Advertisement
ನವಮಂಗಳೂರು ಬಂದರು (NMPT) ಸಮೀಪದಲ್ಲಿಯೇ SEZ ಉತ್ಪಾದನ ವಲಯವಿದೆ. ದೇಶದಲ್ಲಿಯೇ ಗಮನಸೆಳೆದ ಬೃಹತ್ ಕೈಗಾರಿಕೆಗಳು ಇಲ್ಲಿರುವ ಹಿನ್ನೆಲೆಯಲ್ಲಿ ಬೃಹತ್ ವಾಹನಗಳು SEZ ಪ್ರವೇಶಕ್ಕೂ ಮುನ್ನ ಕಾರಿಡಾರ್ ನಿರ್ಮಾಣ ಮಾಡಬೇಕಾಗುತ್ತದೆ. ಆದರೆ, ಸದ್ಯ ಇಲ್ಲಿ ಕಚ್ಚಾ ರಸ್ತೆ ಇದೆ. ಜತೆಗೆ ಎಸ್‌ಇಝಡ್ ಪ್ರವೇಶ ಮಾಡಲು ರೈಲ್ವೇ ಹಳಿಯನ್ನು ಬೃಹತ್ ವಾಹನಗಳು ದಾಟಿ ಹೋಗಬೇಕಿದೆ. ಈ ಕಾರಣಕ್ಕಾಗಿ ಫಲ್ಗುಣಿ ನದಿಯ ಸಮೀಪದಿಂದ SEZ ದ್ವಾರದವರೆಗೆ ಪ್ಲೈಓವರ್ ನಿರ್ಮಿಸಲಾಗಿದೆ. ಕಳೆದ ಎರಡು ವರ್ಷದ ಹಿಂದೆಯಷ್ಟೇ ಇದರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 40 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ. 700 ಮೀಟರ್ ಉದ್ದ ಹಾಗೂ 10.5 ಮೀಟರ್ ಅಗಲದಲ್ಲಿ ಪ್ಲೈಓವರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ದಕ್ಷಿಣ ರೈಲ್ವೇ ವಿಭಾಗ ಕೊನೆಗೊಳ್ಳುವ ಹಾಗೂ ಕೊಂಕಣ ರೈಲ್ವೇ ವಿಭಾಗ ಆರಂಭವಾಗುವ ನಗರದ ಜೋಕಟ್ಟೆ ರೈಲ್ವೇ ಹಳಿಯ ಮೇಲೆ ಪ್ಲೈಓವರ್ ನಿರ್ಮಾಣವಾಗುತ್ತಿದೆ. ಈಗ ನವಮಂಗಳೂರು ಬಂದರು ಭಾಗದಿಂದ SEZನತ್ತ ತೆರಳುವ ಸರಕು ವಾಹನಗಳು ರಸ್ತೆಯ ಮುಖೇನ ಜೋಕಟ್ಟೆ ರೈಲ್ವೇ ಹಳಿ ದಾಟಿ ಸಾಗಬೇಕಿದೆ. ಕೆಲವೊಮ್ಮೆ ಇಲ್ಲಿ ರೈಲು ಸಂಚರಿಸುವ ವೇಳೆ ಸರಕು ವಾಹನಗಳು ಕೆಲವು ಸಮಯ ರಸ್ತೆಯಲ್ಲಿಯೇ ಕಾಯಬೇಕಿದೆ. ಜತೆಗೆ ದೊಡ್ಡ ದೊಡ್ಡ ಸರಕು ವಾಹನಗಳು ಜೋಕಟ್ಟೆ ರೈಲ್ವೇ ಕ್ರಾಸ್‌ನಲ್ಲಿ ತಿರುಗಲು ಕಷ್ಟವಾಗುವ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆಯ ಆವಶ್ಯಕತೆ ಇತ್ತು. SEZಗೆ ತೆರಳುವ ವಾಹನಗಳು ಸರಾಗವಾಗಿ ತೆರಳುವಂತಾಗಲು ಕಾರಿಡಾರ್ ವ್ಯವಸ್ಥೆ ರೂಪಿಸಬೇಕು ಎಂಬ ನೆಲೆಯಲ್ಲಿ ಪ್ಲೈಓವರ್ ನಿರ್ಮಿಸಲಾಗಿದೆ. ಖಾಸಗಿ ವಾಹನ ಪ್ರವೇಶ; ಸಾಧ್ಯತೆ ಕಡಿಮೆ
ಫ್ಲೈಓವರ್ ಪೂರ್ಣಗೊಂಡ ಬಳಿಕ SEZಗೆ ತೆರಳುವ ಎಲ್ಲ ವಾಹನಗಳು ಪ್ಲೈಓವರ್‌ನಲ್ಲಿ ಸಂಚರಿಸಲಿದೆ. ಖಾಸಗಿ ವಾಹನಗಳಿಗೆ ಇದರಲ್ಲಿ ಪ್ರವೇಶ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಪ್ರತೀನಿತ್ಯ ಸುಮಾರು 100 ಸರಕು ವಾಹನಗಳಿಗೆ ಫ್ಲೈಓವರ್ ಸಹಕಾರಿಯಾಗಲಿದೆ. ಟೋಟಲ್ ಗ್ಯಾಸ್ ಮುಂಭಾಗದಿಂದ ಆರಂಭವಾದ ಫ್ಲೈಓವರ್ SEZ ಪ್ರವೇಶದವರೆಗೆ ಇದ್ದು, ಆ ಬಳಿಕ ಎಂಆರ್‌ಪಿಎಲ್ ಮೂರನೇ ಫೇಸ್ ವರೆಗೆ ರಸ್ತೆ ಜೋಡಿಸಲಾಗಿದೆ.
Related Articles
ರೈಲ್ವೇ ಹಳಿ ಸಾಗುವ ಸ್ಥಳದಲ್ಲಿ ರೈಲ್ವೇ ಇಲಾಖೆ ಅನುಮತಿ ಪಡೆದು ಅದರ ಸೂಚನೆಯಂತೆಯೇ ಕಾಮಗಾರಿ ನಡೆಸಬೇಕು. ಜೋಕಟ್ಟೆ ಪ್ರದೇಶದ ಇಕ್ಕೆಲಗಳಲ್ಲಿ ಪ್ಲೈಓವರ್ ಕಾಮಗಾರಿಯನ್ನು SEZ ವತಿಯಿಂದ ಈಗಾಗಲೇ ಪೂರ್ಣಗೊಳಿಸಲಾಗಿದ್ದು, ರೈಲ್ವೇ ಹಳಿ ಸಾಗುವ ಮೇಲ್ಭಾಗದಲ್ಲಿ ಕಾಮಗಾರಿಗಾಗಿ ರೈಲ್ವೇಯವರಿಗೆ ಹಸ್ತಾಂತರಿಸಲಾಗಿದೆ. ರೈಲ್ವೇ ಇಲಾಖೆಯ ತಾಂತ್ರಿಕ ವರ್ಗದವರು ಈಗಾಗಲೇ ಕಾಮಗಾರಿ ಆರಂಭಿಸಿದ್ದು, SEZನವರು ಇದಕ್ಕೆ ಹಣ ಪಾವತಿಸುತ್ತಾರೆ. 45 ಮೀ. ಹಾಗೂ 18 ಮೀಟರ್‌ನ ಎರಡು ಸ್ಪಾನ್ ಅಳವಡಿಕೆಯನ್ನು ರೈಲ್ವೇ ಅವರು ನಡೆಸಬೇಕಿದೆ.
Advertisement
3 ತಿಂಗಳ ಒಳಗೆ ಪೂರ್ಣSEZಗೆ ಬರುವ ವಾಹನಗಳಿಗೆ ಪ್ರತ್ಯೇಕ ಕಾರಿಡಾರ್ ವ್ಯವಸ್ಥೆ ಮಾಡುವ ಹಿನ್ನೆಲೆಯಲ್ಲಿ ಫ್ಲೈಓವರ್ ನಿರ್ಮಿಸಲಾಗಿದೆ. ಈಗಾಗಲೇ ಶೇ.95ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಉಳಿದ ಕಾಮಗಾರಿಯನ್ನು ರೈಲ್ವೇ ಇಲಾಖೆ ಆರಂಭಿಸಿದೆ. ಮುಂದಿನ 3 ತಿಂಗಳಲ್ಲಿ ಫ್ಲೈ ಓವರ್ ಮೇಲೆ ವಾಹನಗಳು ಸಂಚರಿಸಲಿವೆ.
– ಪ್ರಭಾತ್, ಸೀನಿಯರ್ ಮ್ಯಾನೇಜರ್(ಸಿವಿಲ್)SEZ — ದಿನೇಶ್ ಇರಾ