Advertisement
ಪಾಟೀಲರಿಗೆ ಒಟ್ಟು ಐದು ಎಕರೆ ಯಲ್ಲಿ ಜಮೀನಿದೆ. ಈ ಹಿಂದೆ ಜೋಳ, ಸಜ್ಜೆಗಳನ್ನು ಬೆಳೆಯುತ್ತಿದ್ದರು. ಆದರೆ ಕೆಲಸದ ನಿಮಿತ್ತ ಬಳ್ಳಾರಿ ಕಡೆ ತಿರುಗಾಡುತ್ತಿದ್ದಾಗಲೇ ಕಣ್ಣಿಗೆ ಬಿದ್ದಿದ್ದು ಈ ಹೂವಿನ ಕೃಷಿ. ಪ್ರಯಾಣದ ವೇಳೆಯಲ್ಲಿ ವಿಸ್ತಾರವಾಗಿ ಹರಡಿರುವ ಕೃಷಿ ಭೂಮಿಯನ್ನು ಕುತೂಹಲದಿಂದ ವೀಕ್ಷಿಸುವುದು ಇವರಅಭ್ಯಾಸ. ಕುಷ್ಟಗಿ, ಗಂಗಾವತಿ, ಕಂಪ್ಲಿ ಹೀಗೆ ಹಲವು ಕಡೆಗಳಲ್ಲಿ ರಸ್ತೆಯ ಬದಿಯ ಹೊಲಗಳಲ್ಲಿ ಕಾಣುತ್ತಿದ್ದ ಸಣ್ಣ ಸಣ್ಣ ತಾಕುಗಳಲ್ಲಿ ಬೆಳೆಯುತ್ತಿದ್ದ ಹೂವಿನ ತೋಟ ಆಕರ್ಷಿಸಿತು. ಅದನ್ನು ನೋಡಿದ ನಂತರ ತಮ್ಮ ಹೊಲವನ್ನು ಪರಿವರ್ತಿಸಿದರು.
ಹೂವಿನ ಕೃಷಿಯಲ್ಲಿ ಪಾಟೀಲರಿಗೆ ಐದು ವರ್ಷದ ಅನುಭವವಿದೆ. ಆರಂಭದಲ್ಲಿ ಮೂರು ಎಕರೆಯಲ್ಲಿ ಸುಗಂಧರಾಜ ಬೆಳೆದರು. ಆಳವಾಗಿ ಉಳುಮೆ ಮಾಡಿ, ಯಥೇಚ್ಚ ಕಾಂಪೋಸ್ಟ್ ಗೊಬ್ಬರ ಸೇರಿಸಿದರು. ನೇಗಿಲು ಹೊಡೆದು ರೆಂಟೆಯಲ್ಲಿ ಹರಗಿ ಸಾಲಿನಿಂದ ಸಾಲಿಗೆ ಎರಡೂವರೆ ಅಡಿ, ಗಿಡದ ನಡುವೆ ಒಂದು ಅಡಿ ಅಂತರವಿಟ್ಟು ಗಡ್ಡೆಗಳನ್ನು ನಾಟಿ ಮಾಡಿದರು. ಮುಂದೆ ದುರಾಗಬಹುದಾದ ಕೊಳೆರೋಗ, ಗೆದ್ದಲು ಹುಳುಗಳ ನಿಯಂತ್ರಣಕ್ಕೆ ಗಡ್ಡೆ ಊರಿದ ಸ್ಥಳದಲ್ಲಿ ಒಂದೊಂದು ಹಿಡಿಯಷ್ಟು ಬೇವಿನ ಬೀಜದ ಪುಡಿಯನ್ನು ಸುರಿದು ಮಣ್ಣಿನ ಹೊದಿಕೆ ಮಾಡಿದರು. ಮೂವತ್ತು ದಿನದಲ್ಲಿ ಚಿಗುರು ಗೋಚರಿಸಿತು. ನಾಟಿ ಮಾಡಿದ ಎರಡೂವರೆ ತಿಂಗಳಿಗೆ
ಫಲವತ್ತಾದ ಕೆರೆ ಮಣ್ಣನ್ನು ಬುಡಕ್ಕೇರಿಸಿಕೊಟ್ಟರು. ಎಕರೆಗೆ ಆರು ಟ್ರಾಕ್ಟರ್ ಕಾಂಪೋಸ್ಟ್ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಿದರು.ಆರು ತಿಂಗಳಲ್ಲಿ 4-5 ಕೆಜಿಯಿಂದ ಆರಂಭವಾದ ಹೂವು ಒಂದು ವರ್ಷ ಪೂರೈಸುವುದರೊಳಗಾಗಿ ದಿನವೊಂದಕ್ಕೆ 40-45 ಕಿ.ಗ್ರಾಂ ದೊರೆಯತೊಡಗಿತು.
Related Articles
ಸುಗಂಧರಾಜ ಕೃಷಿಯಲ್ಲಿ ಮೂರು ವರ್ಷಕ್ಕೊಮ್ಮೆ ಸ್ಥಳ ಬದಲಾಯಿಸುವುದು ವಾಡಿಕೆ. ಆದರೆ ಇವರ ಜಮೀನಿನಲ್ಲಿರುವ ಸುಗಂಧರಾಜಕ್ಕೆ ಐದು ವರ್ಷ. ಆರಂಭದಲ್ಲಿ ನಾಟಿ ಮಾಡಿದ ಗಡ್ಡೆಗಳೇ ಈಗಲೂ ಹೊಲದಲ್ಲಿವೆ. ಭರ್ತಿ ಹೂ ಇಳುವರಿಯನ್ನೇ
ನೀಡುತ್ತಿದೆ. ಹೂವಿಗೆ ಹುಳದ ಬಾಧೆ ಕಾಡಿದರೆ ಎಂದು ತಿಂಗಳಲ್ಲಿ ಎರಡರಿಂದ ಮೂರು ಬಾರಿ ಭೂಮ್ ಫ್ಲವರ್ ಔಷಧಿ ಸಿಂಪಡಿಸುತ್ತಾರೆ. ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳ ವರೆಗೆ ಹೂವಿನ ಇಳುವರಿ ಕಡಿಮೆ.ಆಗ ದಿನಕ್ಕೆ 20-25 ಕಿ.ಗ್ರಾಂ ಸಿಗುತ್ತದೆ.ಉಳಿಕೆ ದಿನಗಳಲ್ಲಿ 70-100 ಕೆ.ಜಿಯ ವರೆಗೆ ಸಿಗುತ್ತದೆ. ಈ ವರ್ಷದ ಜುಲೈ ಮತ್ತು ಆಗಸ್ಟ್ ಎರಡೇ ತಿಂಗಳಲ್ಲಿ 1,37,000ಆದಾಯ ಬಂದಿದ್ದನ್ನು ನೆನಪಿಸಿಕೊಂಡರು.
Advertisement
ಎಚ್.ಆರ್.ಕಡಿವಾಲ