Advertisement

ಪುರಸಭೆಯಿಂದ ಇಂದು ಫ್ಲೈಓವರ್‌ ಅಡಿ ಸ್ವಚ್ಛತೆ?

10:56 AM Apr 06, 2022 | Team Udayavani |

ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್‌ನ ಫ್ಲೈ ಓವರ್‌ ಅಡಿಯಲ್ಲಿ ವರ್ಷಗಳಿಂದ ಪಾಳು ಬಿದ್ದಂತಿರುವ ತ್ಯಾಜ್ಯ ರಾಶಿ ತೆರವುಗೊಳಿಸಲು ಕುಂದಾಪುರ ಸಹಾಯಕ ಕಮಿಷನರ್‌ ನೀಡಿದ ಗಡುವು ಎ.5ಕ್ಕೆ ಮುಕ್ತಾಯವಾಗಿದೆ. ನೀಡಿದ ಎಚ್ಚರಿಕೆಯನ್ನು, ಕೈ ಮುಗಿದು ಮಾಡಿದ ಮನವಿಯನ್ನು ನವಯುಗ ಸಂಸ್ಥೆ ಸಾರಾಸಗಟು ತಿರಸ್ಕರಿಸುವ ಮೂಲಕ ಸಹಾಯಕ ಆಯುಕ್ತರ ಮಾತಿಗೆ ಬೆಲೆಯೇ ನೀಡಿಲ್ಲ. ಈ ಮೂಲಕ ತನ್ನ ಧಾಡಸಿತನವನ್ನು ಪ್ರದರ್ಶಿಸಿದ್ದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೂಡ ಅಸಹಾಯಕತೆ ಪ್ರದರ್ಶಿಸಿದೆ.

Advertisement

ತ್ಯಾಜ್ಯ ರಾಶಿ

ಫ್ಲೈಓವರ್‌ ಅಡಿಯಲ್ಲಿ ಪೈಪುಗಳು, ಯಂತ್ರಗಳು, ಕಬ್ಬಿಣದ ತ್ಯಾಜ್ಯ ರಾಶಿ ಹಾಕಲಾಗಿದೆ. ಸ್ವಲ್ಪ ಮಟ್ಟಿಗೆ ತೆರವು ಮಾಡಲಾಗಿದ್ದರೂ ಇನ್ನೂ ಬಾಕಿ ಇದೆ. ನೆಲವನ್ನು ಅಗೆದು ಮಣ್ಣಿನ, ಸಿಮೆಂಟಿನ ರಾಶಿಯನ್ನು ಅಲ್ಲೇ ಬಿಡಲಾಗಿದೆ. ಫ್ಲೈಓವರ್‌ ಅಡಿ ಸ್ವತ್ಛಗೊಳಿಸಿ ಪಾರ್ಕ್‌ ನಿರ್ಮಿಸಿ, ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡಬೇಕೆಂದು ಸಾರ್ವಜನಿಕರ, ಎಂಜಿನಿಯರ್‌ ಅಸೋಸಿಯೇಶನ್‌ನ, ಪೊಲೀಸ್‌ ಇಲಾಖೆಯ, ಪುರಸಭೆಯ ಆಶಯವಾಗಿತ್ತು. ಇದಾವುದಕ್ಕೂ ಅವಕಾಶ ಕೊಡದ ನವಯುಗ ಸಂಸ್ಥೆ, ಜನರಿಗೆ ಬೇಕಾದ ಯಾವ ಕೆಲಸವನ್ನೂ ಮಾಡದಿದ್ದರೂ, ಅಧಿಕಾರಿಗಳು ಹೇಳಿದ್ದನ್ನೂ ಅನುಷ್ಠಾನ ಮಾಡದೇ ಇದ್ದರೂ, ಸಾರ್ವಜನಿಕರು ವಾಹನಗಳನ್ನು ನಿಲ್ಲಿಸದಂತೆ ಕಟ್ಟೆ ಕಟ್ಟುವ ಕೆಲಸವನ್ನು ನಿಯತ್ತಾಗಿ ಮಾಡಿದೆ.

ಸದನದಲ್ಲಿ ಫ್ಲೈಓವರ್‌ ಅಡಿಯಲ್ಲಿ ತ್ಯಾಜ್ಯ ರಾಶಿ ಯಾವಾಗ ತೆರವು ಮಾಡಲಾಗುತ್ತದೆ ಎಂದು ಸೆಪ್ಟಂಬರ್‌ನಲ್ಲಿ ವಿಧಾನಪರಿಷತ್‌ನಲ್ಲಿ ಪ್ರತಾಪಚಂದ್ರ ಶೆಟ್ಟರು ಪ್ರಶ್ನಿಸಿದ್ದರು. ಅದರ ಮರುದಿನ ಸಹಾಯಕ ಕಮಿಷನರ್‌ ಭೇಟಿ ನೀಡಿ ತೆರವಿಗೆ 14 ದಿನಗಳ ಅವಧಿ ನೀಡಿದ್ದರು. 6 ತಿಂಗಳು ಕಳೆದರೂ ತೆರವಾಗಲಿಲ್ಲ. ನವಯುಗ ಸಂಸ್ಥೆ ಇದಕ್ಕೆಲ್ಲ ಮಣೆ ಹಾಕಲೇ ಇಲ್ಲ. ಮನ್ನಣೆ ನೀಡಲೇ ಇಲ್ಲ. ಇದರ ಬಳಿಕ ನೂತನ ಸದಸ್ಯ ಮಂಜುನಾಥ ಭಂಡಾರಿ ಅವರೂ ಈ ಕುರಿತು ಪ್ರಶ್ನಿಸಿದ್ದರು. ಯಾವುದಕ್ಕೂ ನವಯುಗ ಕಿಮ್ಮತ್ತು ನೀಡುತ್ತಿಲ್ಲ.

ಎಚ್ಚರಿಕೆ

Advertisement

ಕೆಲವು ದಿನಗಳ ಹಿಂದೆ ಮತ್ತೊಮ್ಮೆ ಸಭೆ ಕರೆದ ಸಹಾಯಕ ಕಮಿಷನರ್‌ ಕೆ. ರಾಜು ಎ.5ರ ಒಳಗೆ ಫ್ಲೈಓವರ್‌ ಅಡಿಯಲ್ಲಿ ಸ್ವತ್ಛವಾಗಬೇಕೆಂದು ಎಚ್ಚರಿಸಿದ್ದರು. ಮಾಡದೇ ಇದ್ದರೆ ಎ. 6ರಂದು ಪುರಸಭೆಯವರೇ ತೆರವು ಮಾಡಬೇಕು, ಅದರ ವೆಚ್ಚವನ್ನು ನವಯುಗ ಸಂಸ್ಥೆ ಭರಿಸಬೇಕು ಎಂದು ಹೇಳಿದ್ದರು. ಎ. 5ರಂದು ತೆರವಾಗದ ಕಾರಣ ಎ.6ರಂದು ಪುರಸಭೆ ತೆರವು ಮಾಡಲಿದೆಯೇ ಎಂದು ಜನರು ಕಾಯುತ್ತಿದ್ದಾರೆ. ಹೀಗೆ ಕುಂಟುತ್ತಾ, ಕುರುಡರಂತೆ ಸಾಗುವ ಸಂಸ್ಥೆ ಎ. 10ರಂದು ನಗರ ಪ್ರವೇಶಕ್ಕೆ ಅನುವು ಮಾಡಿಕೊಡುವುದು ಹೌದಾ ಎಂಬ ಪ್ರಶ್ನೆಯೂ ಮೂಡಿದೆ.

ಹೆದ್ದಾರಿ ಇಲಾಖೆ

ಸಕಾಲದಲ್ಲಿ ಕಾಮಗಾರಿ ನಿರ್ವಹಿಸದೇ, ಹತ್ತು ವರ್ಷಗಳ ಕಾಲ ಸಮಯ ತೆಗೆದುಕೊಂಡ ಸಂಸ್ಥೆ ಈಗ ರಸ್ತೆ, ಫ್ಲೈಓವರ್‌, ಅಂಡರ್‌ಪಾರ್ಸ್‌ ಪೂರ್ಣವಾಗಿದ್ದರೂ ಅದಕ್ಕೆ ಬೀದಿದೀಪ, ಚರಂಡಿ, ನೀರು ಹರಿಯುವ ವ್ಯವಸ್ಥೆ, ಸರ್ವಿಸ್‌ ರಸ್ತೆ ಇದಾವುದನ್ನೂ ಮಾಡಿಲ್ಲ. ನಗರಕ್ಕೆ ಪ್ರವೇಶ ನೀಡಿಲ್ಲ. ಸ್ವಾಗತ ಕಮಾನು ಹಾಕಿಲ್ಲ. ಕುಂದಾಪುರಕ್ಕೆ ಪ್ರವೇಶ ಎಲ್ಲಿ ಎಂದೇ ತಿಳಿಯುವುದಿಲ್ಲ. ಏಕೆಂದರೆ ಊರು ಸೂಚಕ ಫ‌ಲಕವೇ ಇಲ್ಲ. ಹೀಗೆಲ್ಲ ಇದ್ದರೂ ಟೋಲ್‌ ವಸೂಲಾತಿ ಅನೂಚಾನವಾಗಿ ನಡೆಯುತ್ತಿದೆ. ಸಕಾಲದಲ್ಲಿ ಕೆಲಸ ಮಾಡಿಲ್ಲ ಎಂದು ಹೆದ್ದಾರಿ ಇಲಾಖೆ ದಂಡ ಹಾಕುತ್ತದೆ. ದಂಡ ಕಟ್ಟುವ ಸಂಸ್ಥೆ ಮತ್ತೆ ದಿನದೂಡುತ್ತದೆ, ಹಣ ವಸೂಲಿ ಮಾಡುತ್ತದೆ. ಕಾಮಗಾರಿ ಮಾಡದೇ ಇರಲು ಹಣಕಾಸಿನ ಕೊರತೆ ಎಂಬ ಕಾರಣ ಕೊಡುತ್ತದೆ. ಇದನ್ನೆಲ್ಲ ಜನ ನಂಬುತ್ತಾ, ನೋಡುತ್ತಾ ಕೂರಬೇಕು.

ತೆಗೆಸಲು ಸೂಚನೆ

ನವಯುಗ ಸಂಸ್ಥೆಯವರು ಸಮಯಕ್ಕೆ ಸರಿಯಾಗಿ ಆದೇಶ ಪಾಲನೆ ಮಾಡಿಲ್ಲ. ಆದ್ದರಿಂದ ಪುರಸಭೆಯವರೇ ತೆಗೆದು ಅದರ ವೆಚ್ಚವನ್ನು ನವಯುಗದಿಂದ ಭರಿಸಲು ಸೂಚಿಸಿದ್ದೇನೆ. -ಕೆ.ರಾಜು, ಸಹಾಯಕ ಕಮಿಷನರ್‌, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next