Advertisement

ನಾನೇ ಸೌದಿ ರಾಜಕುಮಾರ…30 ವರ್ಷಗಳ ಕಾಲ ಜನರನ್ನು ವಂಚಿಸಿದ್ದ ವ್ಯಕ್ತಿಗೆ 18 ವರ್ಷ ಜೈಲು!

10:20 AM Jun 02, 2019 | Nagendra Trasi |

ವಾಷಿಂಗ್ಟನ್:ಬರೋಬ್ಬರಿ 30 ವರ್ಷಗಳ ಕಾಲ ಸೌದಿ ಅರೇಬಿಯಾದ ರಾಜಕುಮಾರ ಎಂದೇ ಹೇಳಿಕೊಂಡು 8 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹಣವನ್ನು ವಂಚಿಸಿದ್ದ ನಕಲಿ ರಾಜ ಕೊನೆಗೂ ಸಿಕ್ಕಿಬಿದ್ದಿದ್ದು, ವಂಚನೆ ಆರೋಪದ ಮೇಲೆ 18 ವರ್ಷ ಜೈಲುಶಿಕ್ಷೆಗೆ ಒಳಗಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸೌದಿ ರಾಜಕುಮಾರ ಬಟ್ಟೆ ಧರಿಸುತ್ತಿದ್ದ, ಸೌದಿ ರಾಜಕುಮಾರ ಐಶಾರಾಮಿ ಬದುಕು, ಸುತ್ತ-ಮುತ್ತ ಅಂಗರಕ್ಷಕರು, ಸೌದಿ ರಾಜಮನೆತನಕ್ಕೆ ಸಂಬಂಧಪಟ್ಟ ಗುರುತುಪತ್ರ ಎಲ್ಲವನ್ನೂ ಹೊಂದಿದ್ದ. ಆದರೆ ಅವೆಲ್ಲವೂ ನಕಲಿಯಾಗಿತ್ತು.

ತಾನು ಸೌದಿ ಅರೇಬಿಯಾದ ಖಾಲಿದ್ ಬಿನ್ ಅಲ್ ಸೌದ್ ಎಂಬುದಾಗಿ ಹೇಳಿಕೊಂಡು ಮಿಯಾಮಿಯ ಫಿಶರ್ ಐಲ್ಯಾಂಡ್ ನಲ್ಲಿ ಐಶಾರಾಮಿಯಾಗಿ ವಾಸಿಸುತ್ತಿದ್ದ 48 ವರ್ಷದ ಆ್ಯಂಥೋನಿ ಗಿಗ್ನ್ಯಾಕ್! ನಕಲಿ ರಾಜತಾಂತ್ರಿಕ ಲೈಸೆನ್ಸ್ ನಂಬರ್ ಪ್ಲೇಟ್ ಹೊಂದಿರುವ ಫೆರಾರಿ ಕಾರಿನಲ್ಲಿ ಸುತ್ತಾಡುತ್ತಿದ್ದ. ಹೀಗೆ ಸೌದಿ ರಾಜ ಎಂದು ಬಿಂಬಿಸಿಕೊಂಡು ಹೂಡಿಕೆದಾರರನ್ನು, ಜನರನ್ನು ವಂಚಿಸುತ್ತಿದ್ದ!

ನಕಲಿ ಕಾಗದಪತ್ರಗಳ ಮೂಲಕ ಅಂಗರಕ್ಷಕರನ್ನು ಜೊತೆಗಿಟ್ಟುಕೊಂಡು ತಿರುಗಾಡುತ್ತಿದ್ದ ಈ ನಕಲಿ ಸೌದಿ ರಾಜಕುಮಾರ, ತನ್ನ ರಾಯಲ್ ಪ್ರೋಟೊಕಾಲ್ ಪ್ರಕಾರ ಆತಿಥ್ಯ ನೀಡಬೇಕೆಂದು ಬೇಡಿಕೆ ಇಡುತ್ತಿದ್ದ ಎಂದು ವರದಿ ವಿವರಿಸಿದೆ.

Advertisement

ಗಿಗ್ನ್ಯಾಕ್ ಮಾತಿಗೆ ಮರುಳಾಗಿ ದೊಡ್ಡ, ದೊಡ್ಡ ಕುಳಗಳು ಆತನ ಖಾತೆಗೆ ಹಣವನ್ನು ಡೆಪಾಸಿಟ್ ಮಾಡುತ್ತಿದ್ದರಂತೆ! ಆ ಹಣದಿಂದ ಈತ ಸೌದಿ ರಾಜಕುಮಾರನಂತೆಯೇ ಧಿರಿಸು ಹೊಲಿಸಿಕೊಂಡು, ಖಾಸಗಿ ಜೆಟ್ , ಐಶಾರಾಮಿ ಕಾರಿನಲ್ಲಿ ಸಂಚರಿಸುತ್ತಿದ್ದ!

ಕೊಲಂಬಿಯಾದಲ್ಲಿ ಜನಿಸಿದ್ದ ಗಿಗ್ನ್ಯಾಕ್ ನನ್ನು ಮಿಚಿಗನ್ ನ ಕುಟುಂಬವೊಂದು ದತ್ತು ತೆಗೆದುಕೊಂಡಿತ್ತು. 17-18 ವರ್ಷದವನಾಗಿದ್ದಾಗಲೇ ಹಲವಾರು ವಂಚನೆ ಪ್ರಕರಣಗಳಲ್ಲಿ ಗಿಗ್ನ್ಯಾಕ್ ಬಂಧನಕ್ಕೊಳಗಾಗಿದ್ದ.

ಸಿಕ್ಕಿಬಿದ್ದದ್ದು ಹೇಗೆ?

ರಿಯಲ್ ಎಸ್ಟೇಟ್ ನಲ್ಲಿ ಹಣ ಹೂಡುವುದಾಗಿ ಹೇಳಿಕೊಂಡು ಜನರಿಂದ ಹಣ ವಸೂಲಿ ಮಾಡಿದ್ದ ಗಿಗ್ನ್ಯಾಕ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಕೈಯಲ್ಲಿಯೇ ಸಿಕ್ಕಿಹಾಕಿಕೊಂಡಿದ್ದ. ಹೇಗೆ ಗೊತ್ತಾ..ಗಿಗ್ನ್ಯಾಕ್ ಐಶಾರಾಮಿ ಹೋಟೆಲ್ ನಲ್ಲಿ ಹಂದಿಯ ತೊಡೆ ಮಾಂಸ, ಹಂದಿ ಮಾಂಸದ ಚಿಲ್ಲಿ ತಿನ್ನುತ್ತಿದ್ದ. ಸೌದಿ ಪ್ರಿನ್ಸ್ ಇಸ್ಲಾಂ ಪ್ರಕಾರ ಹಂದಿ ಮಾಂಸ ಸೇವನೆ ನಿಷಿದ್ಧ! ಇದರಿಂದಾಗಿ ಈತನ ಬಗ್ಗೆ ಅನುಮಾನ ಶುರುವಾಗಿತ್ತು ಎಂದು ಮಿಯಾಮಿ ಹೆರಾಲ್ಡ್ ವರದಿ ಮಾಡಿದೆ.

ಅಂತೂ ನಕಲಿ ಸೌದಿ ರಾಜಕುಮಾರನ ಮುಖವಾಡ ಕಳಚಿ ಬೀಳುತ್ತಿದ್ದಂತೆಯೇ 2017ರ ನವೆಂಬರ್ 17ರಂದು 18 ಕೌಂಟ್ಸ್ ಆರೋಪದಡಿ ಆ್ಯಂಥೋನಿ ಗಿಗ್ನ್ಯಾಕ್ ನನ್ನು ಬಂಧಿಸಿದ್ದರು. ಈತನ ವಿರುದ್ಧ ವಿದ್ಯುನ್ಮಾನ ವಂಚನೆ ಮತ್ತು ನಕಲಿ ಗುರುತಿನ ಮೂಲಕ ವಂಚಿಸಿರುವುದು ಸೇರಿದಂತೆ ಹಲವಾರು ಆರೋಪಗಳನ್ನು ದಾಖಲಿಸಿದ್ದರು.

ಕಳೆದ ಮೂರು ದಶಕಗಳ ಕಾಲ ಆ್ಯಂಥೋನಿ ಗಿಗ್ನ್ಯಾಕ್ ತನ್ನನ್ನು ತಾನು ಸೌದಿ ರಾಜ ಎಂದು ಬಿಂಬಿಸಿಕೊಂಡು ಜಗತ್ತಿನಾದ್ಯಂತ ಹೂಡಿಕೆದಾರರಿಗೆ ಹಲವಾರು ವಿಧದಲ್ಲಿ ವಂಚಿಸಿರುವುದಾಗಿ ಅಮೆರಿಕಾದ ಅಟಾರ್ನಿ ಅರಿಯಾನಾ ಫಜಾರ್ಡೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next