Advertisement

ಉತ್ತರದಲ್ಲಿ ಪ್ರವಾಹ ಭೀತಿ: ಬೆಳಗಾವಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ

02:59 AM Aug 17, 2020 | Hari Prasad |

ಬೆಳಗಾವಿ/ಬಾಗಲಕೋಟೆ/ಚಿಕ್ಕಮಗಳೂರು: ಮತ್ತೊಂದು ಮಹಾ ಮಳೆ ನಕ್ಷತ್ರ ಮಖಾ ಆರಂಭದೊಂದಿಗೆ ಬಿರುಸು ಪಡೆದಿದೆ.

Advertisement

ಉತ್ತರ ಕರ್ನಾಟಕದ ಬೆಳಗಾವಿ ಮತ್ತು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವರುಣನ ಪ್ರತಾಪ ಬಲವಾಗಿಯೇ ಇದೆ.

ಮಹಾರಾಷ್ಟ್ರದಲ್ಲಿಯೂ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಚಿಕ್ಕೋಡಿ, ಕಾಗವಾಡ, ರಾಯಬಾಗ, ಅಥಣಿ, ರಾಮದುರ್ಗ ತಾಲೂಕುಗಳಲ್ಲಿ ಪ್ರವಾಹದ ಆತಂಕ ಆವರಿಸಿದೆ.

ಘಟಪ್ರಭಾ, ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಪ್ರವಾಹದಿಂದ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಸೇತುವೆಗಳು ನೀರಿನಲ್ಲಿ ಮುಳುಗಿವೆ. ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಅಲ್ಲಿನ ಕೊಯ್ನಾ ಮತ್ತಿತರ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಕೃಷ್ಣಾ ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಿದೆ.

Advertisement

11 ಸೇತುವೆ ಮುಳುಗಡೆ
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಭೀತಿ ಮತ್ತೆ ಎದುರಾಗಿದೆ. ಜಿಲ್ಲೆಯ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಭೂಮಿಗೆ ನೀರು ನುಗ್ಗಿ ಬೆಳೆಗಳು ಮುಳುಗಿವೆ. ಘಟಪ್ರಭಾ ನದಿಯ ಕೆಳ ಮಟ್ಟದ 11 ಸೇತುವೆಗಳು ರವಿವಾರ ಮತ್ತೆ ಜಲಾವೃತಗೊಂಡಿವೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ರವಿವಾರ ನೀರು ಹರಿ ಬಿಟ್ಟದ್ದರಿಂದ ಶೀಲಹಳ್ಳಿ ಸೇತುವೆ ಮತ್ತೆ ಮುಳುಗಿದೆ.


ರಾಯಚೂರಿಗೆ ‘ಮಹಾ’ ಹೊಡೆತ
ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಂದಲೂ ಹೆಚ್ಚು ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಇದರಿಂದ ರಾಯಚೂರು ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಮುಂಜಾಗ್ರತೆಯ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.

ಚಿಕ್ಕಮಗಳೂರಿನಲ್ಲಿ ಪ್ರವಾಹ ಭೀತಿ
ಚಿಕ್ಕಮಗಳೂರು ಜಿಲ್ಲೆಯಲ್ಲೂ ಮತ್ತೆ ಮಳೆ ಸುರಿಯಲಾರಂಭಿಸಿದ್ದು, ಆತಂಕ ಮೂಡಿಸಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ನಿರಂತರ ಮಳೆ ಮುಂದುವರಿದಿದೆ. ರವಿವಾರದ ಮಳೆಗೆ ಮೂಡಿಗೆರೆ ತಾಲೂಕಿನ ಹೊರಟ್ಟಿ ಮತ್ತು ಕಲ್ಮನೆ ಗ್ರಾಮದಲ್ಲಿ ಮನೆ ಕುಸಿದು ಬಿದ್ದಿವೆ. ತುಂಗಾ, ಭದ್ರಾ, ಹೇಮಾವತಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ರವಿವಾರ ಬೆಳಗ್ಗೆಯಿಂದ ಎಡಬಿಡದೆ ಸುರಿಯುತ್ತಿದೆ.


ಉತ್ತರ ಭಾರತದಲ್ಲೂ  ಸಂಕಷ್ಟ
ಉತ್ತರ ಭಾರತದ ಹಲವು ರಾಜ್ಯಗಳಲ್ಲಿಯೂ ಮುಂಗಾರು ಬಿರುಸಾಗಿದೆ. ಒಡಿಶಾ, ಆಂಧ್ರಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ರಾಜ್ಯಗಳಲ್ಲಿಯೂ ಭಾರೀ ಮಳೆಯಾಗುತ್ತಿದೆ. ಒಡಿಶಾದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದಲ್ಲಿ ಗೋದಾವರಿ ನದಿ ಉಕ್ಕಿಹರಿಯುತ್ತಿದ್ದು, ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಸಾವಿರಾರು ಹಳ್ಳಿಗಳು ಮುಳುಗಡೆಯಾಗಿವೆ. ಛತ್ತೀಸ್‌ಗಢದ ಬಸ್ತಾರ್‌ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ನೆರೆ ದೇಶ ನೇಪಾಲವೂ ಮಳೆ, ಪ್ರವಾಹ, ಭೂಕುಸಿತಗಳಿಂದ ತತ್ತರಿಸಿದ್ದು, ಕಳೆದ ಎರಡು ತಿಂಗಳುಗಳಲ್ಲಿ ಮಳೆ ಸಂಬಂಧಿ ದುರ್ಘ‌ಟನೆಗಳಿಂದ 227 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next