚುನಾವಣೆ ಮತದಾನದ ಅನಂತರ ರಾಜ್ಯ ಸರಕಾರ ಮತ್ತೆ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಬೇಕಿದೆ. ಉಪ ಚುನಾವಣೆ ನೀತಿ ಸಂಹಿತೆ ನ.12ರವರೆಗೂ ಇದೆಯಾದರೂ ತುರ್ತು ಕಾರ್ಯಗಳು, ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಷಯದಲ್ಲಿ ತೀರ್ಮಾನ ಕೈಗೊಳ್ಳಬಹುದಾಗಿದೆ.

ವಿಧಾನಪರಿಷತ್‌ ಚುನಾವಣೆ ಹಾಗೂ ಉಪ ಚುನಾವಣೆ ಹಿನ್ನೆಲೆಯಲ್ಲಿ ಪ್ರಮುಖವಾಗಿ ಬಹುತೇಕ ಸಚಿವರು ಪ್ರಚಾರ ಕಾರ್ಯಗಳಲ್ಲಿ ನಿರತರಾಗಿದ್ದರು. ಜತೆಗೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಕಾರವೂ ಯಾವುದೇ ಹೊಸ ಯೋಜನೆ ಅಥವಾ ಘೋಷಣೆ ಗಳನ್ನು ಮಾಡುವಂತಿರಲಿಲ್ಲ.

ಪಕ್ಷದಿಂದ ಸಚಿವರನ್ನು ಚುನಾವಣ ಪ್ರಚಾರ ಕಾರ್ಯಕ್ಕೆ ನಿಯೋಜಿಸಿದ್ದರೆ ಸರಕಾರದಿಂದ ಅಧಿಕಾರಿ ಸಿಬಂದಿಯನ್ನು ಚುನಾವಣ ಕಾರ್ಯಕ್ಕೆ ನಿಯೋಜಿ ಸಲಾಗಿತ್ತು. ಹೀಗಾಗಿ, ಆಡಳಿತಯಂತ್ರ ಒಂದು ರೀತಿಯಲ್ಲಿ ಸ್ಥಗಿತವಾದಂತೆಯೇ ಆಗಿತ್ತು.

Advertisement

ಈ ಕಾರಣಕ್ಕಾಗಿಯೇ, ಇಂಥ ಸಂಕಷ್ಟದ ಸಮಯದಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಿಗುತ್ತಿಲ್ಲ. ಸಚಿವರು ಉಪ ಚುನಾವಣೆಯತ್ತ ಗಮನ ಹರಿಸಿದ್ದು ಸಂಕಷ್ಟಕ್ಕೆ ಸಿಲುಕಿರುವವರ ನೋವು ಕೇಳುವರಿಲ್ಲ ಎಂದು ವಿಪಕ್ಷ ನಾಯಕರು ಆರೋಪ ಮಾಡಿದ್ದರು.

ಇದರ ನಡುವೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹಿರಿಯ ಅಧಿಕಾ ರಿಗಳ ಸಭೆ ನಡೆಸಿ ಪ್ರವಾಹ ಪೀಡಿತ ಸಂತ್ರಸ್ತರ ಪರಿಹಾರ ಹಾಗೂ ತುರ್ತು ಕಾಮಗಾರಿಗಳಿಗೆ ಉಪ ಚುನಾವಣೆ ಅಡ್ಡಿಯಾಗದಂತೆ ನೋಡಿಕೊಳ್ಳಿ ಎಂಬ ಸೂಚನೆ ನೀಡಿದ್ದರು.

ಇದೀಗ ಎರಡೂ ಕ್ಷೇತ್ರಗಳಲ್ಲಿ ಮತದಾನದ ನಂತರ ಉಪ ಚುನಾವಣೆ ಪ್ರಕ್ರಿಯೆ ಬಹುತೇಕ ಮುಗಿಯಲಿದೆ. ಇನ್ನಾದರೂ ಆಡಳಿತ ಯಂತ್ರ ಚುರುಕುಗೊಳಿಸಲು ಸರಕಾರ ಮುಂದಾ ಗಬೇಕು. ಪ್ರವಾಹ ಪರಿಹಾರ ಕಾರ್ಯದ ಕಡೆ ಹೆಚ್ಚು ಗಮನ ಹರಿಸಬೇಕು.

ಜತೆಗೆ, ಬಜೆಟ್‌ ಕಾರ್ಯಕ್ರಮಗಳ ಅನುಷ್ಠಾನಕ್ಕೂ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಸಮಾಧಾನದ ವಿಷಯ. ಆದರೆ, ಹಬ್ಬದ ಸಂದರ್ಭಗಳಲ್ಲಿ ಮಾರುಕಟ್ಟೆ, ಶಾಪಿಂಗ್‌ ಮಾಲ್‌ಗ‌ಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದು ಕೇಂದ್ರ ಸರಕಾರವೂ ಎಚ್ಚರಿಕೆ ನೀಡಿದೆ. ಕೊರೊನಾ ಎರಡನೇ ಅಲೆ ಭೀತಿಯೂ ಇದೆ.

ಆರಂಭದಲ್ಲಿ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಸಾಂಕ್ರಾಮಿಕ ಈಗ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಾಗಿ ಹರಡಿಬಿಟ್ಟಿದೆ. ಹೀಗಾಗಿ ಕೊರೊನಾ ನಿಯಂತ್ರಣದ ಬಗ್ಗೆಯೂ ಸರಕಾರ ಹೆಚ್ಚು ಗಮನಹರಿಸಿ ನಿಯಂತ್ರಣ ಹಾಗೂ ಚಿಕಿತ್ಸಾ ಕ್ರಮಗಳಿಗೆ ಒತ್ತು ನೀಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next