Advertisement
ಬುಧವಾರ ಬೆಳಗ್ಗೆ ಉಪ್ಪಿನಂಗಡಿಯಲ್ಲಿ 7 ಮಿ.ಮೀ. ಮಳೆ ದಾಖಲಾಯಿತು. ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ತುಂಬಿ ಹರಿಯುತ್ತಿವೆ. ದೇವಾಲಯದಿಂದ ನದಿಗಿಳಿಯುವ 40 ಮೆಟ್ಟಿಲುಗಳಲ್ಲಿ ಬುಧವಾರ ಸಂಜೆ ಐದೂವರೆ ಮೆಟ್ಟಿಲುಗಳಷ್ಟೇ ಕಾಣುತ್ತಿದ್ದವು. ರಾತ್ರಿ 8.30ರ ಸುಮಾರಿಗೆ 8 ಮೆಟ್ಟಿಲು ಕಾಣಿಸುತ್ತಿದ್ದವು. 11ರ ಸುಮಾರಿಗೆ ನೀರು ಮತ್ತಷ್ಟು ಇಳಿಕೆಯಾಗಿ 11 ಮೆಟ್ಟಿಲುಗಳು ಕಾಣಿಸತೊಡಗಿದವು. ಗುರುವಾರ ಬೆಳಗ್ಗೆ ಉಪ್ಪಿನಂಗಡಿಯಲ್ಲಿ 134.6 ಮಿ.ಮೀ. ಮಳೆ ದಾಖಲಾಗಿದ್ದು, ಬಳಿಕ ಬಿಡುವು ನೀಡಿತ್ತು. ಆದರೂ ನದಿಗಳಲ್ಲಿ ನೀರು ಏರತೊಡಗಿದ್ದು, ಬೆಳಗ್ಗೆ 8ರ ಸುಮಾರಿಗೆ ನಾಲ್ಕು ಮೆಟ್ಟಿಲುಗಳು ಮಾತ್ರ ಕಾಣಿಸುತ್ತಿದ್ದವು. 10 ಗಂಟೆಗೆ ಒಂದು ಮೆಟ್ಟಿಲು ಮಾತ್ರ ಕಾಣಿಸಿ, ಸಂಗಮದ ನಿರೀಕ್ಷೆ ಹಾಗೂ ನೆರೆ ಭೀತಿ ಮೂಡಿತು.
ಒಂದೆಡೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದರೆ, ಇನ್ನೊಂದೆಡೆ ಉಪ್ಪಿನಂಗಡಿಗೆ ಜಿಲ್ಲಾಡಳಿತ ನೀಡಿದ್ದ ಬೋಟ್‌ನ ಯಂತ್ರ ಕೈಕೊಟ್ಟಿತ್ತು. ಗೃಹ ರಕ್ಷಕ ದಳದ ವಿಪತ್ತು ನಿರ್ವಹಣ ತಂಡದಲ್ಲಿದ್ದ ಬೋಟ್ ಹಾಗೂ ಮಂಗಳೂರಿನಿಂದ ಗೃಹರಕ್ಷಕ ದಳದ ಈಜುಗಾರರು ಹಾಗೂ ಬೋಟನ್ನು ತರಿಸಿ, ಸನ್ನದ್ಧ ಸ್ಥಿತಿಯಲ್ಲಿರಿಸಲಾಯಿತು. ಹಲವು ಪ್ರದೇಶ ಜಲಾವೃತ
ಪಂಜಳದಲ್ಲಿ ಹಾಗೂ ಹಳೆಗೇಟಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ನದಿ ನೀರು ಬಂದಿದ್ದು, ಹೆದ್ದಾರಿಗೆ ನುಸುಳುವ ಸಾಧ್ಯತೆ ಗೋಚರಿಸಿತ್ತು. ಬಳಿಕ ನೆರೆ ತುಸು ಇಳಿದಿದ್ದರಿಂದ ಅಪಾಯವಾಗಲಿಲ್ಲ. ಉಪ್ಪಿನಂಗಡಿಯ ಕೆಂಪಿಮಜಲು ಪ್ರದೇಶದಲ್ಲಿ ನದಿ ಪಾತ್ರದ ತೋಟಗಳಿಗೆ ನದಿ ನೀರು ನುಗ್ಗಿತ್ತು. ಹಳೆಗೇಟಿನಲ್ಲಿ ಐತ ಮೇರ ಅವರ ಮನೆ ಪ್ರದೇಶಕ್ಕೆ ನೀರು ನುಗ್ಗಿದ್ದರಿಂದ ಕುಟುಂಬವನ್ನು ಸ್ಥಳಾಂತರಿಸಲಾಯಿತು.
Related Articles
ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳ ನೀರು ಉಭಯ ದಿಕ್ಕಿನಲ್ಲಿ ದೇವಾಲಯದ ಆವರಣ ಪ್ರವೇಶಿಸಿ ಒಂದಕ್ಕೊಂದು ಸಂಧಿಸಿ ದೇವಾಲಯದೊಳಗೆ ಪ್ರವೇಶ ದ್ವಾರದ ಹತ್ತಿರ ಬಂದರೆ ಸಂಗಮ ಆಯಿತೆಂದು ಲೆಕ್ಕ. 2013ರ ಜು. 4ರ ಬಳಿಕ ಇಲ್ಲಿ ಸಂಗಮ ಆಗಿಲ್ಲ. ಈ ಬಾರಿ ಸಂಗಮವಾಗುವ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಬೆಳಗ್ಗೆಯಿಂದಲೇ ಜನಪ್ರವಾಹ ದೇವಾಲಯದತ್ತ ಹರಿದುಬಂದಿತ್ತು. ಶಾಸಕ ಸಂಜೀವ ಮಠಂದೂರು, ಪುತ್ತೂರು ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್ ಅನಂತ ಶಂಕರ್ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.
Advertisement
ಎಚ್ಚರಿಕೆ ಸಂದೇಶನೆರೆ ಭೀತಿ ಆವರಿಸುತ್ತಿದ್ದಂತೆಯೇ ಉಪ್ಪಿನಂಗಡಿ ಗ್ರಾ.ಪಂ. ವತಿಯಿಂದ ವಾಹನದಲ್ಲಿ ಸೈರನ್ ಮೊಳಗಿಸಿ, ನದಿ ಪಾತ್ರದ ಜನತೆ ಎಚ್ಚರಿಕೆಯಿಂದಿರಲು ಸೂಚಿಸಿತು. ಅಪರಾಹ್ನ ಮೂರು ಗಂಟೆಯ ಬಳಿಕ ನದಿ ನೀರು ಇಳಿಯತೊಡಗಿದ್ದು, ಸಂಜೆ 5ರ ವೇಳೆಗೆ ಐದು ಮೆಟ್ಟಿಲುಗಳು ಗೋಚರಿಸಿದವು. ಸ್ಥಳದಲ್ಲಿ ಪ್ರಭಾರ ಕಂದಾಯ ನಿರೀಕ್ಷಕ ರಮಾನಂದ ಚಕ್ಕಡಿ, ಉಪ್ಪಿನಂಗಡಿ ಗ್ರಾಮಕರಣಿಕ ಚಂದ್ರ ನಾಯ್ಕ, ಗ್ರಾಮ ಸಹಾಯಕ ಯತೀಶ್, ಉಪ್ಪಿನಂಗಡಿ ಉಪನಿರೀಕ್ಷಕ ನಂದಕುಮಾರ್ ಹಾಗೂ ಸಿಬಂದಿ, ಗೃಹ ರಕ್ಷಕ ದಳದ ವಿಪತ್ತು ನಿರ್ವಹಣ ದಳದ ಘಟಕಾಧಿಕಾರಿ ದಿನೇಶ್ ಮತ್ತವರ ತಂಡ, ನುರಿತ ಈಜುಗಾರರಾದ ಮುಹಮ್ಮದ್ ಬಂದಾರು, ಇಸ್ಮಾಯಿಲ್ ಹಾಜಿ, ದೋಣಿ ನಡೆಸುವ ಚೆನ್ನಪ್ಪ, ಮಂಗಳೂರಿನಿಂದ ಆಗಮಿಸಿದ ಗೃಹರಕ್ಷಕ ದಳದ ಈಜುಗಾರರಾದ ರಮೇಶ್ ಭಂಡಾಡಿ, ಬಶೀರ್ ಅಹ್ಮದ್, ಉಪ್ಪಿನಂಗಡಿ ಗ್ರಾ.ಪಂ. ಸಿಬಂದಿ ತಂಡ ದೇವಾಲಯದ ಬಳಿ ಬೀಡು ಬಿಟ್ಟಿದ್ದು, ಅನಾಹುತ ಸಂಭವಿಸದಂತೆ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಕುಟುಂಬದ ರಕ್ಷಣೆ
ಕುಮಾರಧಾರಾ ಹೊಸ ಸೇತುವೆಯ ಬಳಿಯಿರುವ ಜೋಪಡಿಯಲ್ಲಿ ಬೀಡು ಬಿಟ್ಟಿದ್ದ ಕುಟುಂಬವೊಂದು ಅಪಾಯಕ್ಕೆ ಸಿಲುಕಿದ್ದು, ಸುತ್ತಲೂ ನೀರು ಅವರಿಸಿದ್ದರಿಂದ ಹೊರಬರಲು ಸಮ್ಮತಿಸಿರಲಿಲ್ಲ. ಪೊಲೀಸರೊಂದಿಗೆ ಕಂದಾಯ ಇಲಾಖೆ ಅಧಿಕಾರಿಗಳು, ಪಂಚಾಯತ್ ಸಿಬಂದಿ ಮಹಾಲಿಂಗ, ಇಸಾಕ್ ಹಾಗೂ ಶ್ರೀನಿವಾಸ ಸ್ಥಳಕ್ಕೆ ತೆರಳಿ ರಕ್ಷಿಸಿದರು.