Advertisement

ಹವಾಮಾನ ಆಧಾರಿತ ವೈಜ್ಞಾನಿಕ ಕೃಷಿಯತ್ತ ಒಲವು ಬೆಳೆಸಿಕೊಳ್ಳಿ

04:39 PM Feb 01, 2022 | Shwetha M |

ಮುದ್ದೇಬಿಹಾಳ: ರೈತರು ಹವಾಮಾನ ಆಧಾರಿತ ವೈಜ್ಞಾನಿಕ ಕೃಷಿಯತ್ತ ಒಲವು ಬೆಳೆಸಿಕೊಳ್ಳಬೇಕು ಎಂದು ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ| ಅಶೋಕ ಸಜ್ಜನ ಹೇಳಿದರು.

Advertisement

ಢವಳಗಿಯ ಬಸವ ಬಾಲಭಾರತಿ ಶಾಲಾ ಆವರಣದಲ್ಲಿ ಧಾರವಾಡದ ಕೃಷಿ ವಿಶ್ವ ವಿದ್ಯಾಲಯ, ಹವಾಮಾನ ಇಲಾಖೆ, ಗ್ರಾಮೀಣ ಕೃಷಿ ಹವಾಮಾನ ಸಲಹಾ ಸೇವಾ ಯೋಜನೆ, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಹವಾಮಾನ ಮುನ್ಸೂಚನೆ ಹಾಗೂ ಹವಾಮಾನ ಆಧರಿತ ಕೃಷಿ ರೈತರಿಗಾಗಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯದ ಹೊಡೆತಕ್ಕೆ ಸಿಕ್ಕು ಕೃಷಿ ಕ್ಷೇತ್ರ ನಲುಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆರ್ದ್ರತೆ, ಭಾಷ್ಪೀಭವನ, ಉಷ್ಣಾಂಶ, ಗಾಳಿ ಬೀಸುವ ದಿಕ್ಕು, ಮಳೆ ಸಾಧ್ಯತೆ ಮುಂತಾದವುಗಳ ಬಗ್ಗೆ ಹವಾಮಾನ ಇಲಾಖೆ ನೀಡುವ ಮುನ್ಸೂಚನೆಗಳನ್ನು ರೈತರು ಪರಿಗಣಿಸಬೇಕು. ಸರ್ಕಾರ ಕಾಲ ಕಾಲಕ್ಕೆ ಪರಿಚಯಿಸುವ ಯೋಜನೆಗಳ ಪ್ರಯೋಜನ ಪಡೆದು ವೈಜ್ಞಾನಿಕ ತಳಹದಿ ಮೇಲೆ ಕೃಷಿ ಕಾರ್ಯಗಳನ್ನು ಕೈಗೊಂಡು ಆರ್ಥಿಕ ಬೆಳವಣಿಗೆ ಸಾಧಿಸಬೇಕು ಎಂದರು.

ಬಸರಕೋಡದ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಮಾತನಾಡಿ, ಕೃಷಿ ಕ್ಷೇತ್ರವನ್ನು ಕಾಡಲಿರುವ ಜಾಗತಿಕ ತಾಪಮಾನದ ಅಡ್ಡ ಪರಿಣಾಮ ಎದುರಿಸಲು ಬೇಕಾದ ಸಿದ್ಧತೆಗಳನ್ನು ಈಗಿನಿಂದಲೇ ಆರಂಭಿಸಬೇಕು. ಇದನ್ನರಿತು ಬದಲಾಗುವ ಹವಾಮಾನಕ್ಕೆ ತಕ್ಕುದಾದ ಬೆಳೆ ವಿಧಾನ, ತಳಿ ಮತ್ತು ಅವಗಳನ್ನು ನಿರ್ಧರಿಸಲು ಹೆಚ್ಚಿನ ಸಂಶೋಧನೆಗಳು ನಡೆಯಬೇಕಿವೆ. ಆ ನಿಟ್ಟಿನಲ್ಲಿ ನಿಖರ ಕೃಷಿ ಯಾಂತ್ರೀಕರಣ ಪದ್ದತಿ ಹೆಚ್ಚು ಪ್ರಸ್ತುತವೆನಿಸಲಿದೆ ಎಂದರು. ಹವಾಮಾನ ಇಲಾಖೆ ತಾಂತ್ರಿಕ ಅಧಿಕಾರಿ ಡಾ| ಕುಲಕರ್ಣಿ ಮಾತನಾಡಿ, ಕೃಷಿ ಕ್ಷೇತ್ರಕ್ಕೆ ಆರ್ಥಿಕ ಸಂಕಷ್ಟ ತಂದೊಡ್ಡಲಿರುವ ಹವಾಮಾನ ಬದಲಾವಣೆ ಬಗ್ಗೆ ಹೆಚ್ಚು ಜಾಗೃತಿ ವಹಿಸಿ ಹವಾಮಾನ ನೋಡಿ ಕೃಷಿ ಮಾಡುವುದರಿಂದ ಅಪಾಯದಿಂದ ಪಾರಾಗಬಹುದು. ಬಿತ್ತನೆ, ನಿರ್ವಹಣೆ, ಕೋಯ್ಲು ಸೇರಿದಂತೆ ಕೃಷಿಯೊಂದಿಗೆ ಬೆಸೆದುಕೊಂಡಿರುವ ಹಲವು ಕಾರ್ಯಗಳಿಗೆ ಮತ್ತು ಹವಾಮಾನಕ್ಕೆ ವಿಶೇಷ ನಂಟಿರುವುದನ್ನು ಮನಗಂಡು ವೈಜ್ಞಾನಿಕ ಮಾಹಿತಿ ಆಧರಿಸಿ ನಿರ್ಧಾರ ಕೈಗೊಳ್ಳುವ ಜಾಣ್ಮೆಯನ್ನು ರೈತರು ಮೈಗೂಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ರೈತ ಗುರುನಾಥ ಬಿರಾದಾರ ಮಾತನಾಡಿ, ಇಂದಿನ ದಿನಗಳಲ್ಲಿ ಸಾವಯವ ಕೃಷಿಗೆ ಹೆಚ್ಚು ಮಹತ್ವ ಬರತೊಡಗಿದ್ದು ರೈತರು ಅದರ ಅಗತ್ಯ ಮನಗಂಡು ಪಾಲಿಸುವಂತೆ ಸಲಹೆ ನೀಡಿದರು.

Advertisement

ಕೃಷಿ, ಕೀಟ ಮತ್ತು ಹವಾಮಾನ ವಿಜ್ಞಾನಿಗಳಾದ ಡಾ| ಎಸ್‌.ಎಂ. ವಸ್ತ್ರದ ಅವರು ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ರೋಗಗಳ ಬಗ್ಗೆ, ಡಾ| ಎಸ್‌.ಎಸ್‌. ಕರಭಂಟನಾಳ ಅವರು ಹವಾಮಾನ ಆಧರಿತ ಕೀಟ ಬಾಧೆ ಬಗ್ಗೆ ಹಾಗೂ ಡಾ| ಪಿ.ಎಸ್‌. ಪತ್ತಾರ ಅವರು ಹವಾಮಾನ ಆಧರಿತ ಬೇಸಾಯ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.

ಕೃಷಿ ಅಧಿಕಾರಿ ಪ್ರಭುಗೌಡ ಕಿರದಳ್ಳಿ, ಗ್ರಾಪಂ ಸದಸ್ಯ ದುಂಡಪ್ಪ ಅರ್ಜುಣಗಿ, ಮುಖಂಡ ಅರವಿಂದ ಕಾಶಿನಕುಂಟಿ, ಪ್ರಗತಿಪರ ರೈತ ನಾನಾಗೌಡ ಕೊಣ್ಣೂರ ವೇದಿಕೆಯಲ್ಲಿದ್ದರು. ಸಂಗಮೇಶ ಸಜ್ಜನ ಸ್ವಾಗತಿಸಿದರು. ಚಂದು ಚಲವಾದಿ ನಿರೂಪಿಸಿದರು. ರಾಜು ಕಪಟ್ಕರ ವಂದಿಸಿದರು.

ತೊಗರಿ ಬೆಳೆಯಲ್ಲಿ ಬರುವ ನಟೆರೋಗ ನಿರ್ವಹಣೆಗಾಗಿ ಬೆಳೆ ಬದಲಾವಣೆ, ತಳಿ ಬದಲಾವಣೆ ಮಾಡಬೇಕು. ಜಿಆರ್‌ಜಿ 811 ತಳಿ ನೆಡುವುದು ಸೂಕ್ತ. -ಡಾ| ಎಸ್‌.ಎಂ.ವಸ್ತ್ರದ, ಕೃಷಿ ತಜ್ಞ

ಕಬ್ಬಿನಲ್ಲಿ ಬರುವ ಗೊನ್ನೆ ಹುಳು ಹತೋಟಿಗಾಗಿ ಮೆಟ್ರೈಜಿಯಂನ್ನು ತಿಪ್ಪೆ ಗೊಬ್ಬರದ ಜೊತೆಗೆ ಮಿಶ್ರಣ ಮಾಡಿ ಉಪಯೋಗಿಸುವುದು ಹೆಚ್ಚು ಪರಿಣಾಮಕಾರಿಯಾಗಿರಲಿದೆ. -ಡಾ| ಎಸ್‌.ಎಸ್‌.ಕರಭಂಟನಾಳ, ಕೃಷಿ ಕೀಟ ಶಾಸ್ತ್ರಜ್ಞ

Advertisement

Udayavani is now on Telegram. Click here to join our channel and stay updated with the latest news.

Next