Advertisement

ಮನೆಯಂಗಳದಲ್ಲಿ ತರಹೇವಾರಿ ಹೂವು, ಹಣ್ಣು

01:06 PM Oct 13, 2018 | |

ಆಧುನೀಕರಣದ ಭರಾಟೆಯಲ್ಲಿ ಎಲ್ಲೆಡೆ ಕಾಂಕ್ರೀಟ್‌ ಕಟ್ಟಡಗಳು ತಲೆ ಎತ್ತುತ್ತಿದ್ದರೂ ಮಂಗಳೂರಿನ ಕರಂಗಲ್ಪಾಡಿ ನಿವಾಸಿ ಲಿಲ್ಲಿ ಪಿಂಟೊ ಕುಟುಂಬ ಶತಮಾನದಷ್ಟು ಹಳೆಯ ಹಂಚಿನ ಮನೆಯನ್ನು ಹಾಗೂ ಅದರ ಸುತ್ತ ಸುಂದರ ಪರಿಸರವನ್ನು ಉಳಿಸಿ ಸಂರಕ್ಷಿಸಿಕೊಂಡು ಬರುವಲ್ಲಿ ಪ್ರಯತ್ನಿಸುತ್ತಿದೆ. ಅದರ ಫಲವಾಗಿ ಮನೆಯ ಅಂಗಳ ಮತ್ತು ಆವರಣ ಪೂರ್ತಿ ಹೂವು, ಹಣ್ಣಿನ ಗಿಡ, ಮರಗಳೊಂದಿಗೆ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಈ ಕುರಿತು ತಮ್ಮ ಅನುಭವವನ್ನು ಇತರರ ಜತೆ ಹಂಚಿಕೊಂಡು ತರಬೇತಿಯನ್ನೂ ನೀಡುತ್ತಿರುವುದು ಲಿಲ್ಲಿ ಪಿಂಟೊ ಅವರ ವೈಶಿಷ್ಟ್ಯ.

Advertisement

ಲಿಲ್ಲಿ ಪಿಂಟೊ ಅವರು ವೃತ್ತಿಯಲ್ಲಿ ನರ್ಸ್‌. ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆ ಮತ್ತು ಮಂಗಳೂರಿನ ಒಮೆಗಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದ ಅವರು, ಮಕ್ಕಳ ವಿದ್ಯಾಭ್ಯಾಸದ ಪ್ರಯುಕ್ತ 2007ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಮಕ್ಕಳ ಪಾಲನೆಯ ಜತೆಗೆ ಹೂವು, ಹಣ್ಣು, ತರಕಾರಿಗಳ ಪೋಷಣೆಯಲ್ಲೂ ನಿರತರಾಗಿದ್ದಾರೆ.

ಕಂಕನಾಡಿ ಫಾದರ್‌ ಮುಲ್ಲರ್ನಲ್ಲಿ ನರ್ಸಿಂಗ್‌ ವಿದ್ಯಾಭ್ಯಾಸ ಮಾಡಿದ್ದ ಅವರು ಬೆಂಗಳೂರಿನ ಸರಕಾರಿ ಫ್ಲೈಯಿಂಗ್  ಸ್ಕೂಲ್‌ನ ಪೈಲೆಟ್‌ ಇನ್ಸ್‌ಟ್ರಕ್ಟರ್‌ ಮಂಗಳೂರಿನ ನಿವಾಸಿ ಅಲೋಶಿಯಸ್‌ ಪಿಂಟೊ ಅವರನ್ನು ವರಿಸಿದ ಬಳಿಕ ಕೆಲವು ವರ್ಷ ಬೆಂಗಳೂರು, ತಿರುವನಂತಪುರ ಮತ್ತಿತರ ಕಡೆ ನೆಲೆಸಿದ್ದರು. 2007ರಿಂದ ಮಕ್ಕಳ ಶಿಕ್ಷಣದ ಪ್ರಯುಕ್ತ ಮಂಗಳೂರಿನಲ್ಲಿ ವಾಸ್ತವ್ಯ ಆರಂಭಿಸಿದ್ದು, ಈ ಸಂದರ್ಭದಲ್ಲಿ ಗಾರ್ಡನಿಂಗ್‌ ಹವ್ಯಾಸ ಬೆಳೆಸಿಕೊಂಡಿದ್ದರು. ಮಕ್ಕಳ ವಿದ್ಯಾಭ್ಯಾಸ ಮುಗಿದ ಬಳಿಕ ಕಳೆದ 4- 5 ವರ್ಷಗಳಿಂದ ಗಾರ್ಡನಿಂಗ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದು, ಈಗ ಮನೆ ಆವರಣ ಪೂರ್ತಿ ಹುಲುಸಾಗಿ ಬೆಳೆದಿರುವ ಹೂವು, ಹಣ್ಣಿನ ಗಿಡಗಳಿಂದ ಕಂಗೊಳಿಸುತ್ತಿದೆ.

ಇತರರಿಗೂ ತರಬೇತಿ
ಮನೆ ಆವರಣದಲ್ಲಿ ಹೂಗಿಡಗಳನ್ನು ಸಾಮಾನ್ಯವಾಗಿ ಎಲ್ಲರೂ ಬೆಳೆಸುತ್ತಾರೆ. ಆದರೆ ಅವುಗಳನ್ನು ಒಪ್ಪಓರಣವಾಗಿ ಇರಿಸಿ ಸ್ವತ್ಛತೆಯನ್ನು ಕಾಯ್ದುಕೊಂಡು ಬಂದರೆ ಮಾತ್ರ ಮನೆಗೆ ಅಂದ ಬರುತ್ತದೆ. ಸುಸೂತ್ರವಾಗಿ ಜೋಡಿಸಿಟ್ಟರೆ ಅವುಗಳ ಪಾಲನೆ ಪೋಷಣೆ ಸುಲಭ. ತಾನು ಇದನ್ನು ಪಾಲಿಸಿದ್ದು, ಈ ಮಾದರಿಯನ್ನು ಅನುಸರಿಸುವಂತೆ ಇತರರಿಗೂ ತರಬೇತಿ ನೀಡುತ್ತಿದ್ದೇನೆ. ಗಿಡಗಳನ್ನು ಮಾರಾಟ ಮಾಡುವುದಿಲ್ಲ. ಹಣ್ಣುಗಳನ್ನು ಅಕ್ಕ ಪಕ್ಕದವರಿಗೆ ಹಂಚಿಕೊಡುತ್ತೇವೆ ಎನ್ನುತ್ತಾರೆ ಲಿಲ್ಲಿ ಪಿಂಟೊ.

ಹಲವು ಗಿಡಗಳು
ಇವರ ಮನೆಯಂಗಳದಲ್ಲಿ ಅಂತೂರಿಯಂ, ಆರ್ಕಿಡ್ಸ್‌, ಎಡೇನಿಯಂ, ಗುಲಾಬಿ, ದಾಸವಾಳ, ಅಬ್ಬಲಿಗೆ, ಪೆಂಟಾಸ್‌, ಗ್ರೌಂಡ್‌ ಆರ್ಕಿಡ್ಸ್‌, ಇಫೋರ್ಬಿಯಾ, ಎಕ್ಸೋರಾ, ತಾವರೆ, ಮಲ್ಲಿಗೆ, ಮೆಗ್ನೇಲಿಯಾ, ಟೇಬಲ್‌ ರೋಸ್‌, ಪಾರಿಜಾತ, ಬೊಗೊನ್‌ ವಿಲ್ಲಾ, ರತ್ನ ಗಾಂಧಿ, ವಿವಿಧ ಇಂಡೋರ್‌ ಪ್ಲಾಂಟ್ಸ್‌, ಕಲರ್‌ಫುಲ್‌ ಗ್ರೀನ್ಸ್‌, ಡೇಝೀಸ್‌, ಝರ್ಬೆರಾಸ್‌, ಲೆಂಟಾನ, ಅಲಮಾಂಡ, ವಿವಿಧ ಹುಲ್ಲು (ಲಾನ್‌) ಗಳು ಇತ್ಯಾದಿ ಹೂವಿನ ಗಿಡಗಳು, ಮಾವು(ಆಪೂಸ್‌, ಮಲ್ಲಿಕಾ, ತೋತಾಪುರಿ), ಸೀತಾಫಲ (3-4 ವೆರೈಟಿ), ಬಾಳೆಹಣ್ಣು (ನೇಂದ್ರ, ಕದಳಿ, ರಸ ಬಾಳೆ, ಕೆವಂಡೀಸ್‌, ಚಂದ್ರ ಬಾಳೆ, ಅವುಂಡ ಬಾಳೆ ಕಾಯಿ), ಮಲೇಶಿಯನ್‌ ಆ್ಯಪಲ್‌, ಪೇರಳೆ, ದ್ರಾಕ್ಷೆ, ರಂಬೂಟನ್‌, ಬಟರ್‌ಫ್ರುಟ್‌, ಲಿಂಬೆ, ಏಲಕ್ಕಿ, ಅರಸಿನ ಮೊದಲಾದ ಹಣ್ಣಿನ ಗಿಡ, ಮರ ಗಳು, ಅಲಸಂಡೆ, ಬೆಂಡೆ, ತೊಂಡೆ, ಹೀರೆ, ಹಾಗಲ, ಹರಿವೆ, ಬದನೆ, ದೀವಿಗುಜ್ಜೆ ಇತ್ಯಾದಿ ತರಕಾರಿ ಗಿಡಗಳು, ಔಷಧೀಯ ಗುಣಗಳಿರುವ ತಿಮರೆ, ತುಳಸಿ, ನೀಮ್‌, ಇನ್ಸುಲಿನ್‌ ಗಿಡಗಳು, ಅಲೊವೇರಾ, ಮಿಂಟ್‌, ಲೆಮೆನ್‌ ಗ್ರಾಸ್‌ ಇತ್ಯಾದಿ ಗಿಡಗಳಿವೆ

Advertisement

ತಂದೆಯಿಂದ ಪ್ರೇರಣೆ
ನನ್ನ ಊರು ಮಡಂತ್ಯಾರು. ತಂದೆ ಮಥಾಯಸ್‌ ಶೆರಾ ಕೃಷಿಕರಾಗಿದ್ದು, ಅವರು ಎಲ್ಲೇ ಹೋದರೂ ಒಂದೆರಡು ಹೊಸ ಗಿಡ/ ಬಳ್ಳಿಗಳನ್ನು ತರುತ್ತಿದ್ದರು. ನನ್ನ ಪರಿಸರ ಪ್ರೇಮಕ್ಕೆ ಅವರೇ ಪ್ರೇರಣೆ. ಈಗ ನಾನು ಬೇರೆ ಬೇರೆ ಹೂವಿನ ಗಿಡಗಳನ್ನು ಹುಡುಕಿಕೊಂಡು ದೂರದ ಬೆಂಗಳೂರು, ಮೈಸೂರು, ಕೊಚಿನ್‌ ಮುಂತಾದ ಕಡೆಗೆ ಹೋಗಿ ತರುತ್ತಿದ್ದೇನೆ. ಹಳೆಯ ಕಾಲದ ಹಂಚಿನ ಮನೆಯನ್ನು ಉಳಿಸಿಕೊಂಡು ಬರಬೇಕೆನ್ನುವುದು ನನ್ನ ಪತಿ ಅಲೋಶಿಯಸ್‌ ಪಿಂಟೊ ಅವರ ಕನಸು. ಅವರ ಕನಸನ್ನು ಸಾಕಾರಗೊಳಿಸುವುದರ ಜತೆಗೆ ಹಚ್ಚ ಹಸಿರಿನ ಪರಿಸರವನ್ನು ನಿರ್ಮಾಣ ಮಾಡಿದ್ದೇವೆ. ಇದರಿಂದ ಮನೆಯಲ್ಲಿ ತಂಪಾದ ವಾತಾವರಣ ಇದೆ. ನನ್ನ ಅಜ್ಜಿ ಮರಿಯಾ ಡಿ’ಸೋಜಾ ಅವರಿಗೆ ಹೂವುಗಳೆಂದರೆ ಅತಿಯಾದ ಪ್ರೀತಿ. ಅವರು ಊರಿನಲ್ಲಿ ಎಲ್ಲಿಗೆ ಹೋಗುತ್ತಿದ್ದರೂ ತಾನು ಬೆಳೆದ ಅಬ್ಬಲಿಗೆ, ಮಲ್ಲಿಗೆ ಮತ್ತಿತರ ಹೂವುಗಳನ್ನು ಮುಡಿದುಕೊಂಡು ಹೋಗುತ್ತಿದ್ದರು. ನಾನು ಹುಟ್ಟಿದಾಗ ಸುಂದರವಾದ ‘ಲಿಲ್ಲಿ’ ಹೂವುಗಳ ಹೆಸರನ್ನು ಅವರು ನನಗಿಟ್ಟಿದ್ದರು ಎನ್ನುತ್ತಾರೆ ಲಿಲ್ಲಿ ಪಿಂಟೊ.

 ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next