Advertisement

ಸಣ್ಣ ಜಮೀನಿನಲ್ಲಿ ಹೂವು ಕೃಷಿ; ಪ್ಯಾಕೇಜ್‌ಗೆ ಬೆಳೆಗಾರರ ನಿರಾಸಕ್ತಿ

10:41 PM Aug 25, 2020 | mahesh |

ಉಡುಪಿ: ಕೋವಿಡ್ ಲಾಕ್‌ಡೌನ್‌ ಸಂದರ್ಭ ಸಂಕಷ್ಟಕ್ಕೀಡಾಗಿರುವ ಉದ್ಯಮಗಳಿಗೆ ರಾಜ್ಯ ಸರಕಾರ ಪ್ಯಾಕೇಜ್‌ ಘೋಷಣೆ ಮಾಡಿದ್ದು, ಒಂದು ಹೆಕ್ಟೇರ್‌ ಮಿತಿಗೊಳಪಟ್ಟ ಹೂವು ಬೆಳೆಗಾರರಿಗೆ 25 ಸಾವಿರ ರೂ. ಪರಿಹಾರ ಘೋಷಿಸಲಾಗಿತ್ತು. ಆದರೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಶಂಕರಪುರ ಮಲ್ಲಿಗೆ ಸಹಿತ ಹೆಚ್ಚಿನ ಹೂವು ಕೃಷಿ ಹೆಕ್ಟೇರ್‌ಗಟ್ಟಲೆ ಜಮೀನನ್ನು ಆಧರಿಸಿಲ್ಲ; ಕೆಲವು ಸೆಂಟ್ಸ್‌ ಸ್ಥಳದಲ್ಲಿ ಬೆಳೆಯುವಂಥದ್ದು. ಹೆಕ್ಟೇರ್‌ ಆಧಾರದಲ್ಲಿ ಘೋಷಣೆಯಾಗಿರುವ ಪರಿಹಾರ ಈ ಬೆಳೆಗಾರರಿಗೆ “ಅರೆಕಾಸಿನ ಮಜ್ಜಿಗೆ’ಯಂತಾಗಿ ಪ್ರಯೋಜನಕ್ಕೆ ಬರುತ್ತಿಲ್ಲ. ಪರಿಹಾರದ ಮಾನದಂಡವನ್ನು ಬದಲಾಯಿಸಿದರೆ ಮಾತ್ರ ಈ ಭಾಗದ ಹೂ ಬೆಳೆಗಾರರಿಗೂ ಪ್ರಯೋಜನವಾಗಲು ಸಾಧ್ಯ. ಇದು ಇಲ್ಲಿನ ಹೂ ಬೆಳೆಗಾರರ ಬೇಡಿಕೆಯೂ ಹೌದು.

Advertisement

ಈ ಕಾರಣಕ್ಕೆ ಹೆಚ್ಚಿನ ಬೆಳೆಗಾರರು ಇದಕ್ಕಾಗಿ ನೋಂದಾಯಿಸಿಕೊಂಡಿಲ್ಲ. ಆದರೆ ಸರಕಾರದ ಸೌಲಭ್ಯ ಪಡೆಯಲು ನೋಂದಣಿ ಅನಿವಾರ್ಯ. ಆದುದರಿಂದ ಇಲ್ಲಿ ಬೆಳೆಯುವವರಿ ದ್ದರೂ ಲೆಕ್ಕಕ್ಕಿಲ್ಲದಂತಾ ಗಿದ್ದು, ಈಗ ಪರಿಹಾರಕ್ಕೆ ಅರ್ಜಿ ಹಾಕಿದರೂ ಅದು ಎಟಕುತ್ತಿಲ್ಲ. ಇನ್ನು ಕೆಲವರಲ್ಲಿ ದಾಖಲೆಗಳು ಸರಿ ಇಲ್ಲದಿರುವುದೂ ಪರಿಹಾರ ಸಿಗದಿರಲು ಕಾರಣ.

ಉಡುಪಿ ಜಿಲ್ಲೆಯ 1,319 ಮಂದಿ ಹೂ ಬೆಳೆಗಾರರ ಪೈಕಿ 580 ಮಂದಿ ಬೆಳೆಗಾರರಿಗೆ 6.48 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಇನ್ನೂ 730 ಮಂದಿಗೆ ವಿತರಣೆಗೆ ಬಾಕಿ ಇದೆ. 430 ಮಂದಿ ಇನ್ನೂ ದಾಖಲಾತಿ ಸಲ್ಲಿಸಿಲ್ಲ. 10,473 ಮಂದಿ ಹಣ್ಣು ಬೆಳೆಗಾರರಿದ್ದು, 3,041 ಮಂದಿ ಪರಿಹಾರಕ್ಕೆ ದಾಖಲೆ ಸಲ್ಲಿಸಿದ್ದಾರೆ. ಇದುವರೆಗೆ 640 ಬೆಳೆಗಾರರಿಗೆ 21.48 ಲಕ್ಷ ರೂ. ಪರಿಹಾರ ನೀಡಲಾಗಿದೆ. ತರಕಾರಿ ಬೆಳೆಯುವ 188 ಜನರ ಪೈಕಿ 41 ಮಂದಿಗೆ ಪರಿಹಾರ ನೀಡಲಾಗಿದ್ದು, ಇನ್ನುಳಿದವರಿಗೆ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ದ.ಕ. ಜಿಲ್ಲೆಯಲ್ಲಿ 111 ಮಂದಿ ಹೂ ಬೆಳೆಗಾರ ಫ‌ಲಾನುಭವಿಗಳಿದ್ದು 1,71,835 ರೂ. ಖಾತೆಗೆ ಜಮೆಯಾಗಿದೆ. 247 ಮಂದಿ ಹಣ್ಣು ಬೆಳೆಗಾರರ ಪೈಕಿ 13,53,965 ರೂ. ಅವರ ಖಾತೆಗೆ ಜಮಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಸಣ್ಣಮಟ್ಟದ ಬೆಳೆಗಾರರಿಗೆ ಸಮಸ್ಯೆ
ಹೂ, ತರಕಾರಿ, ಹಣ್ಣು ಬೆಳೆಯನ್ನು ಸಾವಿರಾರು ರೂ. ವ್ಯಯಿಸಿ ಬೆಳೆ ಯುವ ರೈತರು ಸರಕಾರದ ಸಣ್ಣ ಮೊತ್ತದ ಪರಿಹಾರ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ತರಕಾರಿ, ಹಣ್ಣು ಬೆಳೆಗಾರರಿಗೆ ಕನಿಷ್ಠ 2 ಸಾವಿರ ರೂ. ಪರಿಹಾರ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಹೂ ಬೆಳೆಗಾರರಿಗೆ ಈ ಸೌಲಭ್ಯ ಇಲ್ಲ. ಹೆಕ್ಟೇರ್‌ ಹೂವಿನ ಬೆಳೆಗೆ 25 ಸಾವಿರ ರೂ. ಪರಿಹಾರ ಯೋಜನೆಯನ್ನು ಸರಕಾರ ಘೋಷಿಸಿದೆ. ಆದರೆ ಮಲ್ಲಿಗೆ ಹೂ ಜಿಲ್ಲೆಯಲ್ಲಿ 5-10 ಸೆಂಟ್ಸ್‌ ಜಮೀನಿನಲ್ಲಿ ಬೆಳೆಯುವಂಥದ್ದು. ಒಬ್ಬ ಬೆಳೆಗಾರನಿಗೆ 300-500 ರೂ. ಪರಿಹಾರ ಸಿಗಬಹುದು. ಇಷ್ಟು ಸಣ್ಣ ಮೊತ್ತದ ಪರಿಹಾರ ಎಲ್ಲಿಗೂ ಸಾಕಾಗುವುದಿಲ್ಲ ಎಂಬುದು ರೈತರ ಅಳಲು.

ಹಂತಹಂತವಾಗಿ ವಿತರಣೆ
ಉಡುಪಿ ಜಿಲ್ಲೆಯಲ್ಲಿ ಪ್ಯಾಕೇಜ್‌ ಪರಿಹಾರವನ್ನು ಹಂತ ಹಂತವಾಗಿ ವಿತರಿಸಲಾಗುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ರೈತರಿಂದ ದಾಖಲಾತಿ ಸಲ್ಲಿಕೆಯಾಗದ ಕಾರಣ ವಿತರಿಸಲು ಸಾಧ್ಯವಾಗುತ್ತಿಲ್ಲ. ದ.ಕ.ಜಿಲ್ಲೆಯಲ್ಲಿ ಎಲ್ಲ ಹೂ ಬೆಳೆಗಾರರಿಗೆ ಪರಿಹಾರ ಪ್ಯಾಕೇಜ್‌ ಮಂಜೂರುಗೊಂಡಿದೆ. ಹಣ್ಣು ಬೆಳೆಗಾರರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
– ಭುವನೇಶ್ವರಿ, ಉಪ ನಿರ್ದೇಶಕಿ, ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲೆ
-ಎಚ್‌.ಆರ್‌. ನಾಯಕ್‌,ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ ದ.ಕ. ಜಿಲ್ಲೆ

Advertisement

ಅವಿಭಜಿತ ದ.ಕ. ಜಿಲ್ಲೆಯಲ್ಲಿ ನೋಂದಣಿ ಮಾಡಿಸಿಕೊಂಡಿರದ ರೈತರು ಅಗತ್ಯವಾಗಿ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಇದರಿಂದಾಗಿ ಸರಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇಲಾಖೆಯ ಅಧಿಕಾರಿಗಳು ಕೂಡ ಸೂಕ್ತ ರೀತಿಯಲ್ಲಿ ಸಮೀಕ್ಷೆ ನಡೆಸಿದರೆ ರೈತರಿಗೆ ಮತ್ತಷ್ಟು ಅನುಕೂಲವಾಗುತ್ತದೆ.
– ಬಂಟಕಲ್ಲು ರಾಮಕೃಷ್ಣ ಶರ್ಮ, ಕೃಷಿಕರು

ಪರಿಹಾರ ಮೊತ್ತಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ಆದರೆ ಪರಿಹಾರ ಇನ್ನೂ ಸಿಕ್ಕಿಲ್ಲ. ಕ್ರಾಪ್‌ ಸರ್ವೇಯಲ್ಲಿ ನೋಂದಣಿ ಮಾಡದ ಕಾರಣ ಸಿಕ್ಕಿಲ್ಲ ಎನ್ನುತ್ತಿದ್ದಾರೆ. ನೋಂದಣಿ ಮಾಡಿಸದೆ ಅರ್ಜಿ ಸಲ್ಲಿಸಿದ ಕೃಷಿಕರಿಗೂ ಪರಿಹಾರ ಸಿಕ್ಕಿದರೆ ಹಲವು ಕೃಷಿಕರಿಗೆ ಉಪಯೋಗವಾಗುತ್ತಿತ್ತು.
– ಲಕ್ಷ್ಮಣ ಮಟ್ಟು, ಮಟ್ಟುಗುಳ್ಳ ಬೆಳೆಗಾರರು

ಪುನೀತ್‌ ಸಾಲ್ಯಾನ್‌ ಸಸಿಹಿತ್ಲು

Advertisement

Udayavani is now on Telegram. Click here to join our channel and stay updated with the latest news.

Next