Advertisement

ಫ‌ಲಪುಷ್ಪ ಪ್ರದರ್ಶನದಲ್ಲಿ ಪುಷ್ಪಲೋಕ ಅನಾವರಣ

05:53 PM Sep 28, 2019 | Suhan S |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ ಸೆ.29 ರಿಂದ ಅ.9ರವರೆಗೆ ಆಯೋಜಿಸಿರುವ ದಸರಾ ಫ‌ಲಪುಷ್ಪ ಪ್ರದರ್ಶನದಲ್ಲಿ ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್‌ ಅವರ 100ನೇ ಜನ್ಮ ಶತಾಬ್ಧಿ ಅಂಗವಾಗಿ ಗಾಜಿನ ಮನೆಯಲ್ಲಿ ಹೂವುಗಳಿಂದಲೇ ಜಯ ಚಾಮರಾಜ ಒಡೆಯರ್‌ ಪ್ರತಿಮೆ ಮತ್ತು ಗೋಪುರವನ್ನು ನಿರ್ಮಿಸಲಾಗುತ್ತಿದೆ.

Advertisement

ನೆಲಮಟ್ಟದಿಂದ 50 ಅಡಿ ಉದ್ದ, 27 ಅಡಿ ಎತ್ತರ ವಿರುವ ಮಹಾರಾಜರ ಪ್ರತಿಕೃತಿ ರಚಿಸುತ್ತಿದ್ದು, 12 ಅಡಿ ವ್ಯಾಸದ ವೃತ್ತ ನಿರ್ಮಿಸಲಾಗುತ್ತಿದೆ. ವಿವಿಧ ಬಣ್ಣದ ಗುಲಾಬಿ ಹೂವುಗಳಿಂದ ಈ ಮಾದರಿಯನ್ನು ಅಲಂಕರಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ರುದ್ರೇಶ್‌, ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಇಎಂಎಲ್‌, ಬ್ರೇಕ್ಸ್‌ ಇಂಡಿಯಾ, ಅರಮನೆ ಮಂಡಳಿ, ಟೈಟಾನ್‌ ವಾಲ್ಸ್‌, ಜೆ.ಕೆ. ಟೈರ್, ಮೈಸೂರು ಮಹಾನಗರ ಪಾಲಿಕೆ, ಭಾರತೀಯ ಆಯುರ್ವೇದ ಕಾಲೇಜು, ಜೆಎಸ್‌ಎಸ್‌ ಆಯುರ್ವೇದ ಕಾಲೇಜು ಮತ್ತು ಸಂಘ ಸಂಸ್ಥೆಗಳ ಸುಮಾರು 25 ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಹೂವು ಮತ್ತು ತರಕಾರಿ ಕುಂಡಗಳ ಪ್ರದರ್ಶನ ಮಾಡಲಾಗುವುದು ಎಂದು ಹೇಳಿದರು.

ಸೆ. 29 ರಂದು ಸಂಜೆ 4 ಗಂಟೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಫ‌ಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದು, ಅ.9 ರಂದು ಸಂಜೆ 4ಕ್ಕೆ ಮುಕ್ತಾಯ ಸಮಾರಂಭ ಮತ್ತು ಬಹುಮಾನ ವಿತರಣೆ ಇರುತ್ತದೆ ಎಂದು ವಿವರಿಸಿದರು.

ಹೂವಿನ ನಮನ: ಈ ಬಾರಿಯ ಫ‌ಲಪುಷ್ಪ ಪ್ರದರ್ಶನಕ್ಕೆ ಬೆಂಗಳೂರಿನ ಸಿಕೆಸಿ ಜ್ಯುವೆಲರ್ಸ್‌ ವತಿಯಿಂದ ಮೈಸೂರು ಸಿಂಹಾಸನ ಮತ್ತು ಎರಡು ಹೂವಿನ ಅಲಂಕಾರಿಕ ಹೂವಿನ ದಸರಾ ಆನೆ, ಕನ್ನಡ ಚಿತ್ರರಂಗಕ್ಕೆ 85 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ 40 ಅಡಿ ರೀಲ್‌ನಲ್ಲಿ ಹೂವಿನ ನಮನ, 1ಕ್ಲಾಬ್‌ ಬೋರ್ಡ್‌, 1ಕ್ಯಾಮರಾ ಮತ್ತು 1ಸ್ಟೇಟ್‌ ಅವಾರ್ಡ್‌, 1 ಸೆಂಟ್ರಲ್‌ ಅವಾರ್ಡ್‌ ಮಾದರಿ ಪ್ರದರ್ಶನಗೊಳಿಸಲಾಗುತ್ತಿದೆ.

Advertisement

ಅಲ್ಲದೇ ಪ್ರತಿದಿನವೂ ಫ‌ಲಪುಷ್ಪ ಪ್ರದರ್ಶನಕ್ಕೆ ಕನ್ನಡ ಚಲನಚಿತ್ರ ನಟರಾದ ಸೃಜನ್‌ ಲೋಕೇಶ್‌, ಅಜಯ್‌ರಾವ್‌, ಆದಿತ್ಯ, ರಾಜ್‌
ವರ್ಧನ್‌, ಬಾಲು ನಾಗೇಂದ್ರ, ಚೇತನ್‌ ಚಂದ್ರ, ನಟಿ ಹರಿಪ್ರಿಯಾ ಮತ್ತು ಕಲರ್ಸ್‌ ಕನ್ನಡ ವಾಹಿನಿಯ ಧಾರವಾಹಿ ಕಲಾವಿದರು ಭಾಗವಹಿಸಲಿದ್ದಾರೆ.

ಆಕರ್ಷಕ ಮಾದರಿ: ತೋಟಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಕಾಲೇಜು ವತಿಯಿಂದ ಫ‌ಲಪುಷ್ಪ ಪ್ರದರ್ಶನ ಆವರಣದಲ್ಲಿ ವಿವಿಧ ವಸ್ತು ಪ್ರದರ್ಶನ ಇರುತ್ತದೆ. ಜೆ.ಕೆ. ಟೈರ್ ವತಿಯಿಂದ ಎರಡು ವಿಂಟೇಜ್‌ ಕಾರು ಮಾದರಿ, ಡೇರಿ ಡೇ ವತಿಯಿಂದ ಪಿಯಾನೋ ಮಾದರಿ ಮತ್ತು ಸುದರ್ಶನ್‌ ಸಿಲ್ಕ್ ವತಿಯಿಂದ ದುಬೈನ ಮಿರಾಕರ್‌ ಗಾರ್ಡನ್‌ ಫ್ಲೋರಲ್‌ ಮಾದರಿ ಮತ್ತು ಸಿಕೆಸಿ ಜ್ಯುವೆಲ್ಲರ್ಸ್‌ ವತಿಯಿಂದ ಸಿಂಹಾಸನ ಮತ್ತು 2 ಆನೆ ಮಾದರಿ ಇರುತ್ತದೆ. ವಯಸ್ಕರಿಗೆ 30 ರೂ., ಮಕ್ಕಳಿಗೆ 15 ರೂ. ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಹಬೀಬಾ ನಿಶಾತ್‌, ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಡಾ. ಡಿ. ಪ್ರಭಾಮಂಡಲ್‌, ಖಜಾಂಚಿ ಎಚ್‌. ಹನುಮಯ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next