Advertisement

ಅ.2ರಿಂದ ಕಾಲು ಬಾಯಿ ಜ್ವರಕ್ಕೆ ಲಸಿಕೆ

02:44 PM Sep 30, 2020 | Suhan S |

ಹಾಸನ: ಜಿಲ್ಲೆಯಲ್ಲಿ ಅ.2ರಿಂದ ನ.15ರ ವರೆಗೆ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆ ಹಾಕುವ 17ನೇ ಸುತ್ತಿನ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಆರ್‌.ಗಿರೀಶ್‌, ಜಿಲ್ಲೆಯಲ್ಲಿ 6,56,156 ಜಾನುವಾರುಗಳಿದ್ದು, ಅವುಗಳ ಮಾಲಿಕರಿಗೆ ಕಾಲು ಮತ್ತು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮದ ಸ್ವರೂಪದ ಬಗ್ಗೆ ವ್ಯಾಪಕ ಅರಿವು ಮೂಡಿಸಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ಯಾವುದೇ ಜಾನುವಾರು ಲಸಿಕೆಯಿಂದ ಬಿಟ್ಟು ಹೋಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಂಡ ರಚಿಸಿ: 45 ದಿನ ಕಾಲ ನಡೆಯುವ 17ನೇ ಸುತ್ತಿನ ಸಾಮೂಹಿಕ ಕಾಲು ಮತ್ತು ಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಪೂರ್ಣಗೊಳಿಸಲು ಪಶು ವೈದ್ಯರನ್ನೊಳಗೊಂಡ ವ್ಯವಸ್ಥಿತ ತಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಚಿಸ ಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

 ಕರಪತ್ರ ಹಂಚಿ ಜಾಗೃತಿ ಮೂಡಿಸಿ: ಗ್ರಾಪಂ ಕಚೇರಿಗಳ, ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಪಶು ಆರೋಗ್ಯ ಕೇಂದ್ರಗಳು ಸೇರಿ ಹಲವು ಕಡೆಗಳಲ್ಲಿ ಪೋಸ್ಟರ್‌ ಹಾಗೂ ಬ್ಯಾನರ್‌ಗಳನ್ನು ಅಳವಡಿಸಿ, ಕರಪತ್ರ ಹಂಚುವ ಮೂಲಕವೂ ಜಾಗೃತಿ ಮೂಡಿಸಬೇಕು.

ಹೆಚ್ಚಿನ ವಾಹನ ಒದಗಿಸಿ: ಕಾಲು ಮತ್ತು ಬಾಯಿ ಜ್ವರದ ಕುರಿತು ಸ್ಥಳೀಯ ಸುದ್ದಿವಾಹಿನಿಗಳು ಹಾಗೂ ಆಕಾಶವಾಣಿಗಳ ಮೂಲಕ ರೈತರಿಗೆ ಮಾಹಿತಿ ನೀಡಿ ಅರಿವು ಮೂಡಿಸಬೇಕು. ಲಸಿಕಾಕಾರ್ಯಕ್ಕೆ ಸಹಾಯ ವಾಗುವಂತೆ ಪಶು ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವಂತೆ ಹಾಗೂ ಹಾಸನ ಹಾಲು ಒಕ್ಕೂಟವು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಒದಗಿಸಬೇಕು ಎಂದು ಹೇಳಿದರು.

Advertisement

ಪಿಡಿಒಗಳ ಮೂಲಕ ಪ್ರಚಾರ: ಜಿಪಂ ಸಿಇಒ ಬಿ.ಎ.ಪರಮೇಶ್‌ ಮಾತನಾಡಿ, ಕಾಲು, ಬಾಯಿ ಜ್ವರ ಲಸಿಕಾ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪ್ರತಿ ಹಳ್ಳಿಗಳಿಗೂ ಮಾಹಿತಿ ನೀಡಿ, ಅರಿವು ಮೂಡಿಸುವಂತೆ ಪಿಡಿಒ ಹಾಗೂ ಕಾರ್ಯದರ್ಶಿಗೆ

ಸೂಚನೆ ನೀಡಲಾಗುವುದು. ಇದೊಂದು ಪ್ರಮುಖ ಕಾರ್ಯಕ್ರಮವಾಗಿದ್ದು, ರೈತರು ಹೈನುಗಾರಿಕೆ ವೃದ್ಧಿಗೆ ಸಹಕಾರಿಯಾಗಿದೆ. ಹಾಗಾಗಿ ಪಶು ವೈದ್ಯಕೀಯ ಇಲಾಖೆ ಮೂಲಕ ಲಸಿಕಾ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಹೇಳಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಉಪ ನಿರ್ದೇಶಕ ಡಾ.ಕೆ.ಆರ್‌.ರಮೇಶ್‌, ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸುಂದರೇಶ್‌, ಹಾಸನ ಪಶು ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ.ಶಿವಕುಮಾರ್‌, ಪಶು ವೈದ್ಯಕೀಯ ಕಾಲೇಜಿನ ಮೈಕ್ರೋ ಬಯೋಲಾಜಿಸ್ಟ್‌ ಡಾ.ರವೀಂದ್ರ ಹೆಗ್ಡೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಸಹಾಯಕ ನಿರ್ದೇಶಕಿ ಡಾ.ಜಾನಕಿ, ಡಾ. ವೆಂಕಟೇಶ್‌ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next