Advertisement

ಪರಿಹಾರ ಧನಕ್ಕೆ ನೆರೆ ಸಂತ್ರಸ್ತರ ಆಗ್ರಹ

11:53 AM Dec 30, 2019 | Suhan S |

ಗೋಕಾಕ: ನೆರೆ ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಪರಿಹಾರಧನ ಕೊಡಿಸುವಂತೆ ಆಗ್ರಹಿಸಿ ನೆರೆ ಸಂತ್ರಸ್ತರು ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.

Advertisement

ನಗರದ ಶಾಸಕರ ಕಾರ್ಯಾಲಯದ ಎದುರು ರವಿವಾರ ಸೇರಿದ ನಗರದ ನೂರಾರು ನೆರೆ ಸಂತ್ರಸ್ತರು ಬದುಕನ್ನು ಕಟ್ಟಿಕೊಳ್ಳಲು ಶೀಘ್ರದಲ್ಲಿ ಸರ್ಕಾರದಿಂದ ಪರಿಹಾರಧನವನ್ನು ಮಂಜೂರು ಮಾಡಿಸುವಂತೆ ಶಾಸಕರ ಮೂಲಕ ಮನವಿ ಒತ್ತಾಯಿಸಿದರು.

ಕಳೆದ ಆಗಸ್ಟ್‌ ತಿಂಗಳಿನಲ್ಲಿ ಭೀಕರ ಜಲಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರು, ಬದುಕು ಕಟ್ಟಿಕೊಳ್ಳಲು 4 ತಿಂಗಳಿನಿಂದ ಹೆಣಗಾಡುತ್ತಿದ್ದಾರೆ. ಭಾರೀ ಮಳೆ ಹಾಗೂ ಪ್ರವಾಹದಿಂದ ಗೋಕಾಕ ನಗರದಲ್ಲಿ ಸಾವಿರಾರು ಮನೆ ನೀರು ಪಾಲಾಗಿ ತೀವ್ರ ಸಂಕಟದಲ್ಲಿ ಇರುವವರಿಗೆ ಮಾನವೀಯತೆ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕಾದ ಅಧಿಕಾರಿಗಳು ನೆರೆ ಸಂತ್ರಸ್ತರ ನೆರೆವಿಗೆ ಧಾವಿಸುತ್ತಿಲ್ಲ.

ಸಂತ್ರಸ್ತರ ಬದುಕಿನ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಪರಿಹಾರ ಧನಕ್ಕಾಗಿ ದಿನನಿತ್ಯ ಅಧಿಕಾರಿಗಳ ಕಡೆಗೆ ಅಲೆಯುವುದೇ ನೆರೆ ಸಂತ್ರಸ್ತರ ನಿತ್ಯದ ಕಾಯಕವಾಗಿದೆ ಎಂದು ದೂರಿದರು. ಒಟ್ಟು 1538 ಮನೆಗಳು (ಅಧಿಕೃತ) ಬಿದ್ದ ಮನೆಗಳಾಗಿವೆ. ಇದರಲ್ಲಿ (ಅನಧಿಕೃತ) ಅಂದರೆ ಕೆಲ ದಾಖಲೆಗಳು ಇಲ್ಲದೇ ಬಿದ್ದ ಮನೆಗಳ ಸಂಖ್ಯೆ 143 ಇವೆ. ಎ ಕೆಟಗೇರಿ ಫಲಾನುಭವಿಗಳ ಸಂಖ್ಯೆ 841 ಇರುತ್ತದೆ. ಅವರಿಗೆ 1 ಲಕ್ಷ ರೂ. ಹಾಗೂ ಬಾಡಿಗೆ ಹಣ 25 ಸಾವಿರ ಮತ್ತು ಬಿ ಕೆಟಗೇರಿ ಫಲಾನುಭವಿಗಳ ಸಂಖ್ಯೆ 79 ಇದ್ದು, ಅವರಿಗೆ 1 ಲಕ್ಷ ರೂ.ಗಳು ನೆರವು ಫಲಾನುಭವಿಗಳ ಖಾತೆಗೆ ಜಮೆಯಾಗಿವೆ. ಸಿ ಕೆಟಗೇರಿ ಜನರಿಗೆ 50 ಸಾವಿರ ರೂ. ಇನ್ನೂ ಜಮಾ ಆಗಿಲ್ಲ. ಅದರಲ್ಲಿ 25 ಸಾವಿರ ರೂ. ಮಾತ್ರ ಸಂತಸ್ತರ ಖಾತೆಗಳಿಗೆ ಜಮೆ ಮಾಡಲಾಗಿದೆ.

ಒಟ್ಟು ಫಲಾನುಭವಿಗಳಲ್ಲಿ 287 ಜನರ ಹೆಸರು ವಿವಿಧ ಕಾರಣಾಂತರಗಳಿಂದ ಡಿಲೀಟ್‌ ಆಗಿವೆ. ಅಲ್ಲದೇ 53 ನಾಟ್‌ ಓಕೆ  ಮಾಡಲಾಗಿದೆ. ಇದಕ್ಕೆ ಕಾರಣ ಗೊತ್ತಿಲ್ಲ ಎಂದು ಅಧಿಕಾರಿಗಳ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ನಗರಸಭೆ ಮತ್ತು ತಹಶೀಲ್ದಾರ್‌ ಕಾರ್ಯಾಲಯದ ಅಧಿಕಾರಿಗಳು ನೆರೆ ಸಂತ್ರಸ್ತರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಈಗಾಗಲೇ ಶೇ.50ರಷ್ಟು ಜನ ಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನುಳಿದ ಜನರು ಮನೆ ನಿರ್ಮಾಣ ಕಾರ್ಯದಿಂದ ತಟಸ್ಥರಾಗಿದ್ದಾರೆ. ಕಾರಣ ಈಗಾಗಲೇ ಕಟ್ಟಡಗಳನ್ನು ಕಟ್ಟುತ್ತಿರುವ ಮನೆಗಳ ಜಿಪಿಎಸ್‌ ಮಾಡದ ಅಧಿಕಾರಿಗಳು ಇನ್ನುಳಿದ ಅನುದಾನ ಬಿಡುಗಡೆಯಾಗುತ್ತದೆಯೋ ಅಥವಾ ಇಲ್ಲ ಎಂಬ ಸಂಶಯವಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ನೆರೆಸಂತ್ರಸ್ತರ ಮನೆಗಳ ಎರಡನೇ ಕಂತಿನ ಹಣವನ್ನು ಇನ್ನೂ ಜಮೆ ಮಾಡುತ್ತಿಲ್ಲ. ಕೂಡಲೇ ಸಂತ್ರಸ್ತರಿಗೆ ನೂತನ ಬದುಕನ್ನು ಕಟ್ಟಿಕೊಳ್ಳಲು ಸಹಾಯಹಸ್ತ ಚಾಚಬೇಕೆಂದು ಮನವಿಯಲ್ಲಿ ಕೋರಿದರು.

ಮನವಿಗೆ ಸ್ಪಂದಿಸಿದ ಶಾಸಕ ರಮೇಶ ಜಾರಕಿಹೊಳಿ ಅವರು, ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಪಕ್ಷಾತೀತವಾಗಿ ಕೆಲಸ ಮಾಡಲಾಗುತ್ತಿದೆ. ನೆರೆ ಸಂತ್ರಸ್ತರು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಗೆ ಆದಷ್ಟು ಬೇಗ ಬಾಕಿ ಉಳಿದಿರುವ ಪರಿಹಾರ ಮೊತ್ತವನ್ನು ಖಾತೆಗೆ ಜಮೆ ಮಾಡುವಂತೆ ಸೂಚಿಸಲಾಗಿದೆ. ಸಂತ್ರಸ್ತರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಧೈರ್ಯವಾಗಿರಬೇಕು ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ನಗರಸಭೆ ಸದಸ್ಯ ಯುಸೂಫ್‌ ಅಂಕಲಗಿ, ಶಂಕರ ಧರೆನ್ನವರ, ನಿಂಗಪ್ಪ ಗೋಸಬಾಳ, ಕಲ್ಲೋಳೆಪ್ಪ ಮದಿಹಳ್ಳಿ, ಅರ್ಜುನ ಪವಾರ, ಮಾರುತಿ ಜಡೆನ್ನವರ, ಮಾಯಪ್ಪ ತುಳಜನ್ನವರ, ಸಾಯಿನಾಥ ಶಿಂಗಳಾಪುರ, ಲಕ್ಷ್ಮಣ ಮಲ್ಲಾಪುರೆ, ಲಕ್ಷ್ಮಣ  ತಳ್ಳಿ, ರಾಮಸಿದ್ದ ಬಡೆಪ್ಪಗೋಳ, ಶ್ರೀಶೈಲ ಬಬಲಿ, ಯಲ್ಲಪ್ಪ ಗೋಸಬಾಳ, ಹಣಮಂತ ತಹಶೀಲ್ದಾರ್‌, ಗೋಪಾಲ ಗುಮತಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next