Advertisement

ಚಿಗುರಿದ ಮಾರುಕಟ್ಟೆ ; ಜಿಎಸ್‌ಟಿ ಸಂಗ್ರಹ 1.05 ಲಕ್ಷ ಕೋ.ರೂ.

11:58 PM Nov 01, 2020 | mahesh |

ಹೊಸದಿಲ್ಲಿ: ಕೋವಿಡ್ ಮತ್ತು ಲಾಕ್‌ಡೌನ್‌ಗಳ ಕರಿ ನೆರಳಿನಿಂದ ದೇಶದ ಅರ್ಥ ವ್ಯವಸ್ಥೆ ನಿಧಾನವಾಗಿ ಹೊರಬರುತ್ತಿದ್ದು, ಅಕ್ಟೋಬರ್‌ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ಗಣನೀಯ ಏರಿಕೆ ಯಾಗಿದೆ. ಜತೆಗೆ ಆಟೋ ಮೊಬೈಲ್‌, ರಿಟೇಲ್‌ ಮಾರುಕಟ್ಟೆಗಳು ಕೂಡ ಚಿಗಿತುಕೊಂಡಿವೆ.

Advertisement

ದಸರಾ ಹಿನ್ನೆಲೆಯಲ್ಲಿ ಜನರು “ಶಾಪಿಂಗ್‌ ಮೂಡ್‌’ಗೆ ಇಳಿದ ಪರಿಣಾಮ ಆಟೋ ಮೊಬೈಲ್‌ ಮಾರುಕಟ್ಟೆಯಲ್ಲಿ ಭಾರೀ ಚೇತರಿಕೆ ಕಂಡು ಬಂದಿದೆ. ಮಾರುತಿ ಸುಜುಕಿ ಕಾರು ಗಳ ಮಾರಾಟದಲ್ಲಿ ಶೇ. 19ರಷ್ಟು ಏರಿಕೆ ದಾಖಲಾದರೆ, ಹ್ಯುಂಡೈ ಕಾರುಗಳ ಮಾರಾಟ ದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಟಾಟಾ ಮೋಟಾರ್ಸ್‌ನ ಅಕ್ಟೋಬರ್‌ ಮಾರಾಟ ಶೇ. 79ರಷ್ಟು ಏರಿಕೆ ಕಂಡಿದೆ.

ಅಕ್ಟೋಬರ್‌ನಲ್ಲಿ ದೇಶದಲ್ಲಿ ಜಿಎಸ್‌ಟಿ ಸಂಗ್ರಹ 1,05,155 ಕೋ.ರೂ. ದಾಟಿರು ವುದು ಆಶಾ ದಾಯಕ ಬೆಳವಣಿಗೆ. ಫೆಬ್ರವರಿ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಬೃಹತ್‌ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ರವಿವಾರ ತಿಳಿಸಿದೆ.

ಈ ಮೊತ್ತದಲ್ಲಿ ಕೇಂದ್ರ ಸರಕಾರದ ಜಿಎಸ್‌ಟಿ ಪಾಲು 19,193 ಕೋ. ರೂ.ಗಳಾದರೆ, ರಾಜ್ಯಗಳ ಪಾಲಿನ ಜಿಎಸ್‌ಟಿ 5,411 ಕೋ.ರೂ., ಐಜಿಎಸ್‌ಟಿ ಪಾಲು 52,540 ಕೋ. ರೂ. ಆಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ 95,379 ಕೋ. ರೂ. ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಕಳೆದ ತಿಂಗಳು ಶೇ.10ರಷ್ಟು ಹೆಚ್ಚು ಸುಂಕ ಸಂಗ್ರಹವಾಗಿದೆ.

ಸತತ ಎರಡನೇ ಬಾರಿ
ದೇಶದಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗುತ್ತಿದೆ. ಇದು ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳುತ್ತಿರುವುದರ ಸೂಚನೆ. ಸತತ 2ನೇ ಬಾರಿಗೆ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆ ಆಗಿದೆ ಎಂದು ಹಣಕಾಸು ಕಾರ್ಯದರ್ಶಿ ಅಜಯ ಭೂಷಣ ಪಾಂಡೆ ಹೇಳಿದ್ದಾರೆ. ಸರಕು ಸಾಗಣೆ ವಾಹನಗಳಿಗೆ ಅಗತ್ಯವಾದ ಇ-ವೇ ಬಿಲ್‌ ದೇಶದಲ್ಲಿ ಸೋಂಕುಪೂರ್ವದ ದಿನಗಳ ಪ್ರಮಾಣಕ್ಕೇ ವಾಪಸಾಗಿದೆ ಎಂದಿದ್ದಾರೆ.

Advertisement

ರಾಜ್ಯದಲ್ಲಿಯೂ ಹೆಚ್ಚಳ
ಬೆಂಗಳೂರು: ದಸರಾ ಸಂದರ್ಭದಲ್ಲಿ ರಾಜ್ಯದಲ್ಲಿಯೂ ಎಸ್‌ಜಿಎಸ್‌ಟಿ ಸಂಗ್ರಹ ಹೆಚ್ಚಳವಾಗಿದೆ. ಅಕ್ಟೋಬರ್‌ನಲ್ಲಿ 2,024 ಕೋಟಿ ರೂ. ಎಸ್‌ಜಿಎಸ್‌ಟಿ ಸಂಗ್ರಹವಾಗಿದೆ. ದಸರಾ ಹಬ್ಬದಲ್ಲಿ ವಾಣಿಜ್ಯ ಚಟುವಟಿಕೆಗಳು ಹಾಗೂ ಆಟೊಮೊಬೈಲ್‌ ಮಾರಾಟ ಹೆಚ್ಚಳವಾಗಿದ್ದರಿಂದ ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 1,924.56 ಕೋಟಿ ರೂ. ಎಸ್‌ಜಿಎಸ್‌ಟಿ ಸಂಗ್ರಹವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next