Advertisement

J. B. Shruti Sagar: ಏಕಾಗ್ರತೆಗೆ ಭಂಗ ತರುವ ಏನನ್ನೂ  ಬಳಸಿದರೂ ಸಾಧನೆಗೆ ತೊಡಕೇ

10:01 PM Sep 21, 2024 | Team Udayavani |

ಮೆಕಾನಿಕಲ್‌ ಎಂಜಿನಿಯರಿಂಗ್‌ ಪದವೀಧರರಾದ ಚೆನ್ನೈಯ ಜೆ. ಬಿ. ಶೃತಿ ಸಾಗರ್‌ ಅವರು ಭಾರದ್ವಾಜ್‌ ಮತ್ತು ಉಷಾ ದಂಪತಿ ಪುತ್ರ. ಕೊಳಲು ವಾದನದಲ್ಲಿ ಸಾಕಷ್ಟು ಹೆಸರುಗಳಿಸಿರುವ ಇವರು ಇತ್ತೀಚೆಗೆ ಉಡುಪಿಯಲ್ಲಿ ರಂಜನಿ ಮೆಮೋರಿಯಲ್‌ ಟ್ರಸ್ಟ್‌ನ ಸಂಗೀತೋತ್ಸವದಲ್ಲಿ ತಮ್ಮ ಕೊಳಲು ವಾದನ ಪ್ರಸ್ತುತಪಡಿಸಿದ್ದರು. ಈ ಸಂದರ್ಭ ದಲ್ಲಿ “ಉದಯವಾಣಿ’ಗಾಗಿ ನಡೆಸಿದ ಮಾತು ಕತೆಯ ಸಾರಾಂಶ ಇಲ್ಲಿದೆ.

Advertisement

ನಿಮ್ಮ ಕೊಳಲು ವಾದನದ ವೈಶಿಷ್ಟ್ಯಗಳೇನು?

ಸಂಗೀತಾಭಿಮಾನಿಗಳಿಗೆ ವಿಭಿನ್ನ ರಸಾನುಭವ ನೀಡುವ ಆಶಯ ಎಲ್ಲ ಕಲಾವಿದರಲ್ಲೂ ಇರುತ್ತದೆ. ನನ್ನದೇ ಆದ ಸ್ವಂತ ಶೈಲಿಯಲ್ಲಿ ಹೊಸ ಪ್ರಯತ್ನಗಳೊಂದಿಗೆ ವಿಭಿನ್ನ ರಸಾನುಭವ ನೀಡುವುದರತ್ತ ನನ್ನ ಗಮನ. ಆ ನೆಲೆಯಲ್ಲಿ ಸದಾ ಪ್ರಯೋಗ ಹಾಗೂ ಪ್ರಯತ್ನಶೀಲನಾಗಿರುತ್ತೇನೆ. ಶ್ರೋತೃವನ್ನು ರಂಜಿಸುವ ಉದ್ದೇಶದ ಜತೆಗೆ ನನ್ನ ಪ್ರಯತ್ನ, ಹೊಸತನದ ಹುಡುಕಾಟವನ್ನೂ ತಲುಪಿಸಲು ಯೋಚಿಸುತ್ತೇನೆ. ಬಾಲ್ಯದಿಂದಲೇ ಸಂಗೀತದ ಬಗ್ಗೆ ಒಲವಿತ್ತು. ಕೊಳಲು ವಾದನಕ್ಕೆ ಹೆಚ್ಚು ಪ್ರೀತಿ. ಆರಂಭದಲ್ಲಿ ಮೂರು ವರ್ಷ ಕೊಳಲಿನ ಪ್ರಾಥಮಿಕ ಸ್ವರೂಪಗಳನ್ನು ಅಧ್ಯಯನ ಮಾಡಿದೆ. ಅನಂತರ ಗುರು ಡಾ| ಎಚ್‌. ಎಸ್‌. ಸುಂದರ್‌ ಅವರಲ್ಲಿ 20 ವರ್ಷಕ್ಕೂ ಹೆಚ್ಚು ಕಾಲದಿಂದ ಅಭ್ಯಾಸ ಮಾಡುತ್ತಿದ್ದೇನೆ.

ಕರ್ನಾಟಕ ಸಂಗೀತವನ್ನು ಔಪಚಾರಿಕ ಶಿಕ್ಷಣವಾಗಿ ಕಲಿಯುವಲ್ಲಿ ಯುವಜನರಿಗೇಕೆ ನಿರಾಸಕ್ತಿ?

ಈ ಹಿಂದಿನಿಂದಲೂ ಈ ಪದ್ಧತಿ ತೀರಾ ಕಡಿಮೆ ಇದೆ. ಸಂಗೀತವನ್ನು ಕಲಿಯಲು ನಿರ್ದಿಷ್ಟ ಶಾಲೆ, ಕಾಲೇಜು, ಸಂಸ್ಥೆಗಳಿಗೆ ಸೇರುವುದು ಕಡಿಮೆ. ಔಪಚಾರಿಕ ಶಿಕ್ಷಣದ ಜತೆ ಜತೆಗೆ ಖಾಸಗಿಯಾಗಿ ಸಂಗೀತ ಗುರುಗಳಲ್ಲಿ ಕಲಿಯುವವರೇ ಹೆಚ್ಚು. ಈ ಕಲಿಕೆ ಆಸಕ್ತಿಯ ಮಟ್ಟಕ್ಕೆ ಬೆಳೆದು, ಆಸಕ್ತಿ ಪ್ರವೃತ್ತಿಯಂತಾಗಿ ಪೂರ್ಣಕಾಲಿಕವಾಗಿ ಕಲಾವಿದರಾಗಿ ರೂಪುಗೊಂಡವರಿದ್ದಾರೆ. ಆ ಕ್ರಮವೇ ಉಚಿತ ಎನ್ನಿಸಿರಬಹುದು.

Advertisement

ಫ್ಯೂಷನ್‌ ಸಂಗೀತದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಫ್ಯೂಷನ್‌ ಸಂಗೀತದ ಟ್ರೆಂಡ್‌ ಬಗ್ಗೆ ಸದಾ ಚರ್ಚೆ ಇರುತ್ತದೆ. ಹಿಂದೂಸ್ಥಾನಿ, ಕರ್ನಾಟಕ ಶಾಸ್ತೀಯ ಸಂಗೀತ ಶೈಲಿಯನ್ನು ವಿವಿಧ ರೂಪದಲ್ಲಿ ಒಂದೇ ಸಂಯೋಜನೆಯಲ್ಲಿ ಆಸ್ವಾದಿಸುವ ಪ್ರೇಕ್ಷಕರ ವರ್ಗವೂ ಇದೆ. ಎಲ್ಲ ಬಗೆಯ ಸಂಗೀತ ಪ್ರಕಾರಗಳು ವಿವಿಧ ಸಂಯೋಜನೆಯಲ್ಲಿ ಜನರನ್ನು ಮುದಗೊಳಿಸುತ್ತಿವೆ. ಆದೇ ಸಂಗೀತದ ಶಕ್ತಿ ಎನ್ನಬಹುದು. ಈ ಮಾತು ಫ್ಯೂಷನ್‌ ಸಂಗೀತದ ಬಗೆಗೂ ಅನ್ವಯ.

ಭರತನಾಟ್ಯ ಕಾರ್ಯಕ್ರಮಗಳಿಗೂ ನೀವು ಕೊಳಲು ವಾದನ ಮಾಡಿದ್ದೀರಿ, ಹೇಗನ್ನಿಸುತ್ತದೆ?

ಭರತನಾಟ್ಯ ನನಗೆ ಅತ್ಯಂತ ಇಷ್ಟವಾದ ನೃತ್ಯಕಲೆ. ವಿಶೇಷವಾಗಿ ರಾಮಾಯಾಣ, ಮಹಾಭಾರತದಂತಹ ರೂಪಕಗಳಲ್ಲಿ ಕೊಳಲು ವಾದನವನ್ನು ಅತ್ಯಂತ ಕ್ರಿಯಾಶೀಲವಾಗಿ ನುಡಿಸಬೇಕು. ಇಂಥ ಪ್ರಯತ್ನದೊಂದಿಗೆ ಉಳಿದ ಉಪಕರಣಗಳೊಂದಿಗೆ ಸಮಭಾವ ದಲ್ಲಿ ನುಡಿಸಿ ನಿರ್ವಹಿಸಿದ ತೃಪ್ತಿ ನನ್ನದು.

ಸಾಮಾಜಿಕ ಮಾಧ್ಯಮಗಳಿಂದ ಅಂತರವೇಕೆ?

ಸಂಗೀತ ಕಲಾವಿದರು ಸೃಜನಶೀಲ, ಕ್ರಿಯಾಶೀಲವಾಗಿರುವುದರ ಜತೆಗೆ ಹೊಸ ಪ್ರಯೋಗಗಳಿಗೂ ತೊಡಗಿಕೊಳ್ಳಬೇಕು. ಅದಕ್ಕೆ ಏಕಾಗ್ರತೆ ಬಹಳ ಮುಖ್ಯ. ಹಾಗಾಗಿ ಈ ಸಾಮಾಜಿಕ ಮಾಧ್ಯಮಗಳಿಂದ ದೂರ. ಸಂಗೀತ ಸಾಧನೆಗೆ ಮೊದಲ ಆದ್ಯತೆ. ಸಂವಹನಕ್ಕೂ ಸಾಮಾನ್ಯ ಫೋನ್‌ ಸಾಕು. ಏಕಾಗ್ರತೆಗೆ ಅಡ್ಡಿ ಮಾಡುವ ಏನನ್ನೂ ಬಳಸಿದರೂ ಸಾಧನೆಗೆ ತೊಡಕಾಗಬಲ್ಲದು.

ಶಾಸ್ತ್ರೀಯ ಕಲೆಗಳ ಬೆಳವಣಿಗೆಯಲ್ಲಿ ಸಾಮಾಜಿಕ ಜಾಲತಾಣದ ಕೊಡುಗೆ ಏನು?

ಸಾಮಾಜಿಕ ಜಾಲತಾಣದಿಂದ ನಕಾರಾತ್ಮಕ, ಸಕಾರಾತ್ಮಕ ಎರಡೂ ಪರಿಣಾಮಗಳಿವೆ. ಸಕಾರಾತ್ಮಕ ಮಾತ್ರ ಉಲ್ಲೇಖೀಸುವೆ. ಕಲಾವಿದರ ಪ್ರಚಾರಕ್ಕೆ ಉತ್ತಮ ವೇದಿಕೆ. ಹಾಗೆಯೇ ಎಲ್ಲ ಬಗೆಯ ಸಂಗೀತ ಪ್ರಕಾರಗಳು ಹೆಚ್ಚು ಜನರಿಗೆ ತಲುಪಲು ಕೊಡುಗೆ ನೀಡುತ್ತಿವೆ.

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next