ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರ ತಡರಾತ್ರಿ 11 ಗಂಟೆಯಿಂದ ಜ.1ರ ಮುಂಜಾನೆ 6 ಗಂಟೆವರೆಗೂ ಏರ್‌ಪೋರ್ಟ್‌ಗೆ ಹೋಗುವ ಮೇಲ್ಸೇತುವೆ ಹೊರತು ಪಡಿಸಿ ಉಳಿದವುಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಹಾಗೆಯೇ ವ್ಹೀಲಿಂಗ್ ಅಥವಾ ಡ್ರ್ಯಾಗ್ ರೇಸ್ ಹಾಗೂ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ನಗರದ ಎಲ್ಲಾ 48 ಸಂಚಾರ ಠಾಣೆ ವ್ಯಾಪ್ತಿ ಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಹೇಳಿದರು.
ಈ ಕುರಿತು ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ವರ್ಷದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಮೇಲ್ಸೇತುವೆಗಳಲ್ಲಿ ವ್ಹೀಲಿಂಗ್ ಮಾಡುವವರ ಹಾವಳಿ ಹೆಚ್ಚಾಗುವ ಮಾಹಿತಿಯಿದೆ. ಹೀಗಾಗಿ ಏರ್‌ಪೋರ್ಟ್ ಮೇಲ್ಸೇತುವೆ ಹೊರತುಪಡಿಸಿ ಇತರೆ ಎಲ್ಲಾ ಸೇತುವೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಹೇಳಿದರು.
ವಿಶೇಷ ಕಾರ್ಯಾಚರಣೆ: ನಗರಾದ್ಯಂತ ಡಿ.31ರಂದು ರಾತ್ರಿ ಮದ್ಯಪಾನ ಮಾಡಿ ವಾಹನ ಚಾಲನೆ, ವ್ಹೀಲಿಂಗ್ ಹಾಗೂ ಡ್ರಗ್ಸ್ ಸೇವನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ. ನಗರದ ಎಲ್ಲಾ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಾಕಾ ಬಂದಿ ಹಾಕಿ, ವಾಹನಗಳ ತಪಾಸಣೆ ನಡೆಯಲಿದ್ದು, ಒಂದು ವೇಳೆ ಮದ್ಯ ಸೇವಿಸಿ ಅಥವಾ ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದರೆ, ಅಂತಹ ವಾಹನ ಸವಾರನ ರಕ್ತ ಮಾದರಿಯನ್ನು ಪರಿಶೀಲಿಸಿ, ಮಾದಕ ವಸ್ತು ಸೇವನೆ ಪರಿಶೀಲಿಸಲಾಗುತ್ತದೆ. ಒಂದು ಡ್ರಗ್ಸ್ ಸೇವನೆ ಖಚಿತವಾದರೆ ಅಂತಹ ವಾಹನ ಚಾಲಕ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಎಲ್ಲೆಲ್ಲಿ ವಾಹನ ಸಂಚಾರ ಬಂದ್?: ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಡಿ.31ರ ತಡರಾತ್ರಿ 8 ಗಂಟೆಯಿಂದ ಜ.1ರ ನಸುಕಿನ 1 ಗಂಟೆವರೆಗೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ರೆಸ್ಟ್‌ಹೌಸ್ ರಸ್ತೆ, ರೆಸಿಡೆನ್ಸಿ ರಸ್ತೆಗಳು, ಚರ್ಚ್ ಸ್ಟ್ರೀಟ್ ರಸ್ತೆ, ಅನಿಲ್ ಕುಂಬ್ಳೆ ರಸ್ತೆ, ಮ್ಯೂಸಿಯಂ ರಸ್ತೆ, ಕಾವೇರಿ ಎಂಪೋರಿಯಂ ಜಂಕ್ಷನ್, ಒಪೇರಾ ಜಂಕ್ಷನ್, ಹಳೇ ಮದ್ರಾಸ್ ಬ್ಯಾಂಕ್ ರಸ್ತೆ ವೃತ್ತದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ: ಡಿ.31ರ ರಾತ್ರಿ 8 ಗಂಟೆಯಿಂದ ಎಂ.ಜಿ.ರಸ್ತೆ, ಕ್ವೀನ್ಸ್ ವೃತ್ತ ಕಡೆಯಿಂದ ಹಲಸೂರು ಹಾಗೂ ಇನ್ನು ಮುಂದಕ್ಕೆ ಹೋಗುವವರು ಚಾಲಕರು, ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್ -ಬಿ, ಆರ್.ವಿ.ಜಂಕ್ಷನ್ ಬಲ ತಿರುವು ಪಡೆದು ಕಬ್ಬನ್ ರಸ್ತೆ ಮೂಲಕ ಸಂಚರಿಸಿ ವೆಬ್ಸ್ ಜಂಕ್ಷನ್ ಬಳಿ ಎಂ.ಜಿ. ರಸ್ತೆ ಸೇರಿ ಮುಂದೆ ಸಾಗಬೇಕು. ಹಲಸೂರು ಕಡೆಯಿಂದ ಕಂಟೋನ್ಮೆಂಟ್ ಕಡೆ ಹೋಗುವವರು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹೋಗಬೇಕು. ಕಾಮರಾಜ ರಸ್ತೆಯಲ್ಲಿ ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್‌ವರೆಗೆ ವಾಹನಗಳ ನಿಲುಗಡೆ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ತಮ್ಮ ವಾಹನಗಳನ್ನು ಶಿವಾಜಿನಗರ, ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್‌ನ 1ನೇ ಮಹಡಿಯಲ್ಲಿ ವಾಹನ ನಿಲುಗಡೆ ಮಾಡಬಹುದು. ಇನ್ನು ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ ಎಂ.ಜಿ.ರಸ್ತೆ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್ ಕಡೆಗೆ ಹೋಗಬಹುದಾಗಿದೆ. ಪುನಃ ಎಂ.ಜಿ.ರಸ್ತೆಗೆ ಬರಬೇಕಾದರೆ ರೆಸಿಡೆನ್ಸಿ ರಸ್ತೆ ಕ್ರಾಸ್ ಮಾರ್ಗವಾಗಿ ಬರಬಹುದಾಗಿದೆ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಹೇಳಿದರು.
ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ?: ಡಿ.31ರಂದು ಸಂಜೆ 4 ಗಂಟೆಯಿಂದ ಜ.1ರ ಬೆಳಗಿನ ಜಾವ 3 ಗಂಟೆವರೆಗೆ ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ, ಚರ್ಚ್‌ಸ್ಟ್ರೀಟ್, ಬ್ರಿಗೇಡ್ ರಸ್ತೆಯಲ್ಲಿ, ಆರ್ಟ್ಸ್ ಆ್ಯಂಡ್ ಕ್ರಾಫ್ಟ್ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್ ವರೆಗೆ, ಚರ್ಚ್‌ಸ್ಟ್ರೀಟ್‌ನಲ್ಲಿ ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಸೆಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್‌ವರೆಗೆ, ಮ್ಯೂಸಿಯಂ ರಸ್ತೆ, ಹಳೇ ಮದ್ರಾಸ್ ಬ್ಯಾಂಕ್ ರಸ್ತೆ ವೃತ್ತ, ಮಾಲ್ ಆಫ್ ಏಷಿಯಾ ಹಾಗೂ ಇತರೆ ರಸ್ತೆಗಳಲ್ಲಿ ಪೊಲೀಸ್ ವಾಹನಗಳು ಹಾಗೂ ಕರ್ತವ್ಯನಿರತ ತುರ್ತು ಸೇವಾ ವಾಹನಗಳು ಹೊರತುಪಡಿಸಿ ಉಳಿದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ಈ ರಸ್ತೆಗಳಲ್ಲಿ ನಿಲುಗಡೆ ಮಾಡಿದ ವಾಹನಗಳನ್ನು ಡಿ.31ರ ಸಂಜೆ 4 ಗಂಟೆಯೊಳಗೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭಾರೀ ವಾಹನಗಳಿಗೆ ನಿರ್ಬಂಧ : ನಗರದೊಳಗೆ ಸಾಮಾನ್ಯ ದಿನಗಳಲ್ಲಿ ಸಂಜೆ ನಾಲ್ಕು ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಆದರೆ, ಡಿ.31ರಂದು ತಡರಾತ್ರಿ 11 ಗಂಟೆವರೆಗೆ ಭಾರೀ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ.