Advertisement
ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದ ಪಿಲಿಯೂರಿನಲ್ಲಿ ಅಡಿಕೆ ತೋಟದ ನಡುವೆ ಮನೆ ಇದೆ. ಅಲ್ಲಿ ಸಣ್ಣದೊಂದು ಕೊಳಲ ನಿನಾದ ನಿಮ್ಮ ಕಿವಿಗೆ ಬಿದ್ದರೆ, ಖರೆ. ಅದೇ ಸುರೇಶ್ ಗೋರೆ ಅವರ ಕಾರ್ಯಕ್ಷೇತ್ರ. ಇವರ ವಿಶೇಷ ಎಂದರೆ-ಕೈಯಲ್ಲಿ ಪದವಿ ಇತ್ತು, ನೌಕರಿ ಹುಡುಕಬಹುದಿತ್ತು. ಸುರೇಶ್ ಇವ್ಯಾವುದರ ಗೊಡವೆಗೆ ಹೋಗದೆ ಕೊಳಲು ತಯಾರಿಕೆ ಕಡೆ ಹೊರಳಿದರು. ಪ್ರೌಢಶಾಲೆಯಲ್ಲಿ ಕಲಿಯುವಾಗ ಮರಗಳ ಬೇರಿನಲ್ಲಿ ಕಲಾಕೃತಿ ರಚಿಸುವ ಹವ್ಯಾಸ ಕೈಗೆಟುಕಿತು. ಈಗ ಹವ್ಯಾಸವೇ ಅವರ ಜೀವನ ಸಂಗಾತಿ. ಕೊಳಲುಗಳ ತಯಾರಿಕೆಯಂತೆಯೇ, ದೇವಾಲಯಗಳಿಗೆ ಬೇಕಾಗುವ ಮಂಟಪ, ಪಲ್ಲಕ್ಕಿ ಇತ್ಯಾದಿಗಳಿಗೆ ಬೇಕಾಗುವ ಬೆಳ್ಳಿ ಮತ್ತು ಹಿತ್ತಾಳೆಯ ಕವಚಗಳನ್ನು ತಯಾರಿಸಿಕೊಡುತ್ತಾರೆ. ಗೋರೆಯವರ ಸೋದರ ಮಾವ ಮಾಳದ ಮುಕುಂದ ಡೋಂಗ್ರೆ ನಿಷ್ಣಾತ ವೇಣುವಾದಕರು. ಅಷ್ಟೇ ಅಲ್ಲ, ವೈವಿಧ್ಯಮಯವಾದ ಕೊಳಲುಗಳ ತಯಾರಿಕೆಯಲ್ಲಿ ಪರಿಣತರು. ಅದನ್ನು ನೋಡಿಯೇ ಸುರೇಶ್‌ಗೋರೆಯೂ ಕೊಳಲು ತಯಾರಿಕೆಯನ್ನು ಕಲಿತರು. ನಂತರ, ಕೊಳಲಿನಲ್ಲಿ ಶಾಸ್ತ್ರೀಯ ಸಂಗೀತದ ನಾದ ಹೊರ ಹೊಮ್ಮಬೇಕಿದ್ದರೆ ಸಂಗೀತದ ಆಳವಾದ ಅರಿವೂ ಅಗತ್ಯವಿದೆ ಎಂಬ ಸತ್ಯವನ್ನು ತಿಳಿದುಕೊಂಡರು. ಹೀಗಾಗಿ, ನಾಯಕ ಸಾಟೆಯವರಿಂದ ಕರ್ನಾಟಕಿ ಮತ್ತು ವೆಂಕಟೇಶ ಗೋಡಿRಂಡಿಯವರಿಂದ ಹಿಂದುಸ್ಥಾನಿ ಸಂಗೀತದ ಪಾಠ ಕಲಿತುಕೊಂಡರು. “ಕೊಳಲು ತಯಾರಿಸಬೇಕಾದರೆ ಅದನ್ನು ನುಡಿಸುವ ಕಲಾವಿದನನ್ನೂ ಅಧ್ಯಯನ ಮಾಡಬೇಕಾಗಿ ಬಂತು. ಪ್ರತಿಯೊಬ್ಬ ಕಲಾವಿದನಿಗೂ ಅವನದೇ ಆದ ಶೈಲಿ ಇರುತ್ತದೆ. ಹೀಗಾಗಿ ಒಬ್ಬನಿಗಾಗಿ ಕೊಳಲು ತಯಾರಿಸುವ ಹಂತದಲ್ಲಿ ಶೇ. ತೊಂಭತ್ತರಷ್ಟು ವ್ಯರ್ಥವಾಗುತ್ತವೆ. ಸರಿಯಾಗಿ ಅಧ್ಯಯನ ಮಾಡಿ ತಯಾರಿಸುತ್ತ ಹೋದಾಗ ಅವನಿಗೆ ಹೊಂದುವ ಕೊಳಲು ತಯಾರಾಗುತ್ತದೆ ‘ ಎನ್ನುತ್ತಾರೆ ಗೋರೆ.
ಸುರೇಶ್ ಗೋರೆ ತಾಯಿಯ ತಂದೆ ಕಾರ್ಕಳದ ದುರ್ಗದ ಡಿ. ಪಿ. ನಾರಾಯಣ ಭಟ್ಟರು ಬೆಳ್ಳಿ ಮತ್ತು ಶಿಲೆಯ ಕಲಾ ಕೌಶಲಕ್ಕಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ್ದವರು. ಆರನೆಯ ತರಗತಿಯಲ್ಲಿರುವಾಗಲೇ ಅಜ್ಜನ ಕಲೆಯ ಕೌಶಲವನ್ನು ಸನಿಹದಿಂದ ನೋಡುತ್ತ ಬಂದ ಗೋರೆಯವರಿಗೆ ಅದು ಸುಲಭವಾಗಿ ಕರಗತವಾಗಿದೆ. ಹಾಗಾಗಿ ಬೆಳ್ಳಿ ಮತ್ತು ಹಿತ್ತಾಳೆಯ ಕುಸುರಿ ಕೆಲಸ ಗೋರೆಯವರ ಮತ್ತೂಂದು ಸಾಧನೆ. ದೇವಾಲಯ ಮತ್ತು ದೈವಗಳ ಗುಡಿಗಳಿಗೆ ಬೇಕಾಗುವ ಮಂಟಪಗಳು, ದ್ವಾರಬಂಧಗಳು, ಪ್ರಭಾವಳಿಗಳು, ಮುಖವಾಡಗಳು, ಕವಚಗಳು, ಆಭರಣಗಳು ಇವೆಲ್ಲದರಲ್ಲೂ ಅವರ ಕಲಾ ಪ್ರತಿಭೆ ಮೆರೆಯುತ್ತದೆ. ಅಪರೂಪಕ್ಕೆ ಬಂಗಾರದ ಕುಸುರಿಯೂ ಸಿಗುವುದುಂಟು. ಮೊದಲು ಕಾಗದದ ಮೇಲೆ ಚಿತ್ರ ಬರೆದು ಕೊಂಡು ಆಕಾರ ರೂಪಿಸುತ್ತಾರೆ. ಮರದ ಹಲಗೆಯ ಮೇಲೆ ಬಿಸಿ ಮಾಡಿದ ಅರಗಿನ ಹಾಸಿನ ಮೇಲೆ ಸೂಕ್ತ ಅಳತೆಯ ಬೆಳ್ಳಿ ಅಥವಾ ಹಿತ್ತಾಳೆ ತಗಡನ್ನಿರಿಸಿ, ಅದರ ಮೇಲೆ ಚಿತ್ರವನ್ನಿಡುತ್ತಾರೆ. 150ಕ್ಕಿಂತ ಹೆಚ್ಚು ಬಗೆಯ ಚಾಣಗಳನ್ನು ಬಳಸಿ, ಸುತ್ತಿಗೆಯಿಂದ ಹೊಡೆಯುತ್ತ ಬಂದಾಗ ತಗಡಿನಲ್ಲಿ ಪ್ರತಿಕೃತಿ ಮೂಡುತ್ತದೆ.
ಮರದ ಚೌಕಟ್ಟಿಗೆ ಈ ತಗಡನ್ನು ಜೋಡಿಸಿದಾಗ ಶೋಭಾಯಮಾನವಾಗಿ ಕಾಣುತ್ತದೆ. ನಾಲ್ಕು ಮಂದಿ ಸಹಾಯಕರೊಂದಿಗೆ ದಿನಕ್ಕೆ ಎಂಟು ತಾಸು ದುಡಿದರೂ ಒಂದು ಪಲ್ಲಕ್ಕಿ ಪೂರ್ಣವಾಗಲು ಮೂರು ತಿಂಗಳು ಹಿಡಿಯುತ್ತದಂತೆ.
Related Articles
Advertisement