Advertisement

ಪ್ರವಾಹ ಪ್ರದೇಶದ ಅಡಿಕೆ ತೋಟಗಳು ವಿನಾಶದತ್ತ

11:28 PM May 21, 2020 | Sriram |

ಮುಂಡಾಜೆ: ಕಳೆದ ಮಳೆಗಾಲದಲ್ಲಿ ಭೀಕರ ಪ್ರವಾಹದೊಂದಿಗೆ ಅಡಿಕೆ ತೋಟಗಳಿಗೆ ಬಂದು ಬಿದ್ದಿರುವ ಮರಳು ಅಡಿಕೆ ಮರಗಳ ವಿನಾಶಕ್ಕೆ ಕಾರಣವಾಗಿದೆ. ತೋಟವಿಡೀ ಮರಳುಮಯ ವಾಗಿರುವ ನಡುವೆ ಮೃತ್ಯುಂಜಯ ನದಿಯ ಪ್ರವಾಹ ಬೆಳ್ತಂಗಡಿ ತಾ| ನ ಕಲ್ಮಂಜ ಗ್ರಾಮದ ಕುಡೆಂಚಿ ಮತ್ತು ಮೂಲಾರಿನಲ್ಲಿ ಕೆಲವು ಮನೆಗಳು, ಪಂಪ್‌ಶೆಡ್‌ ಇತ್ಯಾದಿ ಕೂಡ ಪ್ರವಾಹದ ಹೊಡೆತಕ್ಕೆ ಸಿಲುಕಿದವು. ಈ ಪ್ರವಾಹದಲ್ಲಿ ಅಡಿಕೆ ತೋಟಗಳಿಗೆ ಸುಮಾರು 4ರಿಂದ 5 ಅಡಿ ಮರಳು ಎಕ್ರೆಗಟ್ಟಲೆ ಪ್ರದೇಶಕ್ಕೆ ಬಂದು ಬಿದ್ದಿತ್ತು.ಕೃಷಿಕರು ಲಕ್ಷಾಂತರ ರೂ. ಖರ್ಚು ಮಾಡಿ ತೋಟದ ಮರಳು ತೆಗೆದಿದ್ದರು. ಅದು ನೀರಿನ ಮೇಲೆ ಹೋಮ ಮಾಡಿದಂತಾಗಿದೆ.

Advertisement

ಅಡಿಕೆ ಮರಗಳಿಗೆ ವಿನಾಶ
ಮರಳಿನ ಪ್ರಕೋಪಕ್ಕೆ ಪ್ರದೇಶದ ಸುಮಾರು 1,650 ಮರ ಗಳು ತುತ್ತಾಗಿ ಒಣಗಿ ಸಾಯುತ್ತಿವೆ. ಇಲ್ಲಿನ ಜನರಿಗೆ ಮುಂದಿನ ದಿನಗಳ ಕುರಿತ ಯೋಚನೆ ಆರಂಭವಾಗಿದೆ. ಇನ್ನು ಕೆಲವರ ಅಡಿಕೆ ತೋಟಗಳಲ್ಲಿ ಬಿದ್ದಿದ್ದ ಮರಳನ್ನು ತೆಗೆಸಿ ದ್ದರೂ ಕೂಡ 2ರಿಂದ 5 ವರ್ಷದ ಅಡಿಕೆ ಸಸಿಗಳು ನಾಶವಾಗಿ ವೆ. ಸರಕಾರದಿಂದ ಶೇ. 5 ರಿಂದ 10ರಷ್ಟು ಮಾತ್ರ ಪ್ರವಾಹ ಪರಿಹಾರ ಬಂದಿದ್ದು ಈ ಮೊತ್ತ ಸಾಲುವುದಿಲ್ಲ. ಅಡಿಕೆ ಕೃಷಿಗೆ ಬ್ಯಾಂಕ್‌ಗಳಲ್ಲಿ ಸಾಲಗಳಿದ್ದು ಬಿದ್ದಿರುವ ಮರಳಿನಿಂದಾಗಿ ಅಡಿಕೆ ತೋಟಗಳು ನಾಶವಾಗುತ್ತಿರುವುದರಿಂದ ತೀವ್ರ ಸಂಕಷ್ಟ ಎದುರಾಗಿದೆ.

ವರದಿ ನೀಡಲಾಗುವುದು
ಅಡಿಕೆ ಮರಗಳು ಸಾಯು ತ್ತಿರುವ ಬಗ್ಗೆ ಗ್ರಾಮ ಲೆಕ್ಕಿಗರ ಗಮನಕ್ಕೆ ತಂದು, ಸ್ಥಳಗಳನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು.
 - ಸಫಾನಾ, ಪಿಡಿಒ, ಕಲ್ಮಂಜ ಗ್ರಾ.ಪಂ.

 

Advertisement

Udayavani is now on Telegram. Click here to join our channel and stay updated with the latest news.

Next