ರಾಮನಗರ: ನೆರೆ ಮತ್ತು ಬರಗಾಲದಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಒದಗಿಸುವಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ವಿಫಲವಾಗಿದೆ. ಇದೇ ನ.7ರಂದು ರೈತರು ವಿಧಾನಸೌಧ ಮತ್ತು ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮಸ್ವಾಮಿ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿಗಳು ಎಲ್ಲಾ ಸಮಸ್ಯೆ ಸರಿಪಡಿಸುವುದಾಗಿ 15 ದಿನಗಳ ಕಾಲಾವಕಾಶ ಪಡೆದಿದ್ದರು. ಆದರೆ ವರು ತಮ್ಮ ಮಾತಿನಂತೆ ನಡೆದುಕೊಂಡಿಲ್ಲ. ಹೀಗಾಗಿ ಇದೇ 7ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು. ಅಂದು ಬೆಳಗ್ಗೆ 11 ಗಂಟೆಗೆ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿಯಿಂದ ಮುಖ್ಯಮಂತ್ರಿಗಳ ಮನೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
ಕೇಂದ್ರದಿಂದ ಹಣ ಬಂದಿದೆ ಎಂದು ಹೇಳಿ ರೈತರನ್ನು ಮರೆತ್ತಿದ್ದಾರೆ. ರಾಜ್ಯದಲ್ಲಿ ನೆರೆ ಪ್ರವಾಹದಿಂದ 4,394 ಗ್ರಾಮಗಳು ಮುಳುಗಡೆಯಾಗಿ 2.5 ಲಕ್ಷಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಪ್ರವಾಹದಿಂದ 15 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನಷ್ಟವಾಗಿದೆ. ಭೂ ಕುಸಿತದಿಂದ ರೈತರ ಭೂಮಿಯೇ ಇಲ್ಲವಾಗಿದೆ. ಲಕ್ಷಾಂತರ ಎಕರೆ ಕೃಷಿ ಭೂಮಿಯ ಮೇಲ್ಪದರವು ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದರು.
ಖಾಸಗಿ ಫೈನಾನ್ಸ್ ಗಳ ದರ್ಪ : ಭೂಮಿ ಹದಮಾಡಲು ಸುಮಾರು ವರ್ಷಗಳು ಬೇಕು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ, ಇನ್ನೊಂದೆಡೆ ಗಂಜಿ ಕೇಂದ್ರಗಳನ್ನು ಮುಚ್ಚಲಾಗಿದೆ. ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಂದಿರುವ ಸಂತ್ರಸ್ತರಿಂದ ಸಾಲ ವಸೂಲಿಗೆ ಕೆಲವು ಖಾಸಗಿ ಬ್ಯಾಂಕುಗಳು ಮತ್ತು ಮಿನಿ ಫೈನಾನ್ಸ್ ಕಂಪನಿಗಳು ಸಿವಿಲ… ಮತ್ತು ಕ್ರಿಮಿನಲ… ಕೇಸುಗಳನ್ನು ಹಾಕಿ ನೋಟಿಸು ಜಾರಿ ಮಾಡುತ್ತಿವೆ. ಪ್ರವಾಹ ಹಾಗೂ ಬರಗಾಲದಿಂದ ತತ್ತರಿಸಿದ ರೈತರ ಸಾಲ ಮುಕ್ತ ಎಂದು ಹೇಳದೆ ಇರುವುದು ಒಂದು ವಿಪರ್ಯಾಸವಾಗಿದೆ ಎಂದರು.
ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಗುಣಮಟ್ಟದ ಮನೆ ನಿರ್ಮಾಣ, ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ, ನಷ್ಟವಾದ ಬೆಳೆಗಳಿಗೆ ಅನುಗುಣವಾಗಿ ಡಾ. ಸ್ವಾಮಿನಾಥನ್ ವರದಿಯಂತೆ ನಷ್ಟ ಪರಿಹಾರ ತುಂಬಿಕೊಂಡಬೇಕು. ಮುಳುಗಡೆಯಾಗುವ ಹಳ್ಳಿಗಳ ಸ್ಥಳಾಂತರ ಮಾಡಿ ಹೊಸದಾಗಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಹಾಳಾಗಿರುವ ಭೂಮಿಗೆ ಪರ್ಯಾಯ ಭೂಮಿ ನೀಡಬೇಕು. ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು. ರಾಜ್ಯ ಬರಗಾಲಕ್ಕೆ ನಿರಂತರವಾಗಿ ಗುರಿಯಾಗುತ್ತಿದ್ದು, ಬರಗಾಲ ಪರಿಹಾರವಾಗಿ ಒಂದು ಎಕರೆಗೆ 25 ಸಾವಿರ ರೂ ನೀಡಬೇಕು ಎಂದರು. ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎ.ಎಲ್. ಬೈರೇಗೌಡ, ಪದಾಧಿಕಾರಿಗಳಾದ ಕೃಷ್ಣಸ್ವಾಮಿ, ನಾಗಮ್ಮ, ಸೀಬೆಕಟ್ಟೆ ಕೃಷ್ಣಪ್ಪ, ಅನಂತರಾಮ… ಪ್ರಸಾದ್, ರಮೇಶ್, ಗಂಗಾಧರಯ್ಯ, ರಾಜುಗೌಡ ಇದ್ದರು