Advertisement

ವೀಕ್ಷಣೆಗಷ್ಟೇ ಸೀಮಿತ ನೆರೆ ಅಧ್ಯಯನ

10:46 AM Aug 26, 2019 | Team Udayavani |

ಬೆಳಗಾವಿ: ದೂರದಿಂದ ಬಂದಿದ್ದ ಅಧಿಕಾರಿಗಳಿಂದ ನಮಗೊಂದಿಷ್ಟು ಪರಿಹಾರದ ಘೋಷಣೆಯಾದೀತು. ನಮ್ಮ ಬಳಿ ಬಂದು ಎಲ್ಲ ಕಷ್ಟ ಕೇಳುತ್ತಾರೆ ಎಂದು ಕಾದು ಕುಳಿತಿದ್ದ ಪ್ರವಾಹ ಸಂತ್ರಸ್ತರಿಗೆ ಈ ಬಾರಿಯೂ ಮತ್ತದೇ ನಿರಾಸೆ ಕಾದಿತ್ತು. ಅಧಿಕಾರಿಗಳು ಬಂದರು. ಹೋದರು. ಅದು ಸಹ ಕೆಲ ನಿಮಿಷಗಳ ಕಾಲ ಮಾತ್ರ.

Advertisement

ಇದು ರವಿವಾರ ನೆರೆ ಹಾವಳಿಯಿಂದ ತತ್ತರಿಸಿರುವ ಚಿಕ್ಕೋಡಿ ಹಾಗೂ ಕಾಗವಾಡ ತಾಲೂಕಿನ ಮಾಂಜರಿ, ಜುಗೂಳ ಗ್ರಾಮದ ಸಂತ್ರಸ್ತರ ಗೋಳು. ಭೇಟ್ಟಿ ನೀಡಿದ್ದು ಸಾಕು. ಪರಿಹಾರ ಕೊಡಿ ಎಂಬ ಸಂತ್ರಸ್ತರ ಕೂಗು ಅಧಿಕಾರಿಗಳ ಕಿವಿಗೆ ಕೇಳಲೇ ಇಲ್ಲ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರ ಸೂಚನೆ ಮೇರೆಗೆ ರಾಜ್ಯಕ್ಕೆ ಬಂದಿರುವ ಕೇಂದ್ರ ಪ್ರವಾಹ ಅಧ್ಯಯನ ಅಧಿಕಾರಿಗಳ ತಂಡದಿಂದ ಸಂತ್ರಸ್ತರಿಗೆ ಅವರ ವೀಕ್ಷಣೆ ಬಿಟ್ಟರೆ ಬೇರೆ ಏನೂ ಸಿಗಲೇ ಇಲ್ಲ. ಏಳು ಜನ ಅಧಿಕಾರಿಗಳ ತಂಡದ ಭೇಟಿ ಕೇವಲ ಪರಿಶೀಲನೆಗೆ ಮಾತ್ರ ಸೀಮಿತವಾಯಿತು.

ಮಧ್ಯಾಹ್ನ ನಿಗದಿಯಂತೆ 12 ಗಂಟೆಗೆ ಚಿಕ್ಕೋಡಿ ತಾಲೂಕಿಗೆ ಬಂದ ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕ ಪ್ರಕಾಶ್‌ ನೇತೃತ್ವದ ಏಳು ಜನ ಅಧಿಕಾರಿಗಳ ತಂಡ ಮೊದಲು ಮಾಂಜರಿ ಸೇತುವೆ ಮೇಲೆ ಬಂದು ಕೃಷ್ಣಾ ನದಿಯ ಪ್ರವಾಹದಿಂದ ಸಂಪೂರ್ಣ ನೆಲಕಚ್ಚಿರುವ ಕಬ್ಬಿನ ಬೆಳೆ ವೀಕ್ಷಣೆ ನಡೆಸಿತು. ಈ ಸಂದರ್ಭದಲ್ಲಿ ತಮ್ಮ ಬೆಳೆ ಕಳೆದುಕೊಂಡಿದ್ದ ರೈತರು ಅಲ್ಲಿಗೆ ಬಂದಿದ್ದರಾದರೂ ಅವರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳುವ ಅವಕಾಶ ಸಿಗಲೇ ಇಲ್ಲ.

ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿದ್ದೇವೆ. ನೆರೆ ಹಾವಳಿ ಬಂದಾಗಿನಿಂದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ತಂಡವೇ ಬಂದು ಹೋಗಿದೆ. ನಾವೂ ಸಹ ಬಂದವರಿಗೆಲ್ಲ ಮನೆ ಹಾಗೂ ಬೆಳೆಹಾನಿಯಾಗಿರುವದನ್ನು ತೋರಿಸಿದ್ದೇವೆ. ನಾವು ಬೀದಿಗೆ ಬಂದಿರುವದನ್ನು ಅವರೂ ಸಹ ನೋಡಿದ್ದಾರೆ. ಆದರೆ ಯಾರಿಂದಲೂ ಇದುವರೆಗೆ ಪರಿಹಾರ ಬಂದಿಲ್ಲ. ಭೆಟ್ಟಿಯ ಬದಲು ಪರಿಹಾರ ಕೊಟ್ಟರೆ ಎಷ್ಟೋ ಉತ್ತಮ. ನಾವು ಉಸಿರಾಡುತ್ತೇವೆ ಎಂದು ಮಾಂಜರಿಯ ಪಿ.ಎಂ ಹರಿಜನ ಹಾಗೂ ರೈತ ಮಲ್ಲಿಕಾರ್ಜುನ ಪೂಜಾರಿ ನೋವಿನಿಂದ ಹೇಳಿದರು.

Advertisement

ಹಳ್ಳಿಯ ಪ್ರದಕ್ಷಿಣೆ: ನಂತರ ಅತ್ಯಂತ ಹಾನಿಗೊಳಗಾದ ಪ್ರದೇಶ ಜುಗೂಳ ಗ್ರಾಮಕ್ಕೆ ಬಂದ ಅಧಿಕಾರಿಗಳು ಕಾರಿನಿಂದ ಕೆಳಗಿಳಿಯಲೇ ಇಲ್ಲ. ಹತ್ತಾರು ವಾಹನಗಳು ಗ್ರಾಮದ ಪ್ರದಕ್ಷಿಣಿ ಹಾಕಿದರೆ ಅದರಲ್ಲಿ ಕುಳಿತಿದ್ದ ಅಧಿಕಾರಿಗಳು ವಾಹನದಿಂದ ಕೆಳಗಿಳಿಯಲೇ ಇಲ್ಲ. ವಾಹನಗಳ ಮೆರವಣಿಗೆಯನ್ನು ಅಚ್ಚರಿಯಿಂದ ನೋಡುತ್ತಲೇ ಇದ್ದ ಗ್ರಾಮಸ್ಥರು, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದ್ದು ಬಿಟ್ಟರೆ ಬೇರೇ ಏನೂ ಮಾಡಲಾಗಲಿಲ್ಲ.

ನಂತರ ಮಾಂಜರಿ ಗ್ರಾಮದ ಹರಿಜನ ಕೇರಿಗೆ ಭೇಟಿ ನೀಡಿದ ಅಧಿಕಾರಿಗಳು ಪ್ರವಾಹದಿಂದ ಕುಸಿದು ಬಿದ್ದಿರುವ ಮನೆಗಳ ವೀಕ್ಷಣೆ ಮಾಡಿದರು. ಆದರೆ ಅಲ್ಲಿಯೇ ನಿಂತಿದ್ದ ಮನೆಗಳ ಮಾಲೀಕರ ಸಂಕಷ್ಟ ಕೇಳಲಿಲ್ಲ. ಐದು ನಿಮಿಷಗಳಲ್ಲಿ ಈ ವೀಕ್ಷಣೆಯೂ ಮುಗಿಯಿತು.

ಗೋಕಾಕ ಹಾಗೂ ರಾಮದುರ್ಗದಲ್ಲೂ ಇದೇ ಕಥೆ ಮುಂದುವರಿಯಿತು. ಲೊಳಸೂರ ಸೇತುವೆ ವೀಕ್ಷಣೆ ಮೂಲಕ ಗೋಕಾಕ ನಗರಕ್ಕೆ ಬಂದ ಅಧಿಕಾರಿಗಳು 15 ನಿಮಿಷಗಳಲ್ಲಿ ಕುಂಬಾರ ನಾಕಾದಲ್ಲಿ ಬಿದ್ದಿರುವ ಮನೆಗಳ ವೀಕ್ಷಣೆ, ಎಪಿಎಂಸಿ ಯಲ್ಲಿನ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರ ಭೇಟಿ ಹಾಗೂ ಗೋಶಾಲೆಯ ವೀಕ್ಷಣೆ ಕಾರ್ಯ ಮುಗಿಸಿದರು. ಇಲ್ಲಿಯೂ ಸಹ ಸಂತ್ರಸ್ತರಿಗೆ ತಮ್ಮ ಗೋಳು ಹೇಳಿಕೊಳ್ಳಲು ಅವಕಾಶ ಸಿಗಲೇ ಇಲ್ಲ.

ರಾಮದುರ್ಗ ತಾಲೂಕು ನೆರೆ ಹಾವಳಿ ಪೀಡಿತ ಪ್ರದೇಶಗಳ ಭೇಟಿ ಸಹ 15 ರಿಂದ 20 ನಿಮಿಷಗಳಲ್ಲಿ ಪೂರ್ಣಗೊಂಡಿತು. ತೋರಗಲ್ ಬಳಿ ಮಲಪ್ರಭಾ ನದಿಗೆ ನಿರ್ಮಿಸಲಾಗಿದ್ದ ತೂಗುಸೇತುವೆ ಮುರಿದು ಬಿದ್ದಿರುವದನ್ನು ಪರಿಶೀಲಿಸಿದ ಅಧಿಕಾರಿಗಳು, ಪ್ರವಾಹದ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಿದ ಸುನ್ನಾಳ ಗ್ರಾಮಕ್ಕೆ ಬಂದಾಗ ಜನರ ದಂಡೇ ನೆರದಿತ್ತು. ಅನೇಕ ಜನರು ತಮ್ಮ ಕಷ್ಟ-ಸುಖ ಹೇಳಿಕೊಂಡು ಪರಿಹಾರದ ಮನವಿ ಸಲ್ಲಿಸಿದರು. ಆದರೆ ಯಾರಿಗೂ ಈ ಅವಕಾಶ ಸಿಗದೆ ನಿರಾಸೆ ಹೊಂದಿದರು.

 

•ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next