Advertisement

ಫಲ -ಪುಷ್ಪ ಪ್ರದರ್ಶನ; ಮಧು ಮಹೋತ್ಸವ

11:19 AM Feb 23, 2020 | Suhan S |

ಧಾರವಾಡ: ಕಾಮನಬಿಲ್ಲನ್ನೇ ನಾಚಿಸುವಂತಹ ನಾನಾ ಬಣ್ಣಗಳ ಫಲ-ಪುಷ್ಪಗಳು.. ಪುಷ್ಪಗಳಲ್ಲಿ ರೂಪ ಪಡೆದು ಗಮನ ಸೆಳೆದ ಶಿವಲಿಂಗ, ಸಂಗೀತದ ವಾದ್ಯ ಮೇಳಗಳು.. ವಿವಿಧ ಬಣ್ಣ ರೂಪಗಳಲ್ಲಿ ಮತ್ಸ್ಯಗಳ ಆಕರ್ಷಣೆ.. ತೆಂಗಿನಕಾಯಿಯಲ್ಲಿ ಗಣೇಶ ಸೇರಿದಂತೆ ವಿವಿಧ ರೂಪ.. ಹಾಗಲಕಾಯಿಯಲ್ಲಿ ಮೊಸಳೆ!

Advertisement

ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಫಲ-ಪುಷ್ಪ ಪ್ರದರ್ಶನದಲ್ಲಿ ಕಂಡ ದೃಶ್ಯಗಳಿವು. ಡಾ| ರಾಜಕುಮಾರ, ಎಪಿಜೆ ಅಬ್ದುಲ್‌ ಕಲಾಂ, ಸಂಗೊಳ್ಳಿ ರಾಯಣ್ಣ, ಗಂಗೂಬಾಯಿ ಹಾನಗಲ್‌ ಸೇರಿದಂತೆ ಗಣ್ಯರ ರೂಪಗಳು ಕಲ್ಲಂಗಡಿಗಳಲ್ಲಿ ಅರಳಿ ನಿಂತಿದ್ದು, ಗಮನ ಸೆಳೆದಿವೆ.

ಕಣ್ಣಿಗೆ ತಂಪೆರಚುವ ಬಗೆ ಬಗೆಯ ಪುಷ್ಪ, ನೋಡಿದಾಕ್ಷಣ ಸವಿಯಬೇಕೆಂಬ ಆಸೆ ಹುಟ್ಟಿಸುವ ಫಲಗಳೊಂದಿಗೆ ಆರೋಗ್ಯ-ಸೌಂದರ್ಯ ವರ್ಧಕ ಔಷಧೀಯ ಸಸ್ಯಗಳ ಸಮಾಗಮದೊಂದಿಗೆ ಪ್ರದರ್ಶನ ಕಳೆಗಟ್ಟಿದೆ. ಹೂಗಳಿಂದ ಬೃಹತ್‌ ಶಿವಲಿಂಗ ಅರಳಿ ನಿಂತಿದ್ದು, ಇದರ ಸುತ್ತಮುತ್ತಲೂ ವಿವಿಧ ಬಗೆಯ ಹೂಗಳಿಂದ ರಚಿಸಿರುವ ಆನೆ, ತಬಲಾ ಸೇರಿದಂತೆ ಸಂಗೀತ ವಾದ್ಯಗಳೂ ಕಣ್ಮನ ಸೆಳೆದಿವೆ. ಶಿವಲಿಂಗದ ಪಕ್ಕದಲ್ಲಿಯೇ ನವಧಾನ್ಯಗಳಿಂದ ರೂಪಿಸಿರುವ ಕನ್ನಡಾಂಬೆಯ ರೂಪಕ ಕೇಂದ್ರ ಬಿಂದುವಾಗಿದೆ.

ಈ ಪ್ರದರ್ಶನದಲ್ಲಿ ಆಕರ್ಷಿತ ಹೂವುಗಳಿಂದ ಭೂ ಸದೃಶ್ಯ (ಲ್ಯಾಂಡ್‌ ಸ್ಕೇಪಿಂಗ್‌), ಪುಷ್ಪಾಲಕೃಂತ ಶಿವಲಿಂಗ, ಕುಸುಮಾಲಂಕೃತ ಸಂಗೀತ ವಾದ್ಯಗಳು, ಆಕರ್ಷಿತ ಲಂಬ ಉದ್ಯಾನ (ವರ್ಟಿಕಲ್‌ ಗಾರ್ಡನ್‌), ಅಲಂಕಾರಿಕ ಮತ್ಸಾಗಾರ, ಜಲಕೃಷಿ, ಸಸ್ಯ ಸಂತೆ, ತರಕಾರಿ ಮತ್ತು ವಿವಿಧ ಹಣ್ಣುಗಳ ಕಲಾಕೃತಿ, ಅಲಂಕಾರಿಕ ಹೂಗಳ ಜೋಡಣೆ, ಸ್ಟ್ರಾಬೆರಿ ಹಣ್ಣಿನ ಬೆಳೆ ಪ್ರಾತ್ಯಕ್ಷಿಕೆ ಹೀಗೆ ವಿವಿಧ ಪ್ರಕಾರಗಳು ಗಮನ ಸೆಳೆದಿವೆ.

ಇದರ ಜೊತೆಗೆ ಮಧು ಮಹೋತ್ಸವ, ಇಲಾಖೆ ಯೋಜನೆಗಳ ಮಾದರಿ ಘಟಕಗಳಾದ ಹಣ್ಣು ಮಾಗಿಸುವ, ಈರುಳ್ಳಿ ಶೇಖರಣೆ, ನೆರಳು ಮತ್ತು ಪಾಲಿ ಮನೆ, ಮೆಣಸಿನಕಾಯಿ ಒಣಗಿಸುವ ಸೌರಶಕ್ತಿ ಘಟಕಗಳ ಪ್ರದರ್ಶನವೂ ಆಕರ್ಷಿಸಿವೆ. ಸಸ್ಯ ಸಂತೆಯಲ್ಲಿ ಗುಣಮಟ್ಟದ ದ್ವಿವಾಟೆ ಮಾವಿನ ಕಸಿ ಗಿಡಗಳು, ಪೇರಲ, ನಿಂಬೆ, ಪಪ್ಪಾಯ, ನುಗ್ಗೆ, ಕರಿಬೇವು, ದಾಸವಾಳ, ನಂದಿಬಟ್ಟಲು, ಮಲ್ಲಿಗೆ, ಗುಲಾಬಿ ಸೇರಿದಂತೆ ಇನ್ನಿತರ ಸಸಿಗಳನ್ನೂ ಮಾರಾಟಕ್ಕೆ ಇಡಲಾಗಿದೆ.

Advertisement

ಜೇನು ಸಾಕಾಣಿಕೆ ಮಾಹಿತಿ : ಈ ಪ್ರದರ್ಶನದಲ್ಲಿಯೇ ಪ್ರತ್ಯೇಕವಾಗಿ ಜಿಲ್ಲಾಮಟ್ಟದ ಮಧು ಮಹೋತ್ಸವ ಆಯೋಜಿಸಲಾಗಿದ್ದು, ಅದಕ್ಕಾಗಿ 10ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಇಲ್ಲಿ ವಿವಿಧ ಬಗೆಯ ಜೇನುತುಪ್ಪ, ಜೇನುಗೂಡುಗಳ ಪ್ರಾತ್ಯಕ್ಷಿತೆ ಇದೆ. ಜೇನು ಸಾಕಾಣಿಕೆ ಬಗ್ಗೆ ಮಾಹಿತಿ, ಜೇನುಹುಳ ಹಾಗೂ ತುಪ್ಪದ ಬಗೆಯ ಬಗ್ಗೆ ಮಾಹಿತಿಯೂ ಇದೆ. ಜೇನುತುಪ್ಪದಿಂದ ಮಾಡಿರುವ ಜ್ಯಾಮ್‌ ಸೇರಿದಂತೆ ವಿವಿಧ ಬಗೆಯ ಜೇನುತುಪ್ಪ, ಅದರ ಉಪ ಉತ್ಪನ್ನಗಳ ಮಾರಾಟವೂ ಸಾಗಿದೆ.

ಮತ್ಸ್ಯ ದರ್ಶನ ; ನಾನಾ ಬಗೆಯ ಬಣ್ಣದ ಮೀನುಗಳ ಪ್ರದರ್ಶನವೂ ಇಲ್ಲಿದ್ದು, ನೋಡುಗರ ಕಣ್ಮನ ಸೆಳೆದಿದೆ. ಗೋಲ್ಡ್‌ ಮೀನು, ಸಿಮಿ ಹಾರ್ಡ್‌ ಪೈಲ್‌ ಮೀನು, ಟಿಮ್‌ ಪೈಲ್‌ ಮೀನು, ಬ್ಲೂಗೋರಾ ಮೀನು, ಎಲೋ, ಬ್ಲೂ, ಗ್ರೀನ್‌ ಪ್ಯಾರೆಟ್‌, ರೆಡ್‌ ಪ್ಯಾರೆಟ್‌ ಮೀನು, ಗ್ರೀನ್‌ ಟೆರರ್‌, ಟೈಗರ್‌ ಆಸ್ಕರ್‌ ರೆಡ್‌ ಪ್ಯಾಚ್‌, ಸಿಲ್ವರ್‌ ಶಾರ್ಕ್‌ ಮೀನು, ವಾಸ್ತು ಮೀನಾಗಿರುವ ಪ್ಲಾವರ್‌ ಹಾರ್ನ್, ಸಿಲ್ವರ್‌ ಅರೋನಾ ಮೀನು ಸೇರಿದಂತೆ ಇನ್ನಿತರ ಜಾತಿಯ ಬಣ್ಣ ಬಣ್ಣದ ಮೀನುಗಳು ಗಮನ ಸೆಳೆದಿವೆ.

ಪ್ಲಾಸ್ಟಿಕ್‌ ತಂದ ಫ‌ಜೀತಿ : ಹು-ಧಾ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಭೇಟಿ ನೀಡಿದ್ದ ವೇಳೆ ಆಯುಕ್ತರಿಗೆ ಹೂಗುತ್ಛ ನೀಡಲು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ| ರಾಮಚಂದ್ರ ಮಡಿವಾಳ ಮುಂದಾದರು. ಆದರೆ, ಹೂಗುತ್ಛದ ಮೇಲೆ ಇದ್ದ ಪ್ಲಾಸ್ಟಿಕ್‌ ಗಮನಿಸಿದ ಆಯುಕ್ತರು, ಸರಕಾರಿ ಅಧಿಕಾರಿಗಳಾಗಿ ನೀವೇ ಹೀಗೆ ಮಾಡಿದರೆ ಹೇಗೆ? ಪ್ಲಾಸ್ಟಿಕ್‌ ಹಾಳೆ ಹೊದಿಕೆಯ ಈ ಹೂಗುತ್ಛ ಪಡೆಯಲ್ಲ. ಈ ಹೊದಿಕೆ ತೆಗೆದು ಹಾಕಿ. ಸಂಜೆ ವೇಳೆ ಸಚಿವರು ಪ್ರದರ್ಶನಕ್ಕೆ ಭೇಟಿ ನೀಡುತ್ತಾರೆ. ಆವಾಗ ಈ ರೀತಿ ಮಾಡದಂತೆ ಹೇಳಿದ್ದು, ಅಲ್ಲದೇ ದಂಡ ಕೂಡ ಹಾಕುವುದಾಗಿ ಹೇಳಿ ಅಲ್ಲಿಂದ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next