Advertisement

ವನಿತಾ ಟಿ20 ವಿಶ್ವಕಪ್‌: ಮಂಧನಾ ಮಿಂಚು; ಸೆಮಿಫೈನಲ್‌ಗೆ ಭಾರತ

11:39 PM Feb 20, 2023 | Team Udayavani |

ಕೆಬೆರಾ: ಐರ್ಲೆಂಡ್‌ ವಿರುದ್ಧ ಡಿ-ಎಲ್‌ ನಿಯಮದಂತೆ 5 ರನ್ನುಗಳ ಗೆಲುವು ಸಾಧಿಸುವ ಮೂಲಕ ಭಾರತ “ಬಿ’ ವಿಭಾಗದಿಂದ ವನಿತಾ ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಭಾರತದ ಈ ಗೆಲುವಿನೊಂದಿಗೆ ಇಂಗ್ಲೆಂಡ್‌ನ‌ ಸೆಮಿಫೈನಲ್‌ ಪ್ರವೇಶವೂ ಅಧಿಕೃತಗೊಂಡಿತು.

Advertisement

ಜತೆಗೆ ಪಾಕಿಸ್ಥಾನ, ವೆಸ್ಟ್‌ ಇಂಡೀಸ್‌ ತಂಡಗಳೆರಡೂ ಕೂಟದಿಂದ ಹೊರಬಿದ್ದವು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ 6 ವಿಕೆಟಿಗೆ 155 ರನ್‌ ಗಳಿಸಿದರೆ, ಐರ್ಲೆಂಡ್‌ 8.2 ಓವರ್‌ಗಳಲ್ಲಿ 2 ವಿಕೆಟಿಗೆ 54 ರನ್‌ ಮಾಡಿದ ವೇಳೆ ಮಳೆ ಸುರಿಯಿತು. ಪಂದ್ಯ ಮುಂದುವರಿಯಲಿಲ್ಲ. ಆಗ ಐರ್ಲೆಂಡ್‌ ಡಿ-ಎಲ್‌ ನಿಯಮದಂತೆ 5 ರನ್‌ ಹಿನ್ನಡೆಯಲ್ಲಿತ್ತು.

“ಬಿ’ ವಿಭಾಗದ ಅಗ್ರಸ್ಥಾನಿ ಯಾವುದು ಎಂಬುದು ಇಂಗ್ಲೆಂಡ್‌-ಪಾಕಿಸ್ಥಾನ ಪಂದ್ಯದ ಫ‌ಲಿತಾಂಶದ ಬಳಿಕ ತಿಳಿಯಲಿದೆ. ಇಲ್ಲಿ ಪಾಕಿಸ್ಥಾನ ಗೆದ್ದರೂ ಮೇಲೇರದು.

ಮಂಧನಾ ಬ್ಯಾಟಿಂಗ್‌ ಸಾಹಸ
ಎಡಗೈ ಓಪನರ್‌ ಸ್ಮತಿ ಮಂಧನಾ ಅವರ 87 ರನ್ನುಗಳ ಸೊಗಸಾದ ಆಟ ಭಾರತ ಸರದಿಯ ಆಕರ್ಷಣೆ ಆಗಿತ್ತು. ಆದರೆ ಭಾರತಕ್ಕೆ ಬಿರುಸಿನ ಆರಂಭ ಮಾತ್ರ ಸಾಧ್ಯವಾಗಲಿಲ್ಲ. ಸ್ಮತಿ ಮಂಧನಾ-ಶಫಾಲಿ ವರ್ಮ 9.3 ಓವರ್‌ ನಿಭಾಯಿಸಿದರೂ ಗಳಿಸಿದ್ದು 62 ರನ್‌ ಮಾತ್ರ. ಡ್ಯಾಶಿಂಗ್‌ ಓಪನರ್‌ ಖ್ಯಾತಿಯ ಶಫಾಲಿ ಆಟವಂತೂ ಇದಕ್ಕೆ ವ್ಯತಿರಿಕ್ತವಾಗಿತ್ತು. ಅವರು 24 ರನ್ನಿಗೆ 29 ಎಸೆತ ತೆಗೆದುಕೊಂಡರು (3 ಬೌಂಡರಿ). ನಾಯಕಿ ಲಾರಾ ಡೆಲಾನಿ ಐರ್ಲೆಂಡ್‌ಗೆ ಮೊದಲ ಯಶಸ್ಸು ತಂದಿತ್ತರು. ಸಾಮಾನ್ಯ ಎಂದು ಭಾವಿಸಲಾಗಿದ್ದ ಐರ್ಲೆಂಡ್‌ ಬೌಲಿಂಗ್‌ ಭಾರತೀಯರ ಪಾಲಿಗೆ ಜಿಗುಟಾಗಿ ಕಾಡಿತು. ಬೌಂಡರಿಗಳ ಬರಗಾಲ ಎದ್ದು ಕಂಡಿತು.

ಮೊದಲಾರ್ಧದಲ್ಲಿ ಸ್ಮತಿ ಮಂಧನಾ ಕೂಡ ನಿಧಾನವಾಗಿಯೇ ಸಾಗಿದರು. ಶಫಾಲಿ ನಿರ್ಗಮನದ ಬಳಿಕ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಭಡ್ತಿ ಪಡೆದು ಬಂದರು. ಇದರಿಂದ ಏನೂ ಪ್ರಯೋಜನವಾಗಲಿಲ್ಲ. 20 ಎಸೆತಗಳನ್ನು ಎದುರಿಸಿ ಬರೀ 13 ರನ್‌ ಮಾಡಿ ಆಟ ಮುಗಿಸಿದರು. ಇದರಲ್ಲಿ ಒಂದೂ ಬೌಂಡರಿ ಹೊಡೆತ ಇರಲಿಲ್ಲ.

Advertisement

150 ಪಂದ್ಯ, 3 ಸಾವಿರ ರನ್‌
ಇದು ಕೌರ್‌ ಪಾಲಿಗೆ ಮೈಲುಗಲ್ಲು ಪಂದ್ಯವಾಗಿತ್ತು. ಅವರು 150ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿಳಿದಿದ್ದರು. ಈ ಪಂದ್ಯದಲ್ಲೇ ಅವರು 3 ಸಾವಿರ ರನ್‌ ಗಳಿಸಿದ್ದು ವಿಶೇಷವಾಗಿತ್ತು. ಅವರು ಈ ಸಾಧನೆಗೈದ ವಿಶ್ವದ ಕೇವಲ 3ನೇ ಆಟಗಾರ್ತಿ. ಉಳಿದಿಬ್ಬರೆಂದರೆ ಸುಝೀ ಬೇಟ್ಸ್‌ (3,820) ಮತ್ತು ಸ್ಟಫಾನಿ ಟಯ್ಲರ್‌ (3,166).

ಕೌರ್‌ ನಿರ್ಗಮನದ ಬಳಿಕ ರಿಚಾ ಘೋಷ್‌ ಕ್ರೀಸ್‌ ಇಳಿದರು. ಕೂಟದ್ದುಕ್ಕೂ ಉತ್ತಮ ಪ್ರದರ್ಶನ ನೀಡುತ್ತ ಬಂದ ಅವರಿಲ್ಲಿ ಖಾತೆಯನ್ನೇ ತೆರೆಯಲಿಲ್ಲ. ಅಷ್ಟೇ ಅಲ್ಲ, ಮೊದಲ ಎಸೆತಕ್ಕೇ ಔಟಾಗಿ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. ಲಾರಾ ಡೆಲಾನಿ ಒಂದೇ ಓವರ್‌ನಲ್ಲಿ ಭಾರತಕ್ಕೆ ಅವಳಿ ಆಘಾತವಿಕ್ಕಿದರು.

ಮುನ್ನುಗ್ಗಿದ ಮಂಧನಾ
ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡ ಮಂಧನಾ 14ನೇ ಓವರ್‌ ಬಳಿಕ ಸಿಡಿಯಲಾರಂಭಿಸಿದರು. ಭಾರತದ ಸರದಿಯ ಮೊದಲ ಸಿಕ್ಸರ್‌ ಬಾರಿಸಿ ಸತತ 2ನೇ ಅರ್ಧ ಶತಕ ದಾಖಲಿಸಿದರು. ಜಾರ್ಜಿನಾ ಡಿಂಪ್ಸಿ ಎಸೆತಗಳಿಗೆ ಸತತ 2 ಬೌಂಡರಿಗಳ ರುಚಿ ತೋರಿಸಿದರು. 15 ಓವರ್‌ ಅಂತ್ಯಕ್ಕೆ ಸ್ಕೋರ್‌ 105ಕ್ಕೆ ಏರಿತು.

ಮುನ್ನುಗ್ಗಿ ಬೀಸಲಾರಂಭಿಸಿದ ಮಂಧನಾ ಶತಕದ ನಿರೀಕ್ಷೆ ಹೆಚ್ಚಿಸಿದರು. ಆದರೆ 87 ರನ್ನಿಗೆ ಔಟಾಗಿ ನಿರಾಸೆ ಮೂಡಿಸಿದರು. 56 ಎಸೆತಗಳ ಈ ಸೊಗಸಾದ ಆಟದಲ್ಲಿ 9 ಫೋರ್‌ ಹಾಗೂ 3 ಸಿಕ್ಸರ್‌ ಸೇರಿತ್ತು.

ರಿಚಾ ಘೋಷ್‌ ಅವರಂತೆ ದೀಪ್ತಿ ಶರ್ಮ ಕೂಡ ಮೊದಲ ಎಸೆತದಲ್ಲೇ ಔಟಾದರು. 12 ಎಸೆತಗಳಿಂದ 19 ರನ್‌ ಮಾಡಿದ ಜೆಮಿಮಾ ರೋಡ್ರಿಗಸ್‌ ಅಂತಿಮ ಎಸೆತದಲ್ಲಿ ಸ್ಟಂಪ್ಡ್ ಆದರು.

ಐರ್ಲೆಂಡ್‌ ಹೋರಾಟ
ಐರ್ಲೆಂಡ್‌ ಮೊದಲ ಓವರ್‌ನಲ್ಲೇ 2 ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. 3ನೇ ವಿಕೆಟಿಗೆ ಜತೆಗೂಡಿದ ಗ್ಯಾಬಿ ಲೂಯಿಸ್‌ (ಅಜೇಯ 32) ಮತ್ತು ಲಾರಾ ಡೆಲಾನಿ (ಅಜೇಯ 17) ಹೋರಾಟ ಮುಂದುವರಿಸಿದರು. ಆದರೆ ಭಾರೀ ಮಳೆಯಿಂದ ಆಟ ನಿಂತೇ ಹೋಯಿತು.

ಸಂಕ್ಷಿಪ್ತ ಸ್ಕೋರ್‌
ಭಾರತ-6 ವಿಕೆಟಿಗೆ 155 (ಮಂಧನಾ 87, ಶಫಾಲಿ 24, ಜೆಮಿಮಾ 19, ಕೌರ್‌ 13, ಡೆಲಾನಿ 33ಕ್ಕೆ 3, ಪ್ರಂಡೆರ್ಗಾಸ್ಟ್‌ 22ಕ್ಕೆ 2). ಐರ್ಲೆಂಡ್‌-8.2 ಓವರ್‌ಗಳಲ್ಲಿ 2 ವಿಕೆಟಿಗೆ 54 (ಗ್ಯಾಬಿ ಅಜೇಯ 32, ಡೆಲಾನಿ ಅಜೇಯ 17, ರೇಣುಕಾ 10ಕ್ಕೆ 1).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next