ಹಳೆಯಂಗಡಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 11ರಿಂದ 15ರ ವರೆಗೆ ಗ್ರಾಮೀಣ ಭಾಗದ ಪ್ರತೀ ಮನೆಯಲ್ಲಿಯೂ (ಹರ್ ಘರ್ ಝಂಡಾ) ರಾಷ್ಟ್ರ ಧ್ವಜವನ್ನು ಹಾರಾಡಿಸುವ ಬಗ್ಗೆ ಸ್ಥಳೀಯ ಸಮುದಾಯಗಳಿಗೆ, ಸರಕಾರ ಹಾಗೂ ಸರಕಾರೇತರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರಕಾರದ ಪಂಚಾಯತ್ ರಾಜ್ ಇಲಾಖೆಯು ಸೂಚಿಸಿದೆ.
ಪಾಲಿಸ್ಟರ್, ಹತ್ತಿ, ಉಣ್ಣೆ, ರೇಷ್ಮೆ, ಖಾದಿ ಬಟ್ಟೆಯಿಂದ 20-30 ಅಳತೆಯ ಅಥವಾ ಅದರ ಅರ್ಧದ ಅಳತೆಯ ಧ್ವಜವನ್ನು ಬಳಸಿಕೊಳ್ಳಬೇಕು, ಪ್ಲಾಸ್ಟಿಕ್ ಧ್ವಜಕ್ಕೆ ಅವಕಾಶ ಇಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ. ಸ್ವ ಸಹಾಯ ಸಂಘಗಳೇ ನಿರ್ಮಿಸಲು ಮುಂದಾದಲ್ಲಿ ಗ್ರಾ.ಪಂ. ಸಹಕಾರ ನೀಡಬೇಕು. ಗ್ರಾಮಸ್ಥರು ತಮ್ಮ ಮನೆಯ ಅಂಗಣದಲ್ಲಿಯೇ ಎತ್ತರದ ಪ್ರದೇಶದಲ್ಲಿ ಧ್ವಜವನ್ನು ಹಾರಿಸಲು ಪ್ರೇರಣೆ ನೀಡಲು ಗ್ರಾ.ಪಂ.ಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಾದ ಪಂಚಾಯತ್ ರಾಜ್ ಸಂಸ್ಥೆಗಳು, ಸ್ವ ಸಹಾಯ ಸಂಘ-ಒಕ್ಕೂಟ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಕೇಂದ್ರ, ಸಹಕಾರ ಸಂಘ, ಉಪ ಅಂಚೆ ಕಚೇರಿ, ಆಶಾ, ಅಂಗನವಾಡಿ ಕಾರ್ಯಕರ್ತರು, ಗ್ರಾಮ ರೋಜ್‌ಗಾರ್ ಸೇವಕರು, ಶಿಕ್ಷಕರು ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಶಿಬಿರ, ಭಿತ್ತಿ ಪತ್ರಗಳ ಮೂಲಕ ಪ್ರಚಾರ ನಡೆಸಬೇಕು. ರಾಷ್ಟ್ರೀಯ ಭಾವೈಕ್ಯಕ್ಕಾಗಿ ಸರಕಾರ ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಮನೆ ಮನೆಗೂ ರಾಷ್ಟ್ರಧ್ವಜ ಕಾರ್ಯಕ್ರಮದ ರೂಪರೇಖೆಯನ್ನು ಸಿದ್ಧಪಡಿಸಿ, ಈ ಅಭಿಯಾನದಲ್ಲಿ ಭಾಗಿಯಾದವರ ಪಾತ್ರ ಸ್ಪಷ್ಟಪಡಿಸಿಕೊಂಡು ಆಗಸ್ಟ್ 11ರಿಂದ 15ರ ಅವಧಿಯಲ್ಲಿ ಈ ಕಾರ್ಯಕ್ರಮ ಪ್ರತೀ ಮನೆಗೂ ತಲುಪುವಂತೆ ಮಾಡಬೇಕು. ಎಲ್ಲ ಸಮುದಾಯ ಹಾಗೂ ಸಾರ್ವಜನಿಕರನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಎಲ್ಲ ಇಲಾಖೆ, ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ವಿವಿಧ ಸಂಘಟನೆಗಳು, ಸ್ಥಳೀಯರು ಹಾಗೂ ಶಾಲೆಗಳ ಸಹಭಾಗಿತ್ವದಲ್ಲಿ ಆಗಸ್ಟ್ 11ರಿಂದ 15ರ ವರೆಗೆ ಮನೆ ಮನೆಗೂ ರಾಷ್ಟ್ರಧ್ವಜ ಅಭಿಯಾನ ನಡೆಯಲಿದೆ. ಸರಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು.
– ಪ್ರಸನ್ನ ಎಚ್., ಜಿ.ಪಂ. ಸಿಇಒ, ಉಡುಪಿ