ವರದಿ: ಕೇಶವ ಆದಿ
ಬೆಳಗಾವಿ: ಮೊದಲು ಭೀಕರ ಪ್ರವಾಹ, ಆನಂತರ ಸತತ ಎರಡು ವಷಗಳಿಂದ ಬಿಟ್ಟುಬಿಡದೆ ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದ ಕಂಗೆಟ್ಟು ಹೋಗಿರುವ ಗಡಿ ಜಿಲ್ಲೆ ಬೆಳಗಾವಿಯ ರೈತರು ಹಲವಾರು ಆತಂಕಗಳ ನಡುವೆಯೇ ಹೊಸ ಆಸೆ ಹಾಗೂ ನಿರೀಕ್ಷೆಗಳೊಂದಿಗೆ ಈ ವರ್ಷದ ಮುಂಗಾರು ಕೃಷಿ ಚಟುವಟಿಕೆಗೆ ಚಾಲನೆ ಕೊಟ್ಟಿದ್ದಾರೆ.
ಆಗಾಗ ಬಿದ್ದ ಮಳೆ ಮತ್ತು ಮೋಡ ಕವಿದ ವಾತಾವರಣ ಮುಂಗಾರಿನ ಬಿತ್ತನೆ ಕಾರ್ಯಕ್ಕೆ ಹೊಸ ಚೈತನ್ಯ ನೀಡಿದೆ. ಜಿಲ್ಲೆಯ ರೈತರಿಗೆ ಈ ಹಿಂದೆ ಭೀಕರ ಬರಗಾಲ ಹಾಗೂ ಪ್ರವಾಹ ಸಾಕಷ್ಟು ಕಾಡಿವೆ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಉಂಟಾದ ಪ್ರವಾಹದಿಂದ ಸಾಕಷ್ಟು ಹಾನಿ ಅನುಭವಿಸಿರುವ ರೈತರು ಸಮೃದ್ಧ ಬೆಳೆಯಿಂದ ಉತ್ತಮ ಲಾಭ ಮಾಡಿಕೊಳ್ಳಬಹುದು ಎಂಬ ಆಸೆಯನ್ನೇ ಬಿಟ್ಟಿದ್ದಾರೆ. ಈ ಚಿಂತೆಯ ಜೊತೆಗೆ ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾ ಮಹಾಮಾರಿ ರೈತರನ್ನು ಕೃಷಿ ಚಟುವಟಿಕೆಗಳಿಂದಲೇ ವಿಮುಖರಾಗುವಂತೆ ಮಾಡುತ್ತಿದೆ. ಹೀಗೆ ಹತ್ತಾರು ಚಿಂತೆಗಳ ನಡುವೆಯೇ ರೈತ ಸಮುದಾಯ ಮತ್ತೆ ಮುಂಗಾರು ಹಂಗಾಮಿಗೆ ಸಜ್ಜಾಗಬೇಕಿದೆ. ಎಲ್ಲ ನೋವುಗಳನ್ನು ಮರೆತು ಬಿತ್ತನೆಗೆ ಬೀಜ ಹಾಗೂ ಗೊಬ್ಬರ ಹೊಂದಿಸಿಕೊಳ್ಳುತ್ತಿದ್ದಾರೆ.
ಜಿಲ್ಲೆಯ ಬಹುತೇಕ ಕಡೆ ಬಿತ್ತನೆ ಕಾರ್ಯಕ್ಕೆ ಚಾಲನೆ ಸಹ ಸಿಕ್ಕಿದೆ. ಪ್ರವಾಹದ ಆತಂಕ: ಕೊರೊನಾದಿಂದ ಸಾಕಷ್ಟು ಹಾನಿ ಅನುಭವಿಸಿರುವ ಜಿಲ್ಲೆಯ ಜನತೆ ಮಹಾಮಾರಿಯ ಜೊತೆಗೆ ಈಗ ಪ್ರವಾಹದ ಆತಂಕವನ್ನೂ ಎದುರಿಸಬೇಕಿದೆ. ಅತೀ ಹೆಚ್ಚು ಮಳೆ ಹಾಗೂ ಜಲಾಶಗಳಿಂದ ಬರುವ ನೀರು ಜನರ ಮನಸ್ಸಿನಲ್ಲಿ ಹಿಂದಿನ ಕಹಿ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ. ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡಿದ್ದು ನದಿ ತೀರದ ಕೃಷ್ಣಾ, ದೂಧಗಂಗಾ, ಹಿರಣ್ಯಕೇಶಿ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ವ್ಯಾಪ್ತಿಯ 377 ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ಬರಬಹುದು ಎಂದು ಅಂದಾಜಿಸಲಾಗಿದೆ. ತುರ್ತು ಸಂದರ್ಭ ಬಂದರೆ ಈ ಗ್ರಾಮದ ಜನರ ರಕ್ಷಣೆ ಹಾಗೂ ಪುನರ್ವಸತಿಗೆ ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಹೆಚ್ಚಿನ ಕಾಳಜಿ ಕೇಂದ್ರ ಸ್ಥಾಪನೆ: ಜಿಲ್ಲೆಯಲ್ಲಿ ಈಗ ಕೋವಿಡ್ ಆತಂಕ ಸಹ ಹೆಚ್ಚಾಗಿರುವುದರಿಂದ ಕಳೆದ ಸಲಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಾಳಜಿ ಕೇಂದ್ರಗಳನ್ನು ಅಂದರೆ ಸುಮಾರು 500 ಕಾಳಜಿ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಈ ಕಾಳಜಿ ಕೇಂದ್ರಗಳ ನಿರ್ವಹಣೆಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಪರಿಹಾರ ಕೇಂದ್ರಗಳಲ್ಲಿ ಸೂಕ್ತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್, ಸ್ಯಾನಿಟೈಸರ್ ವಿತರಣೆಗೆ ಕ್ರಮ ವಹಿಸಬೇಕು. ಕೇಂದ್ರಕ್ಕೆ ಬರುವ ಸಂತ್ರಸ್ತರ ಆರೋಗ್ಯದ ಮೇಲೆ ನಿಗಾ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜಲಾಶಯಗಳ ಮೇಲೆ ನಿಗಾ: ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗಿ ಅಲ್ಲಿನ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದಾಗ ಸಹಜವಾಗಿಯೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ಅಥಣಿ ಮತ್ತು ರಾಯಬಾಗ ತಾಲೂಕುಗಳಲ್ಲಿ ಹೆಚ್ಚಿನ ಹಾನಿಯಾಗುತ್ತಲೇ ಇದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಹಾಗೂ ನೆರೆಯ ಮಹಾರಾಷ್ಟ್ರದ ಜಲಾಶಯಗಳ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು ಜಲಾಶಯ ಮಟ್ಟ ಹಾಗೂ ನೀರು ಬಿಡುಗಡೆ ಬಗ್ಗೆ ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಆಲ್ಲದೆ ಪ್ರವಾಹ ಹಾಗೂ ಅತಿವೃಷ್ಟಿಯಂತಹ ತುರ್ತು ಸಂದರ್ಭದಲ್ಲಿ ತಕ್ಷಣಕ್ಕೆ ಜನರ ರಕ್ಷಣೆ ಹಾಗೂ ತಾತ್ಕಾಲಿಕ ಪುನರ್ವಸತಿಗೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಎಂ.ಜಿ.ಹಿರೇಮಠ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.