Advertisement

ಹೂವಿನ ಬದುಕು:ಫ್ಲವರ್‌ ಮಾರ್ಕೆಟ್‌ನಲ್ಲಿ ಜಾಸ್ತಿ ಹೂವು,ಸ್ವಲ್ಪ ಮುಳ್ಳು

03:24 PM Mar 24, 2018 | |

ಬೆಳಗಿನ ಜಾವ ಎರಡು ಗಂಟೆ. ಆಗ ಎದ್ದು ಮುಖ ತೊಳೆದುಕೊಂಡು ರೆಡಿಯಾಗಿ ಕಿವಿ ಮುಚ್ಚುವಂತೆ ಮಫ್ಲರ್‌ ಸುತ್ತಿಕೊಂಡು ಚಳಿಯಲ್ಲಿ ನಡುಗುತ್ತಾ ಚಿಕ್ಕಪ್ಪ ಬೈಕನ್ನೇರಿ ಹೋಗುತ್ತಿದ್ದರು. ಇದೇನೂ ಮೊದಲಲ್ಲ. ಪ್ರತಿದಿನವೂ ಹೀಗೆ ನಡೆಯುತ್ತಿತ್ತು. ಇದೇನಪ್ಪಾ ಹೀಗೆ? ಅಂದುಕೊಂಡು ಒಂದು ದಿನ ಅದೇ ಸಮಯಕ್ಕೆ ಎದ್ದು ‘ನಾನೂ ಬರ್ತೀನಿ’ ಅಂದೆ. ಆದರೆ ಅವರು “ಬೇಡಪ್ಪಾ, ಈಗ ತುಂಬಾ ಚಳಿ ಇದೆ. ನೀವು ಬರೋದು ಬೇಡ ಎಂದರು. ನಾನು ಪಟ್ಟು ಬಿಡದೆ  ಅವರ ಜೊತೆಯಲ್ಲಿಯೇ ಹೋದರೆ…. ಅವರು ತಲುಪಿದ್ದು ಹೂವಿನ ಮಾರ್ಕೆಟ್‌ಗೆ.  ಅದಾಗಲೇ ಅಲ್ಲಿ ಗಜಿಬಿಜಿ ಶುರುವಾಗಿತ್ತು. ಇಡೀ ದಾವಣಗೆರೆ ಮಲಗಿ ನಿದ್ದೆ ಮಾಡುತ್ತಿದ್ದರೂ, ಮಾರ್ಕೆಟ್‌ ಎಲ್ಲರಿಗಿಂತ ಬೇಗ ಎದ್ದು, ಚಕ್ಕಾಮಟ್ಲಾ ಹಾಕಿ ಕೂತು ಬಿಟ್ಟಿತ್ತು.  ಜನಜಂಗುಳಿಯಿಂದಾಗಿ ಬೆಳಗಿನ ಜಾಮದ ಸಿಹಿ ನಿದ್ದೆಯನ್ನೂ, ಸೂರ್ಯೋದಯದ ಸೊಗಸನ್ನೂ ನೋಡದ ದೌರ್ಭಾಗ್ಯ ಈ ಮಾರ್ಕೆಟ್‌ನದು. 

Advertisement

ಅಲ್ಲಿ ಒಂದೆಡೆ ‘ನೂರಕ್ಕೆ ಮೂರು ಮಾರು’ ಎಂದು ಕೂಗುತ್ತಿದ್ದರು. ಅಷ್ಟರಲ್ಲಿ ಚಿಕ್ಕಪ್ಪ ಅದ್ಯಾರೋ ವ್ಯಕ್ತಿಯೊಂದಿಗೆ ಮಾತನಾಡಿ ಅಲ್ಲಿದ್ದ ಸೇವಂತಿಗೆ ಹೂವನ್ನು ತಮ್ಮ ಕೈನಿಂದಲೇ ಅಳೆಯಲು ಆರಂಭಿಸಿದರು. ನಂತರ ಹೂವನ್ನು ಅವರಿಗೊಪ್ಪಿಸಿ  ಹಣ ತೆಗೆದುಕೊಳ್ಳಲು ಹೇಳಿದರು. ಅವರ ಮಾತಿನಂತೆ ಕೊಟ್ಟ ಹಣವನ್ನು ಪಡೆದು ಗಲ್ಲಾ ಪೆಟ್ಟಿಗೆಗೆ ಹಾಕಿ ಕೂತೆ. 

ಚಾಯ್‌, ಚಾಯ್‌ ಅಂತ ಕೂಗಿಕೊಂಡು ಬಂದ ಹುಡುಗನೊಬ್ಬನನ್ನು ಕರೆದು  ಇಬ್ಬರಿಗೂ ಎರಡು ಟೀ ಕೊಡಲು ಹೇಳಿದರು. ಹೀಗೆ ಇರುವಾಗ ಪಂಚೆ ಉಟ್ಟ ಸುಮಾರು ಆರೇಳು ಮಂದಿ ಬಂದು “ಅಣ್ಣಾ… ನಮ್ಮ ಹೂವ್‌ ಒಂಚೂರು ಸೇಲ್‌ ಮಾಡ್ಕೊಡು’ ಅಂದರು. ಆ ಸೇವಂತಿಗೆ, ಚೆಂಡು ಹೂಗಳನ್ನು ಮಾರುವಷ್ಟರಲ್ಲಿ ಬೆಳಗ್ಗೆ 6.30 ಆಗಿತ್ತು. 

 ಅಂದ ಹಾಗೆ ಇದು ಕರ್ನಾಟಕದ ಮ್ಯಾಂಚೆಸ್ಟರ್‌ ಎಂದೇ ಕರೆಯಲ್ಪಡುವ ಬೆಣ್ಣೆನಗರಿ ದಾವಣಗೆರೆಯ ಹೂವಿನ ಮಾರ್ಕೆಟ್‌ನ ದಿನಚರಿ. ಕಾಲಿಟ್ಟರೆ ಮಾರ್ಕೆಟ್‌ ತುಂಬೆಲ್ಲಾ ಹೂವಿನ ಪರಿಮಳ. ಎಲ್ಲರ ಬಾಯಲ್ಲೂ ಹೂವಿನದ್ದೇ ಕೂಗು.  ಹಳದಿ ಚೆಲ್ಲಿದಂತೆ ಕಾಣುವ ಸೇವಂತಿಗೆ ಹೂಗಳ ರಾಶಿ. ಚಾಂದಿನಿ, ಬಿಳಿಹೂವು, ಬೆಳ್ಳಟ್ಟಿ, ಕರ್ನಲ್‌, ಪಚ್ಚೆ ಹೀಗೆ ತರಾವರಿ ತಳಿಯ ಹೂಗಳು. ನಡು ನಡುವೆ ಮಲ್ಲಿಗೆ ಮೊಗ್ಗು, ಕಾಕಡ, ಕನಕಾಂಬರ, ಗುಲಾಬಿ ಹೂಗಳ ಸಮಾರಾಧನೆ. ಒಂದೆಡೆ ಬೇರೆ ಜಿಲ್ಲೆಗಳಿಗೆ, ರಾಜ್ಯಗಳಿಗೆ ಹೂಗಳನ್ನು ಪಾರ್ಸೆಲ್‌ ಕಳುಹಿಸಲು ಹೊಂಗೆ ಎಲೆಗಳಿಂದ ಸಿದ್ಧಪಡಿಸಿದ ಕಟ್ಟುಗಳನ್ನು ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಿಗೆ ಹೇರುತ್ತಿರುವ ದೃಶ್ಯವೂ ದಾವಣಗೆರೆಯಲ್ಲಿ ಕಾಣಸಿಗುತ್ತದೆ. 

ಹೊತ್ತು ಮೇಲೇರುವ ಮೊದಲೇ ಸುತ್ತಮುತ್ತಲಿನ ಹಳ್ಳಿಯ ಅದೆಷ್ಟೋ ರೈತರು ಇಲ್ಲಿಗೆ ಬರುತ್ತಾರೆ. ರಸ್ತೆಗಳ ಇಕ್ಕೆಲಗಳಲ್ಲಿ ಹೂವುಗಳದ್ದೇ ಕಾರುಬಾರು. ಎತ್ತ ನೋಡಿದರೂ ಹೂವಿನ ಘಮಲು. ಹರಡಿಕೊಂಡ ಹೂ ರಾಶಿಯ ನಡುವೆ ಯಂತ್ರದಂತೆ ಸರಸರನೆ ಹೂವು ಅಳೆಯುವ ಕೈಗಳು. ಅಲ್ಲಿಯೇ ತಿಂಡಿ, ಊಟ. ತಾವು ತಿನ್ನುವುದು ಯಾರಿಗೂ ಕಾಣಬಾರದು ಅಂತ ಕೆಲವರು ಛತ್ರಿಯನ್ನು ಅಡ್ಡ ಇಟ್ಟುಕೊಳ್ಳುವುದೂ ಉಂಟು.

Advertisement

 ಹಸುಗೂಸು ಅಲ್ಲೇ ಮಲಗಿರುತ್ತದೆ. ಅದರ ತಾಯಿ ಹೂವು ಮಾರುತ್ತಿರುತ್ತಾಳೆ. ಊಟವೂ ಅಲ್ಲೇ,  ನಿದ್ದೆಯೂ ಅಲ್ಲೇ. ಒಂಥರಾ ಮಾರುಕಟ್ಟೆ  ಅನ್ನೋದು ಎಲ್ಲ ನೋವು, ನಲಿವುಗಳಿಗೆ ಸ್ಪಂದಿಸುವ ಸಂಜೀವಿನಿಯಂತೆ ಕಾಣುತ್ತದೆ. 

ಇದು ಒಂದೆಡೆಯಾದರೆ ಅಕ್ಕಪಕ್ಕದ ಹಳ್ಳಿಗಳಿಂದ ಬರುವ ರೈತರದ್ದು ಮತ್ತೂಂದು ಬಗೆಯ ಗೋಳು. ಬೀದಿ ಬದಿಯಲ್ಲಿ ಮಲಗಬೇಕು, ಕೊರೆಯುವ ಚಳಿಗೆ ಮೈ ಒಡ್ಡಬೇಕು. ಮಾರುಕಟ್ಟೆಗೆ ಹೋದರೆ ಒಳ್ಳೆಯ ಹಣ ಸಿಗುತ್ತದೆ ಎಂಬ ನಂಬಿಕೆಯಿಂದ ಬಂದರೆ…ಹೂವಿನ ಬೆಲೆ ಷೇರು ಮಾರುಕಟ್ಟೆಯ ಸೂಚ್ಯಂಕದಂತೆ ಏರಿಳಿಯುತ್ತಿರುತ್ತದೆ. ಎಷ್ಟೋ ಸಲ ರೈತರ ಲೆಕ್ಕಾಚಾರವೆಲ್ಲ ಉಲ್ಟಾಪಲ್ಟಾ ಆಗುವುದೂ ಉಂಟು. ಆ ರೀತಿ ಆದಾಗ ಹೂವೆಲ್ಲ ಮಾರುಕಟ್ಟೆಯ ಮುಂದೆ ಚೆಲ್ಲಾಪಿಲ್ಲಿಯಾಗಿ ಹರಡಿಬಿದ್ದಿರುತ್ತದೆ.   ಅನೇಕ ದಲ್ಲಾಳಿಗಳಿದ್ದರೂ ಕೂಡ ರೈತರು ಆರಿಸುವುದು ಕೆಲವೇ ಮಂದಿಯನ್ನು. ಅದಕ್ಕೆ ಕಾರಣ ನಂಬಿಕೆ ಮತ್ತು ಬುದ್ಧಿವಂತಿಕೆ. 

ಹೂಗಳಿಗೆ ಡಿಮ್ಯಾಂಡ್‌ ಇರುವ ಕಾಲ ಎಂದರೆ ದೀಪಾವಳಿ, ದಸರಾ, ಶ್ರಾವಣ, ಮದುವೆ ಸಮಾರಂಭಗಳು ಅಧಿಕವಾಗಿದ್ದಾಗ.  ವರಮಹಾಲಕ್ಷಿ$¾à ಹಬ್ಬ, ಗಣೇಶೋತ್ಸವ ಮತ್ತು ಯುಗಾದಿಗಳಂದು ಹೂವಿನ ಬೆಲೆ ಗಗನಕ್ಕೇರಿರುತ್ತದೆ. ಆ ಸಮಯದಲ್ಲಿ ಒಳ್ಳೆಯ ಲಾಭ ಸಿಗುತ್ತದೆ ಅಂತಾರೆ ರೈತರು. ಇನ್ನು ಬೇರೆ ಸಂದರ್ಭಗಳಲ್ಲಿ ಸಾಧಾರಣ ಬೆಲೆ. ಹಣ ಗಳಿಕೆಯಲ್ಲಿ ತೀವ್ರ ವ್ಯತ್ಯಾಸವೇನೂ ಆಗುವುದಿಲ್ಲ. ಇನ್ನು ಇಲ್ಲಿ ಹೂಗಳನ್ನು ಖರೀದಿಸುವ ಗ್ರಾಹಕರಲ್ಲಿ ಕೆಲವರು ಪ್ರತಿನಿತ್ಯ ಬರುತ್ತಾರೆ. ರೀಟೇಲ್‌ ವ್ಯಾಪಾರ ಮಾಡುವ ವ್ಯಾಪಾರಸ್ಥರು ಹೋಲ್‌ಸೇಲ್‌ ದರದಲ್ಲಿ ಖರೀದಿಸಲು ಇಲ್ಲಿಗೆ ಮುಂಜಾನೆಯೇ ನಿದ್ದೆಗೆಟ್ಟು ಬಂದಿರುತ್ತಾರೆ. ಹೀಗಾಗಿ ಈ ಪ್ರದೇಶ ಸದಾ ಗಿಜಿಗಿಜಿ ಅನ್ನುತ್ತಿರುತ್ತದೆ. ಆದರೆ ಎಂಟು ಒಂಭತ್ತು ಗಂಟೆಯಷ್ಟರಲ್ಲಿ ಈ ಪ್ರದೇಶ ಮೌನವಾಗಿಬಿಡುತ್ತದೆ. ಮತ್ತೆ ರಾತ್ರಿ ಒಂಭತ್ತು ಗಂಟೆಯಿಂದ ಹೂವಿನ ವ್ಯಾಪಾರದ ಭರಾಟೆ ಶುರುವಾಗುತ್ತದೆ. 

ಚಿಕ್ಕಪ್ಪ ನಿತ್ಯವೂ ಬೆಳಗಿನ ಜಾಮ ಎದ್ದು ಹೋಗುತ್ತಾರೆ. ಹೂವಿನ ಕೂಗುಗಳ ಮಧ್ಯೆಯೇ ವ್ಯಾಪಾರ ಮುಗಿಸಿ ಬರುತ್ತಾರೆ. ಬೆಲೆಯ ಏರುಪೇರಿನ ಆಧಾರದ ಮೇಲೆ ರೈತರ ಮುಖದಲ್ಲಿ  ಖುಷಿ, ಬೇಸರದ ಗೆರೆಗಳು ಮೂಡಿ ಮರೆಯಾಗುತ್ತಿರುತ್ತವೆ. 

ಲಕ್ಷ್ಮೀಕಾಂತ್‌ ಎಲ್‌ 

Advertisement

Udayavani is now on Telegram. Click here to join our channel and stay updated with the latest news.

Next