ಬೆಂಗಳೂರು : ವಿಳಂಬಗೊಂಡಿರುವ ಈಜಿಪುರ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಕುರಿತು ಸಂಸದ ತೇಜಸ್ವಿ ಸೂರ್ಯ ಅಸಮಾಧಾನಗೊಂಡಿದ್ದು, ಬಿಬಿಎಂಪಿ ಯ ಕಾರ್ಯನಿರ್ವಹಣೆಗೆ ಅತೃಪ್ತಿ ತಮ್ಮ ವ್ಯಕ್ತಪಡಿಸಿ, ಸಂಬಂಧಿತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಸದ ಸೂರ್ಯ ಅವರು ನೂತನವಾಗಿ ವಿಧಾನ ಪರಿಷತ್ ಗೆ ಆಯ್ಕೆಗೊಂಡಿರುವ ಶ್ರೀ ಗೋಪಿನಾಥ್ ರೆಡ್ಡಿ ರವರೊಂದಿಗೆ, 2.5 ಕಿಮೀ ಉದ್ದದ ಫ್ಲೈ ಓವರ್ ನಿರ್ಮಾಣ ಕಾಮಗಾರಿಯ ಪರಿಶೀಲನೆ ನಡೆಸಿ,ಕಾಮಗಾರಿ ವಿಳಂಬದ ಕುರಿತು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾಹಿತಿ ಕೇಳಿ ಅಸಮಾಧಾನ ವ್ಯಕ್ತಪಡಿಸಿದರು.
2.5ಕಿಮೀ ಕಾಮಗಾರಿಯು ಕೇಂದ್ರೀಯ ಸದನ ದಿಂದ ಸೋನಿ ವರ್ಲ್ಡ್ ಜಂಕ್ಷನ್ ಮಾರ್ಗವಾಗಿ ಈಜಿಪುರ ವನ್ನು ಸಂಪರ್ಕಿಸಲಿದ್ದು, 2018 ರಲ್ಲಿ ಶುರುವಾಗಿರುವ ಕಾಮಗಾರಿಗೆ 203 ಕೋಟಿ ರೂ, ವೆಚ್ಚದಲ್ಲಿ 30 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿತ್ತು. ಆದರೆ ಕಾಮಗಾರಿಯ ವಿಳಂಬಕ್ಕೆ ಬಿಬಿಎಂಪಿ ಹಾಗೂ ಗುತ್ತಿಗೆ ಪಡೆದಿರುವ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ಅಸಮರ್ಪಕ ಕಾರ್ಯನಿರ್ವಹಣೆ ಕಾರಣ ಎಂದು ಸಂಸದರು ಅತೃಪ್ತಿ ಹೊರಹಾಕಿದರು.
“ಬಹುದಿನಗಳಿಂದ ವಿಳಂಬಗೊಂಡಿರುವ ಈಜಿಪುರ ಫ್ಲೈ ಓವರ್ ಕಾಮಗಾರಿಯಿಂದ ಕೋರಮಂಗಲದ 100 ಅಡಿ ರಸ್ತೆಯಲ್ಲಿ ಸಂಚರಿಸಲು ಸಾಕಷ್ಟು ಅನಾನುಕೂಲ ಉಂಟಾಗುತ್ತಿದ್ದು, ಈ ಕ್ಷಣದ ವರದಿಯಂತೆ ಕೇವಲ ಶೇ45 ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದ್ದು, ಬಿಬಿಎಂಪಿ ವತಿಯಿಂದ ನೂತನವಾಗಿ ನಿಗದಿಗೊಂಡಿರುವ ಕಾಲಮಿತಿಯು 2023 ಜನವರಿಯ ತನಕ ಇದ್ದು, ಬಿಬಿಎಂಪಿಯ ಇಂತಹ ಬೇಜವಾಬ್ದಾರಿ ಕಾಮಗಾರಿ ನಿರ್ವಹಣೆಯನ್ನು ಒಪ್ಪಲಾಗದು. ಕಳೆದ 3 ವರ್ಷಗಳಲ್ಲಿ ಕೇವಲ ಶೇ 45 ರಷ್ಟು ಮಾತ್ರ ಪೂರ್ಣಗೊಂಡಿದ್ದು, ಉಳಿದ 13 ತಿಂಗಳುಗಳಲ್ಲಿ ಉಳಿದಿರುವ ಶೇ.55 ರಷ್ಟು ಕಾಮಗಾರಿ ಮುಗಿಸಲು ಸಾಧ್ಯವೇ ? ಗುತ್ತಿಗೆದಾರರೇ ಸಾರ್ವಜನಿಕರ ತೊಂದರೆಗೆ ಹೊಣೆಗಾರರು ಎಂದರು
ಇಂತಹ ಸಣ್ಣ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸಲು ಸಾಧ್ಯವಾಗದ ಬಿಬಿಎಂಪಿಯ ಕಾರ್ಯನಿರ್ವಹಣೆ ನಿಜಕ್ಕೂ ಅದರ ಅಸಮರ್ಥತೆಗೆ ಸಾಕ್ಷಿ. ಇಡೀ ದೇಶಾದ್ಯಂತ ಕಾಶಿ, ನಾಗ್ಪುರ, ದೆಹಲಿ,ಹೈದರಾಬಾದ್ ಅಥವಾ ಚೆನ್ನೈ ಗಳಲ್ಲಿ ದೊಡ್ಡ ಪ್ರಮಾಣದ ಕಾರಿಡಾರ್ ಗಳು, ಫ್ಲೈ ಓವರ್ ಗಳು, ಹೈ ವೇ ಗಳು ಕೆಲವೇ ವರ್ಷಗಳಲ್ಲಿ ತ್ವರಿತಗತಿಯಲ್ಲಿ ನಿರ್ಮಾಣಗೊಂಡಿರುವ ಉದಾಹರಣೆಗಳಿರುವಾಗ, ಬಿಬಿಎಂಪಿ ಮಾತ್ರ ಕೇವಲ 2.5 ಕಿಮೀ ಫ್ಲೈ ಓವರ್ ಕಾಮಗಾರಿಯನ್ನು 3 ವರ್ಷಗಳು ಮಿಕ್ಕಿದರೂ ಇನ್ನೂ ಶೇ 45 ರಷ್ಟು ಮಾತ್ರ ಮುಗಿಸಿರುವುದು ಅಕ್ಷಮ್ಯ. ಈ ಕುರಿತು ಬಿಬಿಎಂಪಿ ಆಯುಕ್ತರಾಗಿರುವ ಶ್ರೀ ಗೌರವ್ ಗುಪ್ತ ರೊಂದಿಗೆ ನಾನು ಮಾತನಾಡಿದ್ದು, ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದ್ದು, ಅಗತ್ಯವಿದ್ದರೆ ಗುತ್ತಿಗೆದಾರರನ್ನು ಬದಲಿಸಲು ಸಹ ತಿಳಿಸಿದ್ದೇನೆ ‘ ಎಂದು ಸೂರ್ಯ ಕಾಮಗಾರಿ ಪರಿಶೀಲನೆ ನಂತರ ವಿವರಿಸಿದರು.
ಮುಂದಿನ 2 ವಾರಗಳ ನಂತರ ಬಿಬಿಎಂಪಿ ಆಯುಕ್ತರೊಂದಿಗೆ ಕಾಮಗಾರಿ ಪರಿಶೀಲನೆ ನಡೆಸುವುದಾಗಿಯೂ ಕೂಡ ಸಂಸದರು ಇದೇ ಸಂದರ್ಭದಲ್ಲಿ ತಿಳಿಸಿದರು.