ಬೆಂಗಳೂರು: ದಕ್ಷಿಣ ಭಾರತದ ಸಸ್ಯಕಾಶಿ ಎಂದೇ ಖ್ಯಾತಿ ಪಡೆದಿರುವ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ನಾಡಿನ ಕೆಂಗಲ್ ಹನುಮಂತಯ್ಯ ನೆನಪಿನಾರ್ಥ ಈ ಬಾರಿಯ 214ನೇ ಫಲಪುಷ್ಪ ಪ್ರದರ್ಶನ ಲಾಲ್ ಬಾಗ್‌ನಲ್ಲಿ ನಡೆಯಲಿದೆ.
ಪ್ರತಿವರ್ಷ ಒಂದೊಂದು ವಿಷಯವನ್ನು ಆಧಾರವಾಗಿ ಟ್ಟುಕೊಂಡು ತೋಟಗಾರಿಕೆ ಇಲಾಖೆ ಯಿಂದ ಲಾಲ್‌ಬಾಗ್‌ನಲ್ಲಿ ಆಯೋಜಿಸುವ ಫಲಪುಷ್ಪ ಪ್ರದರ್ಶನ, ಈ ಬಾರಿಯೂ ಇಡೀ ರಾಜ್ಯದ ಆಗು-ಹೋಗುಗಳ ಬಗ್ಗೆ ಚರ್ಚಿಸುವ ಕೇಂದ್ರಭಾಗ ವಿಧಾನಸೌಧ ನಿರ್ಮಾಣಕ್ಕೆ ಕಾರಣೀಭೂತರಾದ ಕೆಂಗಲ್ ಹನುಮಂತಯ್ಯ ಅವರ ಜೀವನ ಚರಿತ್ರೆ, ಸಾಧನೆ, ಕಾರ್ಯವೈಖ ರಿಗಳ ಕುರಿತು “ಕರ್ನಾಟಕದ ಶಕ್ತಿಕೇಂದ್ರ ವಿಧಾನಸೌಧದ ನಿರ್ಮಾತೃ ಶ್ರೀ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ -214ನೇ ಫಲಪುಷ್ಪ ಪ್ರದರ್ಶನ’ ಎಂಬ ಶೀರ್ಷಿಕೆಯಡಿ ಗಾಜಿನ ಮನೆಯನ್ನು ಬಣ್ಣ-ಬಣ್ಣ ಹೂವುಗಳಿಂದ ಅಲಂಕೃತಗೊಳಿಸಲು ಇಲಾಖೆ ಸಜ್ಜಾಗಿದೆ.
ಆ.4ರಿಂದ 15ರವರೆಗೆ ನಡೆಯಲಿರುವ ಈ ಫಲಪುಷ್ಪ ಪ್ರದರ್ಶನಕ್ಕೆ 2.5 ಕೋಟಿ ರೂ. ಮೀಸಲಿಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ, ಊಟಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹತ್ತಾರು ಬಗೆಯ ಹೂವು- ಹೂವಿನ ಕುಂಡಗಳನ್ನು ತರಿಸಲಾಗಿದ್ದು, ಸುಮಾರು 10 ರಿಂದ 12 ಲಕ್ಷ ಹೂಗಳಿಂದ ವಿಧಾನಸೌಧ, ಶಿವಪುರ ಸತ್ಯಾಗ್ರಹಸೌಧ, ಹಟ್ಟಿ ಚಿನದ ಗಣಿ ರಾಷ್ಟ್ರೀಕರಣ ಹೀಗೆ ಕೆಂಗಲ್ ಹನುಮಂತಯ್ಯ ಅವರ ಸಾಧನೆಯ ರೂಪಕಗಳು ಹೂವಿನಲ್ಲಿ ಅರಳಿವೆ.
ಈ ಬಾರಿ ವಿಶೇಷತೆಗಳು: ಈಗಾಗಲೇ 214ನೇ ಫಲಪುಷ್ಪ ಪ್ರದರ್ಶನದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುತ್ತಿದ್ದು, ಇದರಲ್ಲಿ ಪ್ರಮುಖವಾಗಿ ಲಾಲ್‌ಬಾಗ್ ಗಾಜಿನ ಮನೆಯ ಒಳಗಡೆ ವಿವಿಧ ಹೂವಿಗಳಿಂದ ನಿರ್ಮಾಣವಾಗುವ ವಿಧಾನಸೌಧದ ಪ್ರತಿರೂಪವೇ ಈ ಬಾರಿಯ ಫಲಪುಷ್ಪ ಪ್ರದರ್ಶನದ ಕೇಂದ್ರಬಿಂದು. ಅಲ್ಲದೇ, ದೇಶದ ಸ್ವಾತಂತ್ರ್ಯ ಹೋರಾಟದ ಪ್ರತೀಕವಾದ ನಾಡಿನ ಶಿವಪುರ ಸತ್ಯಾಗ್ರಹ ಸೌಧ, ಹಟ್ಟಿ ಚಿನ್ನದ ಗಣಿಯ ರಾಷ್ಟ್ರೀಕರಣ, ಕರ್ನಾಟಕ ಏಕೀಕರಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾರಂಭಕ್ಕೆ ಕೆಂಗಲ್ ಹನುಮಂ ತಯ್ಯ ಅವರು ಕಾರಣೀಕರ್ತ ಹಾಗೂ ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಹಿನ್ನೆಲೆ, ಈ ಎಲ್ಲಾ ವಿಷಯಗಳಿಗೆ ಸಂಬಂಧಪಟ್ಟಂತೆ ಹೂವುಗಳಿಂದ ಅಲಂಕರಿಸಲಾಗುತ್ತಿದೆ. ಜತೆಗೆ ಅವರ ಐತಿಹಾಸಿಕ ಭಾವಚಿತ್ರಗಳನ್ನೂ ಪ್ರದರ್ಶಿಸಲಾಗುತ್ತಿದೆ ಎಂದು ಲಾಲ್‌ಬಾಗ್ ಜಂಟಿ ನಿರ್ದೇಶಕ ಜಗದೀಶ್ ತಿಳಿಸುತ್ತಾರೆ.
ಸಾರ್ವಜನಿಕರು, ಮಕ್ಕಳಿಗೆ ವಿವಿಧ ಸ್ಪರ್ಧೆ: ತೋಟಗಾರಿಕೆ ಇಲಾಖೆಯು ಸಾರ್ವಜನಿಕರಲ್ಲಿ ಪರಿಸರ, ಗಿಡ-ಮರಗಳ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾ ಗಿದೆ. ಮಕ್ಕಳಿಗೆ ಪ್ರಬಂಧ ಹಾಗೂ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ವಿವಿಧ ಸಂಘ-ಸಂಸ್ಥೆ ಅಥವಾ ತರಬೇತಿ ಕೇಂದ್ರದ ಅಭ್ಯರ್ಥಿಗಳಿಗೆ ಇಕೆಬಾನ್, ಹಣ್ಣು- ತರಕಾರಿ ಕೆತ್ತನೆ ಹಾಗೂ ಪೂಕರ ಕಲೆ ಪ್ರದರ್ಶನದ ಸ್ಪರ್ಧೆ, ಚಿಕ್ಕ-ಚಿಕ್ಕ ಗಾರ್ಡನ್ ಸ್ಪರ್ಧೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ತೆಂಗಿನ ಗರಿಯ ಚಿತ್ತಾರದಿಂದ ಕೂಡಿದ ಜಾನೂರ್ ಕಲೆ, ಡಚ್ ಹೂವಿನ ಜೋಡಣೆ ಹೀಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು.
ಕೆಂಗಲ್ ಹನುಮಂತಯ್ಯ ಸ್ಮರಣಾರ್ಥ ಈ ಬಾರಿಯ ಫಲಪುಷ್ಪ ಪ್ರದರ್ಶನವಿರಲಿದ್ದು, ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಆ.4ರಿಂದ ಪ್ರದರ್ಶನ ಪ್ರಾರಂಭವಾಗಲಿದೆ. ಹನುಮಂತಯ್ಯ ಅವರು ರೈಲ್ವೆ ಸಚಿವರಾಗಿದ್ದ ಹಿನ್ನೆಲೆ ರೈಲಿನ ಎಂಜಿನ್ ಅಥವಾ ಬೋಗಿ ನಿರ್ಮಾಣ ಸೇರಿದಂತೆ ಇನ್ನೂ ಕೆಲವು ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಪ್ರದರ್ಶನ ದರದ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.
-ಡಾ.ಎಂ.ಜಗದೀಶ್, ಜಂಟಿ ನಿರ್ದೇಶಕರು, ಲಾಲ್‌ಬಾಗ್
-ಭಾರತಿ ಸಜ್ಜನ್