ಕಾರ್ಕಳ: ಸಾಮಾಜಿಕ ಅರಣ್ಯ ಇಲಾಖಾ ವತಿಯಿಂದ ಮಳೆಗಾಲದಲ್ಲಿ ತಾಲೂಕಿನ ರೈತರಿಗೆ, ಸಂಘ ಸಂಸ್ಥೆಗಳಿಗೆ ವಿತರಿಸಲು ಹಾಗೂ ಇಲಾಖಾ ನೆಡುತೋಪುಗಳಿಗೆ ಗಿಡ ನೆಡುವ ಉದ್ದೇಶದಿಂದ ಮಾಳ ಸಸ್ಯಕ್ಷೇತ್ರದಲ್ಲಿ ಸಸಿಗಳನ್ನು ಬೆಳೆಸಲಾಗಿದೆ. ಸಾರ್ವಜನಿಕ ಸಸಿ ವಿತರಣೆ ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿ ನೀಡಲು ವಿವಿಧ ಬಗೆಯ ಸಸಿಗಳಾದ ಸಾಗುವಾನಿ, ಸೀತಾಫಲ, ಮಹಾಗನಿ, ನೆಲ್ಲಿ, ಹಲಸು, ಬೇಂಗ, ನುಗ್ಗೆ, ರಕ್ತಚಂದನ, ಗೇರು ಇತ್ಯಾದಿ ಸಸಿಗಳನ್ನು ಬೆಳೆಸಲಾಗಿದೆ.
ಗ್ರಾ.ಪಂ. ಗೆ 500 ಗಿಡ
ಸರಕಾರ ಈ ವರ್ಷವನ್ನು ಜಲವರ್ಷ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಪ್ರತೀ ಗ್ರಾಮ ಪಂಚಾಯತ್‌ಗಳಿಗೆ ವಿವಿಧ ಜಾತಿಯ 500 ಸಸಿಗಳನ್ನು ವಿತರಣೆ ಮಾಡಲಾಗುವುದು. ಗ್ರಾ.ಪಂ ಸಂಘ ಸಂಸ್ಥೆಗಳ ಮುಖಾಂತರ ಜಲವರ್ಷ, ಜಲಾಮೃತ ಇತ್ಯಾದಿ ಕಾರ್ಯಕ್ರಮಗಳಿಗೆ ಸಸಿಗಳನ್ನು ಲಭ್ಯತೆ ಅನುಗುಣವಾಗಿ ಪೂರೈಸಬೇಕೆಂದು ಸಾಮಾಜಿಕ ಅರಣ್ಯ ಇಲಾಖೆ ವಲಯಾರಣ್ಯಧಿ ಕಾರಿ ವಾರಿಜಾಕ್ಷಿ ತಿಳಿಸಿದರು.
ಕೇಂದ್ರ ಪುರಸ್ಕೃತ ಕೃಷಿ ಅರಣ್ಯ ಉಪ- ಅಭಿಯಾನ ಕಾರ್ಯಕ್ರಮದಲ್ಲಿ ರೈತರ ಜಮೀನುಗಳಲ್ಲಿ ಇಲಾಖಾ ನಿಯಮಾನುಸಾರ ಸಸಿಗಳನ್ನು ಬೆಳೆಸಿದಲ್ಲಿ ರೈತರಿಗೆ ಪ್ರೋತ್ಸಾಹಧನ ಪಾವತಿಸಲು ಅವಕಾಶವಿರುತ್ತದೆ. ಕಾರ್ಕಳ ತಾಲೂಕಿನ ಮಾಳ ಕೂಡಿಗೆ ನರ್ಸರಿಯಲ್ಲಿ ಸಸಿಗಳು ಲಭ್ಯವಿದ್ದು, ಗಿಡ ಪಡೆಯಲು ಇಚ್ಛಿಸುವವರು ಸಾಮಾಜಿಕ ಅರಣ್ಯದ ವಲಯ ಅರಣ್ಯಾ ಧಿಕಾರಿಯವರ ಕಚೇರಿಯನ್ನು (ದೂರವಾಣಿ ಸಂಖ್ಯೆ:08258-232965) ಸಂಪರ್ಕಿಸಬಹುದಾಗಿದೆ.
70,500 ಸಸಿ
ಪ್ರಸಕ್ತ ಸಾಲಿಗೆ ಸಾಮಾಜಿಕ ಅರಣ್ಯ ಇಲಾಖೆಯಿಂದ ಒಟ್ಟು 70, 500 ಸಸಿಗಳನ್ನು ಬೆಳೆಸಲಾಗಿದ್ದು, ಈ ಪೈಕಿ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು 25,500 ಸಸಿಗಳನ್ನು ಮತ್ತು ಹಸಿರು ಕರ್ನಾಟಕ ಯೋಜನೆಯಡಿ ಸಂಘ ಸಂಸ್ಥೆಗಳಿಗೆ ಗ್ರಾಮ ಪಂಚಾಯತ್‌ಗಳಿಗೆ ವಿತರಿಸಲು 24,500 ಸಸಿಗಳನ್ನು ಹಾಗೂ ಇಲಾಖಾ ನೆಡುತೋಪುಗಳಿಗೆ ಉಪಯೋಗಿಸಲು 20,500 ಸಸಿಗಳನ್ನು ಬೆಳೆಸಲಾಗಿದೆ.