ಬೇಸಿಗೆ ಕಾಲದಲ್ಲಿ ಆಗಾಗ ನೀರು ಕುಡಿದು ನಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುವುದು ಸಹಜ. ಅದರಲ್ಲೂ ಈಗಿನ ಬಿಸಿಲಿನ ತಾಪಕ್ಕೆ ಗಂಟಲನ್ನು ಎಷ್ಟು ತಣ್ಣಗಾಗಿಸಿದರೂ ಮತ್ತೆ ಮತ್ತೇ ಗಂಟಲು ಒಣಗುತ್ತಲೇ ಇರುತ್ತದೆ.
ಇನ್ನು ಬೇಸಿಗೆಯಲ್ಲಿ ಪೇಟೆ ಕಡೆಗೆ ಹೋದರೆ ಬಾಯಾರಿಕೆಯಾದಾಗ ಜ್ಯೂಸ್ ಅಂಗಡಿಗಳತ್ತ ಮನಸ್ಸು ಮಾಡುವುದು ಸಾಮಾನ್ಯ. ನೀರು ಕುಡಿಯುವುದಕ್ಕಿಂತ ಜ್ಯೂಸ್ ಕುಡಿಯೋಣ ಎಂದೆನಿಸುತ್ತದೆ. ಅಷ್ಟೇ ಅಲ್ಲದೆ, ಹಣ್ಣಿನ ಅಂಗಡಿಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಮನಸೆಳೆಯುವುದು ಹಸಿರು ಕೆಂಪು ಬಣ್ಣ ಹೊಂದಿರುವ ಕಲ್ಲಂಗಡಿ ಹಣ್ಣು. ಬಾಯಾರಿಕೆ ಅಂದವರಿಗೆ ಮೊದಲು ಕಾಣಿಸುವುದೇ ಕಲ್ಲಂಗಡಿ ಹಣ್ಣು.
ಬೇಸಿಗೆ ಶುರುವಾದಂತೆಲ್ಲ ಮಾರುಕಟ್ಟೆ ಪೂರ್ತಿ ಹಣ್ಣುಗಳ ರಾಶಿ ತುಂಬಿರುತ್ತದೆ. ಅದರಲ್ಲೂ ಹಣ್ಣುಗಳ ದೊಡ್ಡಣ್ಣ ಅಂತ ಕರೆಸಿಕೊಳ್ಳುವ ಕಲ್ಲಂಗಡಿ ಹಣ್ಣಿಗೆ ವಿಶೇಷವಾದ ಬೇಡಿಕೆ ಇರುತ್ತದೆ. ಬೇಸಿಗೆ ಇರುವ ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ಈ ಕಲ್ಲಂಗಡಿ ಹಣ್ಣುಗಳದ್ದೇ ರಾಜ್ಯಭಾರ. ಇದು ತನ್ನ ಮೈತುಂಬ ಶೇ. 75ರಷ್ಟು ನೀರಿನ ಅಂಶವನ್ನು ಒಳಗೊಂಡಿರುತ್ತದೆ. ಈ ಹಣ್ಣು ಬೇಸಿಗೆಯ ದಗೆಯನ್ನು ತಣಿಸಲು ಹೇಳಿ ಮಾಡಿಸಿದಂತಿದೆ. ಅದೇ ಕಾರಣಕ್ಕೆ ಇದನ್ನು ಇಂಗ್ಲಿಷ್‌ನಲ್ಲಿ “ವಾಟರ್‌ವೆುಲನ್’ ಎಂದು ಕರೆಯುತ್ತಾರೆ. ಅದರಲ್ಲೂ ಕಲ್ಲಂಗಡಿ ಹಣ್ಣಿನಿಂದ ತಯಾರಿಸಿದ ಜ್ಯೂಸ್ ಅನ್ನು ಎಲ್ಲರೂ ಇಷ್ಟಪಡುತ್ತಾರೆ.
ಜನವರಿಯಿಂದ ಶುರುವಾಗೋ ಕಲ್ಲಂಗಡಿ ಹಣ್ಣಿನ ಸೀಸನ್ ಮೇಯವರೆಗೂ ಇರುತ್ತದೆ. ಹೀಗಾಗಿ, ಕಲ್ಲಂಗಡಿ ಹಣ್ಣನ್ನು ಬೆಳೆಯುವ ರೈತರಿಂದ ಹಿಡಿದು ವ್ಯಾಪಾರಿಗಳು, ದಲ್ಲಾಳಿಗಳು, ಜ್ಯೂಸ್ ಅಂಗಡಿಯವರಿಗೂ ಈ ಸಮಯದಲ್ಲಿ ಉತ್ತಮ ಆದಾಯವಾಗುತ್ತದೆ.
ಈ ಕಲ್ಲಂಗಡಿ ಹಣ್ಣಿನಲ್ಲಿ ಹಲವು ತಳಿಗಳಿವೆ. ಸುಪ್ರೀತ್, ತೈವಾನ್, ಕಿರಣ್ ನಾಮಾªರಿ, ಶುಗರ್ ಕ್ವೀನ್ ಸೇರಿದಂತೆ ಬೇರೆ ಬೇರೆ ತಳಿಯ ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಅದರಲ್ಲಿಯೂ ಬೆಳ್ತಂಗಡಿ, ಉಜಿರೆಯಲ್ಲಿ ಪ್ರಮುಖವಾಗಿ ತೈವಾನ್ ಮತ್ತು ಸುಪ್ರೀತ್ ತಳಿಯ ಕಲ್ಲಂಗಡಿ ಹಣ್ಣಿಗೆ ವಿಶೇಷ ಬೇಡಿಕೆ ಇದೆ ಎಂದು ವ್ಯಾಪಾರಸ್ಥರ ಅಭಿಪ್ರಾಯ.
ಕಲ್ಲಂಗಡಿ ಹಣ್ಣು ಕೇವಲ ಬಾಯಾರಿಕೆ ತಣಿಸಲು ಮಾತ್ರವಲ್ಲ. ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳು ಇದೆ. ಯೂರಿನ್ ಸಮಸ್ಯೆ, ಕೊಲೆಸ್ಟ್ರಾಲ… ಸಮಸ್ಯೆ, ಹಲ್ಲು -ವಸಡುಗಳ ಸಮಸ್ಯೆ, ಚರ್ಮದ ಸಮಸ್ಯೆಯನ್ನು ಹೋಗಲಾಡಿಸಲು ಕಲ್ಲಂಗಡಿ ಹಣ್ಣು ರಾಮಬಾಣವಾಗಿದೆ. ಮುಖ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸಲು ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಉಪಯೋಗಿಸಲಾಗುತ್ತದೆ. ದೇಹದ ತೂಕವನ್ನು ಇಳಿಸಲು ಬಯಸುವವರು ಕಲ್ಲಂಗಡಿ ಹಣ್ಣನ್ನು ಬಳಸಬಹುದು. ಒಟ್ಟಿನಲ್ಲಿ ಒಂದು ಹಣ್ಣನ್ನು ಖರೀದಿಸಿದರೆ ಅದನ್ನು ವಿವಿಧ ರೀತಿಯಲ್ಲಿ ಸಂಪೂರ್ಣ ಬಳಕೆ ಮಾಡಲಾಗುತ್ತದೆ.
– ರಾಜೇಶ್ವರಿ ಬೆಳಾಲು