Advertisement

ಪ್ರವಾಹ ಸಂತ್ರಸ್ತರಿಗೆ ನರೇಗಾದಡಿ ಉದ್ಯೋಗ “ಖಾತರಿ’

10:56 PM Aug 31, 2019 | Team Udayavani |

ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೊಳಗಾದ ಗ್ರಾಮೀಣ ಭಾಗದ ಎರಡು ಲಕ್ಷ ಜನರಿಗೆ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲು ಸರ್ಕಾರ ಮುಂದಾಗಿದೆ. ಪ್ರವಾಹದಿಂದ ಮೂಲಸೌಕರ್ಯ ಸಾಕಷ್ಟು ಹಾನಿ ಗೊಂಡಿದ್ದು ಅದರ ಪುನಶ್ಚೇತನಕ್ಕೆ ಗ್ರಾಮೀಣ ಭಾಗದ ಜನರನ್ನೇ ಬಳಕೆ ಮಾಡಿಕೊಳ್ಳುವುದು. ಆ ಮೂಲಕ ಅವರಿಗೆ ನರೇಗಾ ಯೋಜನೆಯಡಿ ಉದ್ಯೋಗ ಕೊಟ್ಟು ಆರ್ಥಿಕವಾಗಿ ನೆರವಾಗಲು ಉದ್ದೇಶಿಸಲಾಗಿದೆ.

Advertisement

ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳ ಮಾಹಿತಿಯನ್ನು ಕಂದಾಯ ಇಲಾಖೆಯಿಂದ ಪಡೆ ಯಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾ ಯತ್‌ ರಾಜ್‌ ಇಲಾಖೆ ನಿರ್ಧರಿಸಿದೆ. ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ 103 ತಾಲೂಕುಗಳಲ್ಲಿ 7 ಲಕ್ಷ ಜನರನ್ನು ಸ್ಥಳಾಂತರಗೊಳಿಸಿದ್ದು, 1,465 ಪರಿಹಾರ ಕೇಂದ್ರಗಳಲ್ಲಿ 4.6 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. 7.82 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಾಶ ಉಂಟಾಗಿದ್ದರೆ ಭೂ ಕುಸಿತದಿಂದ, ಮಣ್ಣಿನ ಕುಸಿತದಿಂದ 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮತ್ತೆ ಬೆಳೆ ಹಾಕಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ.

ಹೀಗಾಗಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟ ಕ್ಕೊಳ ಗಾಗಿರುವ ಜನರಿಗೆ ಉದ್ಯೋಗ ನೀಡಿದರೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂಬ ಕಾರಣಕ್ಕೆ ಕೆಲಸ ಮಾಡಲು ಇಚ್ಛಿಸುವವರಿಗೆ ನರೇಗಾ ಯೋಜನೆಯಡಿ ಕೆಲಸ ಕೊಡಲು ಯೋಜನೆ ರೂಪಿಸಲಾಗಿದೆ. ಪ್ರವಾಹ ಹಿನ್ನೆಲೆಯಲ್ಲಿ ಹೆಚ್ಚಿನ ಮಾನವ ದಿನ ಸೃಷ್ಟಿಗೆ ಅವಕಾಶ ಕೋರಿ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ನರೇಗಾ ಯೋಜನೆಯಡಿ ಕಳೆದ ಡಿಸೆಂಬರ್‌ ತಿಂಗಳಲ್ಲಿ 1.46 ಕೋಟಿ ಮಾನವ ದಿನ ಸೃಷ್ಟಿ ಮಾಡಲಾಗಿತ್ತು. ಜನವರಿ ತಿಂಗಳಲ್ಲಿ ಕಡಿಮೆ ಯಾಗಿತ್ತಾದರೂ ನಂತರ ಬರ ಹಿನ್ನೆಲೆಯಲ್ಲಿ ಮತ್ತೆ ಹೆಚ್ಚಾಗಿತ್ತು. ಇದೀಗ ಪ್ರವಾಹದಿಂದ ಬೆಳೆ ನಷ್ಟವಾಗಿ ತೊಂದರೆಗೊಳಗಾಗಿರುವವರು, ಕೂಲಿ ಸಿಗದೆ ಸಮ  ಸ್ಯೆಗೆ ಸಿಲುಕಿರುವ ಕೂಲಿ ಕಾರ್ಮಿಕರು ಸೇರಿ ಎರಡು ಲಕ್ಷ ಜನರಿಗೆ ನರೇಗಾ ಯೋಜನೆಯಡಿ ಕೆಲಸ ಕೊಡಲು ತೀರ್ಮಾನಿಸಲಾಗಿದೆ.

ನಿರಾಶ್ರಿತರಲ್ಲಿ ಈಗಾಗಲೇ ನರೇಗಾ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡವರಿದ್ದಾರೆ. ಜತೆಗೆ ಹೊಸ ದಾಗಿ ಎರಡು ಲಕ್ಷ ಜನರಿಗೆ ಉದ್ಯೋಗ ಕೊಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಪ್ರವಾಹದಿಂದ ಕೆಲವರು ಜಾಬ್‌ ಕಾರ್ಡ್‌ ಸೇರಿ ಇತರ ದಾಖಲೆ ಕಳೆದುಕೊಂಡಿದ್ದು ಅವರಿಗೆ ಅಗತ್ಯ ಇರುವ ದಾಖಲೆ ಒದಗಿಸಲು ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

Advertisement

ಕೇಂದ್ರ ಸರ್ಕಾರ ನರೇಗಾ ಯೋಜನೆಯ ಕೂಲಿ ಹಾಗೂ ಉಪಕರಣಗಳ ಬಾಬಿ¤ನ ಹಣವಾಗಿ ಸುಮಾರು 2,500 ಕೋಟಿ ರೂ.ವರೆಗೂ ಉಳಿಸಿಕೊಂಡಿತ್ತು. ರಾಜ್ಯ ಸರ್ಕಾ ರವೇ ಆ ಹಣ ಭರಿಸಿತ್ತು. ಹಿಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದ ಕೃಷ್ಣ ಬೈರೇಗೌಡ, ನಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿ ಬಾಕಿ ಹಣ ಪಾವತಿಗೆ ಮನವಿ ಮಾಡಿದ್ದರು.

ಹೀಗಾಗಿ, ಸುಮಾರು 1,500 ಕೋಟಿ ರೂ.ವರೆಗೆ ಬಂದಿದೆ. ಉಳಿದ 1,000 ಕೋಟಿ ರೂ. ಸಹ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ. ಸದ್ಯದಲ್ಲೇ ಮತ್ತೂಂದು ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಮಾನವ ದಿನ ಸೃಷ್ಟಿಸಿ ಎರಡು ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಸಂಬಂಧ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.

ಉದ್ಯೋಗ ಕಲ್ಪಿಸುತ್ತೇವೆ: ಈ ಕುರಿತು ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೊಳಗಾಗಿ ರುವ ಜನರಿಗೆ ನಾವು ಎಲ್ಲ ರೀತಿಯ ನೆರವು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಲಿದ್ದೇವೆ. ಇದರಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಕಲ್ಪಿಸುವುದು ಮುಖ್ಯವಾಗಿ ಸೇರಿದೆ. ಇದಕ್ಕಾಗಿ ಕೇಂದ್ರದಿಂದ ಹೆಚ್ಚುವರಿಯಾಗಿ ಮಾನವ ದಿನ ಸೃಷ್ಟಿಗೆ ಅನುಮತಿ ಪಡೆಯಲಾಗುವುದು ಎಂದು ಹೇಳುತ್ತಾರೆ.

* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next