ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ರಸ್ತೆಬದಿಯಲ್ಲಿರುವ ಮರಗಳಲ್ಲಿ ಬಣ್ಣ ಬಣ್ಣದ ಹೂಗಳು ಅರಳಿ ನಿಂತಿದ್ದು, ದಾರಿ ಹೋಕರ ಮನಕ್ಕೆ ಮುದ ನೀಡುತ್ತಿವೆ. ಜತೆಗೆ ನಗರದ ಅಂದ ಹೆಚ್ಚಿಸಿದೆ. ಪ್ರವಾಸಿಗರನ್ನು ಸ್ವಾಗತಿಸುತ್ತಿವೆ.
ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆ, ಐ.ಜಿ.ರಸ್ತೆ, ಎಐಟಿ ವೃತ್ತ, ಕಡೂರು ಮಂಗಳೂರು ರಸ್ತೆ, ಜಿಲ್ಲಾ ಆಟದ ಮೈದಾನ ಸೇರಿದಂತೆ ಅನೇಕ ಬಡಾವಣೆಗಳ ರಸ್ತೆಬದಿ ಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಮರಗಳಲ್ಲಿ ಬಣ್ಣ ಬಣ್ಣದ ಹೂಗಳು ಅರಳಿ ನಿಂತು ಮಲೆನಾಡಿನ ಸೊಬಗನ್ನು ಇನ್ನಷ್ಟು ಇಮ್ಮಡಿಗೊಳಿಸಿವೆ. ರಸ್ತೆಯಲ್ಲಿ ಸಂಚರಿಸುತ್ತಿದ್ದರೆ ವಿವಿಧ ಬಗೆಯ ಹೂಗಳು ರಸ್ತೆಯುದ್ದಕ್ಕೂ ಬಿದ್ದು ಬಡಾವಣೆಗಳನ್ನು ಕಂಗೊಳಿಸುವಂತೆ ಮಾಡಿವೆ.
ನಗರದಲ್ಲಿರುವ ಉದ್ಯಾನವನಗಳಲ್ಲೂ ವಿವಿಧ ಬಗೆಯ ಹೂಗಳು ಅರಳಿದ್ದು, ಮನಸ್ಸಿಗೆ ಮುದ ನೀಡುತ್ತಿವೆ. ವಾಯು ವಿಹಾರಿಗಳಿಗೆ ಬೆಳ್ಳಂಬೆಳಿಗ್ಗೆ ಉತ್ತೇಜನ ನೀಡುತ್ತವೆ. ಪ್ರಕೃತಿ ಪ್ರೇಮಿಗಳ ಕ್ಯಾಮರಾ, ಮೊಬೈಲ್‌ಗಳಲ್ಲಿ ಸೆರೆಯಾಗುತ್ತಿವೆ. ಪುಷ್ಪಪ್ರಿಯರ ಮನಸ್ಸನ್ನು ಆಕರ್ಷಿಸುತ್ತಿವೆ. ಚೈತ್ರಮಾಸದ ಆರಂಭಕ್ಕೆ ಸ್ವಾಗತ ಕೋರುತ್ತಿವೆ. ಚೈತ್ರ ಮಾಸದ ಆಗಮನದ ಮುನ್ಸೂಚನೆ ನೀಡುತ್ತಿವೆ. ಪಾದಚಾರಿಗಳನ್ನು ಆಕರ್ಷಿಸಿ, ಕೆಲವು ಹೊತ್ತು ನೋಡುವಂತೆ ಮಾಡುತ್ತಿವೆ. ಗಾಳಿ ಬೀಸಿದಾಗ ರೆಂಬೆಗಳು ಬಾಗಿ ಬಳುಕುತ್ತಿ ದ್ದು, ಆ ಕ್ಷಣಕ್ಕೆ ಗಾಳಿಯಲ್ಲಿ ತೇಲಿ ಬರುವ ಹೂಗಳು ಭೂಮಿಯನ್ನು ಸ್ಪರ್ಶಿಸುವ ಮೂಲಕ ನೋಡುಗರ ಮನ ಸೆಳೆಯುತ್ತಿವೆ. ಸೌಂದರ್ಯ ವೃದ್ಧಿಸಿಕೊಂಡಿವೆ. ಹಳದಿ ನೀಲಿ, ಗುಲಾಬಿ ಬಣ್ಣದ ಹೂವುಗಳು ನೋಡುಗರ ಮನ ಪುಳಕಗೊಳ್ಳುವಂತೆ ಮಾಡುತ್ತಿವೆ.
ಮುಳ್ಳಯ್ಯನಗಿರಿಗೆ ಹೊಂದಿರುವ ಜಿಲ್ಲೆಯಲ್ಲಿ ಕಾನನ ಪುಷ್ಪಗಳೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮತ್ತೂಮ್ಮೆ ಬಂದು ಹೋಗುವಂತೆ ಮನವಿ ಮಾಡುತ್ತಿವೆ. ಆದರೆ ಕೆಲವೆಡೆ ಗಿರಿಪ್ರದೇಶಕ್ಕೆ ಬೆಂಕಿ ಬಿದ್ದಿದ್ದು, ಹೂವುಗಳು ಸುಟ್ಟು ಬೂದಿಯಾಗುವ ಮೂಲಕ ಪುಷ್ಪಪ್ರಿಯರ ಮನನೋಯಿಸುತ್ತಿವೆ. ನಗರದ ಬಡಾವಣೆಗಳಲ್ಲಿರುವ ಬೃಹತ್ ಮರಗಳು ಬಣ್ಣ ಬಣ್ಣದ ಹೂವುಗಳನ್ನು ಅರಳಿಸುವುದರ ಮೂಲಕ ಜನರನ್ನು ಆಕರ್ಷಿಸುತ್ತಿವೆ. ನಗರದ ಅಂದವನ್ನು ಹೆಚ್ಚಿಸುವಂತೆ ಮಾಡಿವೆ.